ಕಾಂಗ್ರೆಸ್ ಆಕ್ಷೇಪ ನಿರ್ಲಕ್ಷಿಸಿ ಕೇಂದ್ರದಿಂದ ಶೀಘ್ರ ಸಿಬಿಐ ಮುಖ್ಯಸ್ಥರ ಘೋಷಣೆ

Update: 2019-02-02 18:15 GMT

ಹೊಸದಿಲ್ಲಿ, ಫೆ. 2: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯ ಸದಸ್ಯರಾಗಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆಕ್ಷೇಪ ನಿರ್ಲಕ್ಷಿಸಿ ಕೇಂದ್ರ ಸರಕಾರ ಶೀಘ್ರ ಸಿಬಿಐಯ ಮುಂದಿನ ಮುಖ್ಯಸ್ಥರನ್ನು ಘೋಷಿಸುವ ಸಾಧ್ಯತೆ ಇದೆ.

ಶುಕ್ರವಾರ ನಡೆದ ಸಮಿತಿಯ ಎರಡನೇ ಸಭೆಯಲ್ಲಿ ಕೇಂದ್ರ ಸರಕಾರ ಮುಂದಿರಿಸಿದ ಕೆಲವು ಅಧಿಕಾರಿಗಳ ಹೆಸರಲ್ಲಿ ಒಬ್ಬರನ್ನು ಸಿಬಿಐ ನಿರ್ದೇಶಕರ ಹುದ್ದೆಗೆ ನಿಯೋಜಿಸುವ ಸಾಧ್ಯತೆ ಇದೆ. ಆದರೆ, ಮೂವರು ಸದಸ್ಯರ ಸಮಿತಿಯ ಭಾಗವಾಗಿದ್ದ ಖರ್ಗೆ ಅವರು ಈ ಹೆಸರಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಿಬಿಐಯ ಮುಖ್ಯಸ್ಥರ ಹುದ್ದೆಗೆ 1984ರ ಬ್ಯಾಚ್‌ನ ಹಿರಿಯ ಐಪಿಎಸ್ ಅಧಿಕಾರಿಗಳಾಗಿರುವ ಜಾವೇದ್ ಅಹ್ಮದ್, ರಜನಿಕಾಂತ್ ಮಿಶ್ರಾ ಹಾಗೂ ಎಸ್.ಎಸ್ ದೇಸ್ವಾಲ್ ಸ್ಪಧೆರ್ಯಲ್ಲಿದ್ದಾರೆ.

ಉತ್ತರಪ್ರದೇಶ ಕೇಡರ್ ಅಧಿಕಾರಿಯಾಗಿರುವ ಅಹ್ಮದ್ ಪ್ರಸ್ತುತ ಇಲ್ಲಿನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ ಆ್ಯಂಡ್ ಫೋರೆನ್ಸಿಕ್ ಸಯನ್ಸ್‌ನ ಮುಖ್ಯಸ್ಥರಾಗಿದ್ದಾರೆ. ಅಹ್ಮದ್ ಅವರ ಕೇಡರ್ ಹಾಗೂ ಬ್ಯಾಚ್‌ಮೇಟ್ ಆಗಿರುವ ಮಿಶ್ರಾ ಗಡಿ ಭದ್ರತಾ ಪಡೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹರ್ಯಾಣ ಕೇಡರ್ ದೇಸ್ವಾಲ್ ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್‌ನ ಪ್ರಧಾನ ನಿರ್ದೇಶಕ. ಸಿಬಿಐ ಮುಖ್ಯಸ್ಥರ ನೇಮಕದ ಬಗ್ಗೆ ತೀರ್ಮಾನ ಕೈಗೊಳ್ಳಲು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಸಭೆ ನಡೆಯಿತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡಿದ್ದರು. ಒಂದು ಗಂಟೆಯಲ್ಲಿ ಪೂರ್ಣಗೊಂಡ ಸಭೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಜನವರಿ 24ರಂದು ನಡೆದ ಸಮಿತಿಯ ಸಭೆ ಕೂಡ ಇದೇ ರೀತಿ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News