ಯುದ್ಧ ಭೂಮಿಯಲ್ಲಿ ಗೆದ್ದ ಅನುಭವ!

Update: 2019-02-03 03:08 GMT

ಕ್ಯಾನ್ಸರ್‌ಗೆ ನಾನು ಥ್ಯಾಂಕ್ಸೃ್ ಹೇಳಲು ಬಯಸುತ್ತೇನೆ. ಏಕೆ ಗೊತ್ತಾ. ಕ್ಯಾನ್ಸರ್‌ನಿಂದ ನನಗೆ ಒಳ್ಳೆಯದೂ ಆಗಿದೆ. ಬಿಸಿಲಿಗೆ ಹೋದಾಗ ಚರ್ಮ ತುರಿಕೆ, ಮೊಡವೆ ಸಮಸ್ಯೆಯಂಥ ದೀರ್ಘ ಕಾಲದ ಸಮಸ್ಯೆಗಳು ನನ್ನಿಂದ ದೂರವಾಗಿವೆ. ಇದಲ್ಲವೇ ಖುಷಿ. ಜೊತೆಗೆ ನಾನು ಅಳವಡಿಸಿಕೊಂಡ ಆಹಾರ ಕ್ರಮ, ಯೋಗ, ವಾಕಿಂಗ್ ಇವೆಲ್ಲದರಿಂದ ಇಂದು ನನ್ನ ಜೀವನಕ್ರಮವೇ ಬದಲಾಗಿದೆ. ಜೀವನಕ್ಕೊಂದು ಶಿಸ್ತು ಬಂದಿದೆ.

2016ರ ಜನವರಿ ತಿಂಗಳಲ್ಲಿ ಬಲಸ್ತನದಲ್ಲಿ ಇದ್ದಕ್ಕಿದ್ದಂತೆ ಗಂಟೊಂದು ಕೈಗೆ ಹತ್ತಿದ್ದು ಅನುಭವಕ್ಕೆ ಬಂದಿತು. ಹಾಲು ಗ್ರಂಥಿ ಸ್ರವಿಸುವಿಕೆಯಲ್ಲಿ ಹೆಚ್ಚು ಕಮ್ಮಿ ಆದರೂ ಸ್ತನದಲ್ಲಿ ಗಡ್ಡೆ ತರಹ ಆಗುತ್ತೆ ಎನ್ನೋ ಪ್ರಕರಣ ಕೇಳಿದ್ದೆ. ಬಹುಶಃ ನನಗೂ ಹಾಗೇ ಇರಬಹುದು ಅಂದುಕೊಂಡು ಸುಮ್ಮನಾದೆ. ಆದರೂ ಮನದಲ್ಲೊಂದು ದುಗುಡ ಮೊಳಕೆಯೊಡೆದಿತ್ತು. ಅದು ಕ್ಯಾನ್ಸರ್ ಗಡ್ಡೆ ಇರಬಹುದೇ? ಎಂಬ ಆತಂಕ ಮನೆಮಾಡಿತ್ತು. ನೋವಿಲ್ಲ, ಸುಸ್ತಿಲ್ಲ. ಗಂಟು ಅನ್ನೋದೊಂದು ಬಿಟ್ಟರೆ ಮಿಕ್ಕಂತೆ ಸಹಜ ವಾಗಿಯೇ ಇದ್ದುದರಿಂದ ಅದು ಆಗಲಿಕಿಲ್ಲ ಎಂಬ ಗಟ್ಟಿ ಮನೋಭಾವ ನನ್ನದಾಗಿತ್ತು. ಹಾಗೇ ದಿನ ದೂಡಿದೆ. ಒಂದಲ್ಲ ಎರಡು ತಿಂಗಳಲ್ಲ. ಜನವರಿಯಿಂದ ನವೆಂಬರ್‌ವರೆಗೂ ಆತಂಕ, ದುಗುಡಗಳ ಜೊತೆ ಜೊತೆಗೆ ನನ್ನ ವೃತ್ತಿ ಮತ್ತು ನಿತ್ಯ ಜೀವನ ನಿರಾತಂಕವಾಗಿ ಸಾಗಿತ್ತು. ಮನೆಯಲ್ಲೂ ಯಾರಲ್ಲೂ ಹೇಳಿರಲಿಲ್ಲ. ಆದರೆ ನವೆಂಬರ್‌ನ ಆರಂಭ ದಲ್ಲಿ ಸ್ತನದ ನಿಪ್ಪಲ್ ಒಳಕ್ಕೆ ಎಳೆಯಲ್ಪಟ್ಟಿದ್ದು ಗಮನಕ್ಕೆ ಬಂದಿದ್ದೇ ನನಗದು ಕ್ಯಾನ್ಸರ್ ಅನ್ನೋದು ಖಚಿತವೆನಿಸಿತು. ಇನ್ನು ಮುಚ್ಚಿಟ್ಟು ಪ್ರಯೋಜನವಿಲ್ಲ ಎಂದು ಅಮ್ಮನೆದುರು ಹೀಗೊಂದು ಗಂಟಾಗಿದೆ ಎಂದು ಹೇಳಿದೆ. ಅಮ್ಮನೋ ಒಂದೇ ಕ್ಷಣಕ್ಕೆ ದಿಗಿಲಿಗೊಳಗಾದರು. ಅವರಿಗೂ ನಾನೇ ಸಮಾಧಾನ ಹೇಳಿದೆ. ಅಮ್ಮಾ ಎಲ್ಲ ಗಂಟೂ ಕ್ಯಾನ್ಸರ್ ಅನ್ನೋ ತೀರ್ಮಾನಕ್ಕೆ ಬರೋದು ಸರಿಯಲ್ಲ. ಯಾವುದಕ್ಕೂ ಸ್ಕ್ಯಾನಿಂಗ್ ಮಾಡಿಸಿ ನೋಡೋಣ ಅಂದೆ. ವಾರದ ರಜೆವರೆಗೂ ಕಾದು ಸ್ಕ್ಯಾನಿಂಗ್‌ಗೆಹೋದೆ. ಮ್ಯಾಮೋಗ್ರಫಿ ಜೊತೆಗೆ ಗಡ್ಡೆಯ ರಕ್ತದ ಪರೀಕ್ಷೆ. ಎಡ- ಬಲ ಎರಡರದ್ದೂ ಪರೀಕ್ಷೆ ಮುಗಿಯಿತು. ರಿಪೋರ್ಟ್ ಸಂಜೆ ವೇಳೆಗೆ ಸಿಗೋದಿತ್ತು. ಅಲ್ಲಿವರೆಗೂ ಕಾಯುವುದು ಅನಿವಾರ್ಯ. ಆದರೆ ಅದಾಗಲೇ ನನ್ನ ಮನಸ್ಸು ಕ್ಯಾನ್ಸರ್ ಅಂತ ರಿಪೋರ್ಟ್ ಕೊಟ್ಟಾಗಿತ್ತು. ಆದರೆ ವೈದ್ಯಕೀಯವಾಗಿ ಘೋಷಣೆ ಆಗಬೇಕಿತ್ತಲ್ಲ. ಸಂಜೆವರೆಗೂ ಕಾದೆ. ಅಲ್ಲಿ ಸ್ಕ್ಯಾನಿಂಗ್ ರಿಪೋರ್ಟ್ ಕೊಡುವ ಮೇಡಂ ನನಗೆ ಗೊತ್ತಿದ್ದವರೆ ಆಗಿದ್ದರು. ಆದರೆ ಅವರು ಸಹಿ ಹಾಕಿದ ಆ ಮೆಡಿಕಲ್ ರಿಪೋರ್ಟ್ ನನ್ನದು ಅನ್ನೋದು ತಕ್ಷಣಕ್ಕೆ ಅವರ ಗಮನಕ್ಕೆ ಹೋಗಿರಲಿಲ್ಲ.ಅದೇ ಸಮಯಕ್ಕೆ ನೋಟ್ ಬ್ಯಾನ್ ಗದ್ದಲವೂ ಎದ್ದಿತ್ತು. ಅಮ್ಮನ ಮನ ದಲ್ಲಿ ದುಃಖ ಮಡುಗಟ್ಟಿದ್ದು ಅವರ ಮೊಗದಲ್ಲೇ ಕಾಣುತ್ತಿತ್ತು. ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ತನ್ನ ಆಟಾಟೋಪ ಮುಂದುವರಿಸಿದ್ದ ನನ್ನ ಐದು ವರ್ಷದ ಮಗನನ್ನು ಸಂಭಾಳಿಸುವುದರಲ್ಲೇ ಅಮ್ಮನ ಸಮಯ ಕಳೆಯುತ್ತಿತ್ತು.

ರಿಪೋರ್ಟ್ ಕೈಗೆ ಸಿಗುತ್ತಲೇ ಕ್ಯಾಬಿನ್‌ನಲ್ಲಿದ್ದ ಮೇಡಂ ಜೊತೆ ಮಾತನಾಡಲು ಕುಳಿತೆ. ನಮ್ಮನೆಯವರೂ ಬಂದು ಕುಳಿತರು. ಅಲ್ಲಿವರೆಗೂ ಅವರಿಗೂ ಅದು ನನ್ನದೇ ರಿಪೋರ್ಟ್ ಅನ್ನೋ ಕಲ್ಪನೆ ಯಿರಲಿಲ್ಲ. ರಿಪೋರ್ಟ್ ನಿಮ್ಮದಾ ಕೃಷ್ಣಿ... ಅಂಥ ಉದ್ಗಾರ ಹೊರ ಹಾಕಿದವರೇ, ಎರಡೂ ಕಡೆ ಸಮಸ್ಯೆ ಇದೆ ಅಂದರು. ನಾನು ಬಲಸ್ತನವೊಂದೇ ಕಡೆ ಅಂದೊಂಡಿದ್ದೆ. ಆದರೆ ಎಡ ಸ್ತನದಲ್ಲೂ ನೆನೆಸಿದ ಕಡಲೆಕಾಳಿನ ಗಾತ್ರದ ಗಂಟು ಅದಾಗಲೇ ಕೈಗೆ ಹತ್ತಲು ಶುರುವಾಗಿತ್ತು. ಮೇಡಂ ಮತ್ತೊಮ್ಮೆ ತಮ್ಮ ಖಾಸಗಿ ರೂಮಿಗೆ ಕರೆದೊಯ್ದು ಎಡಸ್ತನದ ಗಂಟಿದ್ದ ಭಾಗಕ್ಕೆ ಸೂಜಿ ಚುಚ್ಚಿ ರಕ್ತ ತೆಗೆದು ಮತ್ತೊಮ್ಮೆ ಪರೀಕ್ಷೆಗೊಳ ಪಡಿಸಿದರು. ಯೆಸ್. ಇಟ್ಸ್ ಕನ್ಫರ್ಮ್. ಬಲಭಾಗದ್ದು ಮೂರನೇ ಸ್ಟೇಜ್‌ಗೆ ಹೋಗಿಯಾಗಿತ್ತು. ಒಟ್ಟಿನಲ್ಲೂ ಎರಡೂ ಕಡೆ ಕ್ಯಾನ್ಸರ್ ಅನ್ನೋದನ್ನು ವರದಿ ಹೇಳಿತ್ತು. ಅದನ್ನೂ ಧನಾತ್ಮಕವಾಗಿಯೇ ಸ್ವೀಕರಿಸಿದೆ.

ಮೇಡಂ ನನ್ನನ್ನೇ ದಿಟ್ಟಿಸಿ ನೋಡಿದರು. ನಾನೂ ಅವರನ್ನು ಗಮನಿಸುತ್ತಲೇ ದೀರ್ಘವಾಗಿ ಉಸಿರು ಎಳೆದು ಹೊರಹಾಕಿದೆ. ಒಮ್ಮೆ ಉಗುಳು ನುಂಗಿ ಕೊಂಡೆ. ಅಷ್ಟೇ! ಮೇಡಂ ಧೈರ್ಯ ಹೇಳುತ್ತಲೇ ಸಾಗಿದರು. ಈಗೆಲ್ಲ ಕ್ಯಾನ್ಸರ್‌ಗೆ ಒಳ್ಳೊಳ್ಳೆ ಮೆಡಿಸಿನ್ ಇದೆ. ಕ್ಯೂರ್ ಆಗುತ್ತೆ. ಬಟ್ ಟ್ರೀಟ್ಮೆಂಟ್ ತಗೊಳ್ಳು ವಾಗ ಹೇರ್ ಫಾಲ್ ಆಗುತ್ತದೆ. ಡೋಂಟ್ ವರಿ. ಮತ್ತೆಬರುತ್ತೆ. ಆಗ ಬೇಕಾದ್ರೆ ಬಾಬ್ ಕಟ್ ಮಾಡ್ಕೋ ಬಹುದು, ಬಾಯ್ ಕಟ್ ಮಾಡ್ಕೋಬಹುದು.... ಮೇಡಂ ಹೀಗೆ ಹೇಳುತ್ತಿದ್ದರೆ ನನಗೆ ತಮಾಷೆಯಾಗಿ ಕಂಡಿತು.

ಹೌದು, ರಿಪೋರ್ಟ್ ನೋಡಿ ಭಯಪಡಬೇಕಿದ್ದ ನನ್ನ ಮನದೊಳಗೆ ಮತ್ತಷ್ಟು ಧೈರ್ಯ ಮೂಡಿತ್ತು. ಮನದ ಒಳಗೆ ಬಚ್ಚಿಟ್ಟ ನೋವು, ಆತಂಕ ಬಹಿರಂಗಗೊಂಡಿತಲ್ಲ ಅನ್ನೋ ನಿರಾಳಭಾವ ಆ ಮನೋಧೈರ್ಯವನ್ನು ನನ್ನಲ್ಲಿ ಹುಟ್ಟುಹಾಕಿತ್ತು. ನಾನು ಧೈರ್ಯ ವಾಗಿದ್ದೆ ಸರಿ. ಆದರೆ ಚೇಂಬರ್ ಹೊರಗೆ ಕುಳಿತ ಅಮ್ಮ ಈ ವಿಷಯವನ್ನು ಹೇಗೆ ಸ್ವೀಕರಿಸಬಹುದು ಅನ್ನೋ ಸಣ್ಣ ಆತಂಕವಿತ್ತು. ಹೊರಗೆ ಬಂದವಳೆ ಅಮ್ಮಾ ಅದೇ ಹೌದು. ನೀನು ತಲೆಬಿಸಿ ಮಾಡ್ಕೋಬೇಡಾ ಅಂತ ಹೇಳುತ್ತಿದ್ದಂತೆ ಅಮ್ಮನ ಕಣ್ಣಲ್ಲಿ ದಳದಳನೆ ನೀರು ಹರಿಯಲು ಶುರುವಾಯಿತು.

 ‘ಈಗ ಅಂಥದ್ದು ಏನಾಯಿತು ಅಂತ ಅಳುತ್ತಿಯಮ್ಮ, ಸುಮ್ಮನಿರು. ಈಗೆಲ್ಲ ಔಷಧಿಯಿದೆ. ಎಲ್ಲ ಗುಣವಾಗುತ್ತೆ ಅಂಥ ಹೇಳುತ್ತಿದ್ದರೂ ಅಮ್ಮಆ ದೇವರಿಗೆ ಬೈಯಲು ಶುರುಮಾಡಿದ್ದರು. ಊರಿನಲ್ಲಿ ಅಜ್ಜ, ಅಜ್ಜಿ, ಮಾವಂದಿರು, ಚಿಕ್ಕಮ್ಮ, ಮಾಮಿ ಒಬ್ಬೊಬ್ಬರಿಗೆ ಸುದ್ದಿ ತಿಳಿಯುತ್ತಲೇ ಅವರಿಗೆಲ್ಲ ಆಕಾಶ ಕಳಚಿಬಿದ್ದ ಅನುಭವ. ಪಾಪ ನನ್ನ ಅಜ್ಜಿ, ಮಾವ ಅದೆಷ್ಟು ಬಾರಿ ಟಾಯ್ಲೆಟ್ ಹೋಗಿಬಂದರೆಂಬುದು ನಂತರ ತಿಳಿಯಿತು. ಅವರಿಗೆಲ್ಲ ನಾನೇ ಧೈರ್ಯ ಹೇಳಿದೆ. ಸುದ್ದಿ ತಿಳಿದ ನನ್ನ ಸಹೋದ್ಯೋಗಿ ಗಳು, ಸ್ನೇಹಿತರು ಎಲ್ಲರಿಗೂ ಶಾಕ್. ಆದರೆ ಅವರೆಲ್ಲ ನನ್ನ ಧೈರ್ಯ ನೋಡಿ, ನನ್ನಲ್ಲಿನ ಆತ್ಮವಿಶ್ವಾಸ ನೋಡಿ ಸಮಾಧಾನಪಟ್ಟು ಕೊಂಡರು. ನನಗೆ ಕ್ಯಾನ್ಸರ್ ಅನ್ನೋದು ಅಧಿಕೃತವಾಗಿ ಘೋಷಣೆ ಯಾದಾಗ ನಾನು ಒಂದಿಷ್ಟೂ ಧೈರ್ಯಗೆಡಲಿಲ್ಲ. ಕೊರಗಲಿಲ್ಲ. ನನಗ್ಯಾಕೆ ಈ ಕಾಯಿಲೆ ಎಂದು ದೇವರನ್ನು ಬೈಯಲಿಲ್ಲ. ನಾನು ಮಾಡಿದ್ದು ಒಂದೇ ಒಂದು ತಪ್ಪು ಎಂದರೆ ನನ್ನ ದೇಹದಲ್ಲಿ ಮೂಡಿದ ಗಂಟನ್ನು ಯಾರಿಗೂ ಹೇಳದೇ ನನ್ನೊಳಗೆ ಬಚ್ಚಿಟ್ಟಿದ್ದು. ಆದರೂ ನನಗೆ ಸ್ತನ ಕ್ಯಾನ್ಸರ್(Carninoma breast) ಎಂದು ಗೊತ್ತಾದ ನಂತರ ಮನಸ್ಸಿನ ಸ್ಥಿತಿಯನ್ನು ಕಾಯ್ದ್ದುಕೊಂಡೆ. ಅದರಿಂದ ಹೊರಬರುವ ಬಗ್ಗೆ ಯೋಚಿಸತೊಡಗಿದೆ. ಯಾವ ಬಗೆಯ ವೈದ್ಯಕೀಯ ಚಿಕಿತ್ಸೆಗೊಳಪಡಬೇಕು ಎನ್ನುವುದರಲ್ಲಿ ಮಗ್ನಳಾದೆ.

ಅದಕ್ಕಾಗಿ ಮಾನಸಿಕವಾಗಿ ಸಿದ್ಧಳಾದೆ. ದಿನಚರಿ ಯನ್ನು ಆ ರೀತಿಯಲ್ಲಿ ನಾನು ರೂಪಿಸಿಕೊಂಡೆ.

ಆಗಿನ್ನೂ ಟ್ರಿಟ್‌ಮೆಂಟ್ ಆರಂಭವಾಗಿರಲಿಲ್ಲ. ಬಯಾಪ್ಸಿ ರಿಪೋರ್ಟ್, ಪೆಟ್ ಸ್ಕ್ಯಾನ್ ಬಾಕಿ ಇತ್ತು. ಬಯಾಪ್ಸಿ ರಿಪೋರ್ಟ್ ಕೈಸೇರಲು 10 ದಿನಗಳೇ ಬೇಕಾಯ್ತು. ಆ ಅವಧಿಯಲ್ಲಿ ನಾನು ಸುಮ್ಮನೆ ಕೂರಲಿಲ್ಲ. ಕ್ಯಾನ್ಸರ್ ನಿವಾರಣಾ ಗಾಯತ್ರಿ ಮುದ್ರೆ ಯನ್ನು ದಿನಕ್ಕೆ ಮೂರು ಬಾರಿ ಮಾಡಲು ಶುರು ಮಾಡಿದೆ. ಧ್ಯಾನ ಮಾಡಿದೆ. ಪ್ರಾಣಾಯಾಮ ಮಾಡಿದೆ. ಒಟ್ಟಿನಲ್ಲಿ ಮನಸ್ಸನ್ನು ಶಾಂತರೀತಿಯಲ್ಲಿ ಕಾಯ್ದುಕೊಳ್ಳುವುದು ನನಗೆ ಮುಖ್ಯವಾಗಿತ್ತು. ಗಾಯತ್ರಿ ಮುದ್ರೆಯ ಫಲಿತಾಂಶ ಕಂಡು ನನಗೆ ಅಚ್ಚರಿಯಾಗಿದ್ದು ಸುಳ್ಳಲ್ಲ. ನನಗೇನು, ನನ್ನ ಸ್ಕ್ಯಾನಿಂಗ್ ರಿಪೋರ್ಟ್ ಸಿದ್ಧಪಡಿಸಿದ ಮೇಡಂಗೂ ಆಶ್ಚರ್ಯವಾಗಿದ್ದು ಸುಳ್ಳಲ್ಲ. ಅದೇನೆಂದರೆ ಎಡಸ್ತನದಲ್ಲಿದ್ದ ಕಡಲೆಕಾಳಿನ ಗಾತ್ರದ ಗಂಟು ಮಾಯವಾಗಿ ಹೋಗಿತ್ತು. ಅದಕ್ಕೆ ಗಾಯತ್ರಿ ಮುದ್ರೆಗಳನ್ನು ಬಿಡದೇ ಮಾಡಿದೆ. ಈಗಲೂ ಮಾಡುತ್ತಲೇ ಇದ್ದೇನೆ. ಅದು ನನ್ನನ್ನು ಕ್ಯಾನ್ಸರ್ ಭಯದಿಂದ 100% ದೂರವಿಟ್ಟಿದೆ.

ಟ್ರೀಟ್ಮೆಂಟ್ ಆರಂಭವಾದ ಮೇಲೆ ಪ್ರತಿ 21 ದಿನಗಳಿಗೊಮ್ಮೆ ಕಿಮೊ ಇಂಜೆಕ್ಷನ್ ಇರ್ತಿತ್ತು. ಇಂಜೆಕ್ಷನ್ ತಗೊಂಡು ಎರಡನೇ ದಿನ ರಾತ್ರಿ ಯಿಂದ ಅದರ ಪರಿಣಾಮ ಅನುಭವಕ್ಕೆ ಬರುತ್ತಿತ್ತು. ಮೂರು ದಿನಗಳ ಕಾಲ ಮನಸ್ಸು ಅಕ್ಷರಶಃ ಖಿನ್ನತೆಗೆ ಜಾರುತ್ತಿತ್ತು. ಮನಸ್ಸು ನನ್ನ ಹತೋಟಿ ಯಲ್ಲೇ ಇರುತ್ತಿರಲಿಲ್ಲ. ಮನಸ್ಸು ಪಾತಾಳದಲ್ಲೆಲ್ಲೋ ಜಾರಿ ಬಿದ್ದಅನುಭವ. ಅದನ್ನೆಲ್ಲ ಸರಿಮಾಡಿಕೊಳ್ಳಲು ಮತ್ತೆ ಧ್ಯಾನ, ಪ್ರಾಣಾಯಾ ಮವೇ ನನಗೆ ಸಹಾಯಕ್ಕೆ ಬಂದವು. ಮೊದಲ ಕಿಮೊ ತಗೊಂಡ ಎರಡನೇ ವಾರಕ್ಕೇ ತಲೆಕೂದಲು ಉದುರಲು ಆರಂಭಿಸಿತು. ಅದಕ್ಕೆ ಬಿಲ್ಕುಲ್ ತಲೆಕೆಡಿಸಿಕೊಳ್ಳಲಿಲ್ಲ. ನನ್ನನ್ನು ನೋಡಲು ಬಂದವರೆಲ್ಲ ಮರುಗುತ್ತಿದ್ದರು. ಅವರಿಗೆಲ್ಲ ನಾನೇ ಧೈರ್ಯ ಹೇಳಿ, ಅವರ ಮೊಗದಲ್ಲಿ ನಗುವರಳಿಸಿ ಕಳುಹಿಸುತ್ತಿದ್ದೆ. ಇಂತಹ ಸಮಯದಲ್ಲಿ ಕುಟುಂಬ ಸದಸ್ಯರ ಪಾತ್ರವೂ ಮುಖ್ಯವೆನಿಸಲಿದೆ. ಕುಟುಂಬದ ಸದಸ್ಯರೂ ಕಾಳಜಿ ವಹಿಸಿದರು.

ಅಮ್ಮ ನನ್ನ ಬ್ಯಾಕ್ಬೋನ್. ಏಕೆಂದರೆ ಇಂಜೆಕ್ಷನ್ ತೆಗೆದುಕೊಂಡು ಐದಾರು ದಿನಗಳವರೆಗೆ ಪರಿಸ್ಥಿತಿ ವಿಷಮಿಸುತ್ತಿತ್ತು. ಆಗ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡಿದರು. ಊಟ ಮೆಚ್ಚುತ್ತಿರಲಿಲ್ಲ. ದೇಹದಲ್ಲಿ ಉಷ್ಣ ಹೆಚ್ಚಾಗು ತ್ತಿತ್ತು. ಪಥ್ಯವೂ ಇರುತ್ತಿತ್ತು. ಅದನ್ನು ಅಮ್ಮ ಸಂಭಾಳಿಸಿದರು. ರಾಗಿ ಗಂಜಿ, ಮುಸಂಬಿ, ಕಿತ್ತಲೆ ಹಣ್ಣು, ಬೇಯಿಸಿದ ಮೊಟ್ಟೆ ಸಮಯಕ್ಕೆ ಸರಿಯಾಗಿ ಕೊಡುತ್ತಿದ್ದರು.ಐದನೇ ದಿನದಿಂದ ಮತ್ತೆ ಮಾಮೂಲು ಸ್ಥಿತಿಗೆ ಬರುತ್ತಿದ್ದೆ. ಇನ್ಫೆಕ್ಷನ್ ಆಗಬಾರದೆಂಬ ಒಂದೇ ಕಾರಣಕ್ಕೆ ಮನೆಯಿಂದ ಹೊರ ಹೋಗುತ್ತಿರಲಿಲ್ಲ. ಆದರೂ ಮೊದಲ ಕಿಮೊ ಇಂಜೆಕ್ಷನ್ ತೆಗೆದು ಕೊಂಡು ಒಂದು ವಾರ ಬಿಟ್ಟು ಕಚೇರಿಗೆ ಕೆಲಸಕ್ಕೆ ಸಹ ಹೋಗಿದ್ದೆ. ಆದರೆ ಕಚೇರಿಯಲ್ಲಿನ ಎಸಿಯಿಂದ ನನಗೆ ನೆಗಡಿ, ಕೆಮ್ಮು ಆರಂಭವಾಗಿ ಮನೆಯಲ್ಲೇ ಉಳಿದೆ. ನಂತರ ಎಂಟು ಕಿಮೊ, ಸರ್ಜರಿ ತನಕವೂ ಮನೆ ಯಲ್ಲೇ ಉಳಿದೆ. ರೇಡಿಯೇಷನ್ ಆರಂಭವಾಗುತ್ತಿದ್ದಂತೆ ಕೆಲಸಕ್ಕೆ ಹೋಗಲು ಆರಂಭಿಸಿದೆ. 33 ರೇಡಿಯೇಶನ್ ಅನ್ನು ಕಚೇರಿಗೆ ಹೋಗುತ್ತಲೇ ಪಡೆದುಕೊಂಡೆ.

ಕ್ಯಾನ್ಸರ್ ಚಿಕಿತ್ಸೆ ಪಡೆಯುವಾಗ ಮನಸ್ಸು ಖಿನ್ನತೆಗೆ ಜಾರಿದಾಗ ಈ ಜೀವ ಬೇಡಪ್ಪಾ ಅನ್ನೋವಷ್ಟರ ಮಟ್ಟಿಗೂ ಮನಸ್ಸು ವಾಲಿತ್ತು. ರಾತ್ರಿ ಇಡೀ ನಿದ್ದೆ ಹತ್ತಿರ ಸುಳಿಯದಿದ್ದಾಗ ಈ ಜೀವನ ಸಾಕು ಅನ್ನಿಸಿದ್ದು ಇತ್ತು. ಆ ಎಂಟು ಕಿಮೊ, ಶಸ್ತ್ರಚಿಕಿತ್ಸೆಯ ದಿನ ಹಾಗೂ ನಂತರದ ಒಂದು ದಿನ, ಪೆಟ್ ಸ್ಕಾನ್ ಇವೆಲ್ಲ ದೇಹ ಮನಸ್ಸನ್ನು ಹೈರಾಣಾಗಿಸಿದ್ದವು. ಒಮ್ಮಾಮ್ಮೆ ನನ್ನಷ್ಟಕ್ಕೆ ಅಂದುಕೊಳ್ಳುತ್ತಿದ್ದೆ. ಈ ಕಾಯಿಲೆ ನನ್ನ ಶತ್ರುಗಳಿಗೂ ಬರುವುದು ಬೇಡಪ್ಪಾ ಎಂದು. ಕ್ಯಾನ್ಸರ್‌ನಲ್ಲಿ ಉಳಿದ ಕಾಯಿಲೆಯಂತೆ ಒಮ್ಮೆ ಚಿಕಿತ್ಸೆ ಮಾಡಿ ಮುಗಿಯಿತು ಎಂಬ ಮಾತಿಲ್ಲ. ದೀರ್ಘ ಕಾಲದ ಚಿಕಿತ್ಸೆ, ಅದೊಂದು ತಪಸ್ಸು. ನಿಯಮಿತವಾಗಿ ಇಂಜೆಕ್ಷನ್, ಆ ನೋವು, ವೇದನೆ, ಖಿನ್ನತೆ ಎಲ್ಲವೂ ಪುನರಾವರ್ತನೆಯಾಗುತ್ತಿತ್ತು. ಅದಕ್ಕೆ ಮಾನಸಿಕವಾಗಿ ನಾವು ಸಿದ್ಧರಾಗುವುದು ಅನಿವಾರ್ಯ ಮತ್ತು ಅವಶ್ಯವಾಗಿತ್ತು. ಕಿಮೊ ಇಂಜೆಕ್ಷನ್‌ಗೆ ಕೆನಲ್ ಹಾಕಿಸಿಕೊಳ್ಳುವುದರಿಂದ (ಸೂಜಿ ಚುಚ್ಚಿಸಿಕೊಳ್ಳುವುದು) ಹಿಡಿದು ಇಂಜೆಕ್ಷನ್ ದೇಹ ಸೇರಲು ಆರೇಳು ತಾಸುಗಳೇ ಬೇಕಾಗುತ್ತಿದ್ದವು. ಕೆಲವೊಮ್ಮೆ ಇಂಜೆಕ್ಷನ್ ಅಡ್ಡ ಪರಿಣಾಮದಿಂದ ವಾಂತಿಯಾಗೋದು. ಊಟ, ತಿಂಡಿ ಮೆಚ್ಚುತ್ತಿ ರಲಿಲ್ಲ. ನೀರು ಕುಡಿದರೂ ಪೂರ್ತಿ ವಾಂತಿಯಾಗಿ ಹೋಗೋದು. ತುರಿಕೆ, ನವೆ, ಅಸಹನೆ ಎಲ್ಲವನ್ನೂ ತಾಳಿಕೊಳ್ಳುವುದು ಇಲ್ಲಿ ಅನಿವಾರ್ಯ. ಸರ್ಜರಿಯಾದ ದಿನವಂತೂ ಅದೆಷ್ಟು ಯಾತನೆ ಅನುಭವಿಸಿದ್ದೇನೆ ಅಂದರೆ ಅದನ್ನು ನೆನಪಿಸಿಕೊಳ್ಳಲು ನನಗಿಷ್ಟವಾಗದು. 33 ರೇಡಿಯೇಷನ್‌ಗಾಗಿ ಬೆಳಗ್ಗೆ 6ಕ್ಕೆ ಎದ್ದು ಸಾಲಿನಲ್ಲಿ ಕಾಯಬೇಕಿತ್ತು. ಇಂಥ ಅಸಹನೀಯ ಯಾತನೆಗಳನ್ನು ದಿಟ್ಟತನದಿಂದ ಎದುರಿಸುವುದು ಅಂದರೆ ಒಂಥರಾ ಯುದ್ಧಭೂಮಿಯಲ್ಲಿ ಶತ್ರುವಿನ ಜೊತೆ ಖಡ್ಗ, ಗುರಾಣಿ ಹಿಡಿದು ಹೋರಾಡಿದ ರೀತಿಯೇ ಸರಿ. ನನಗಂತೂ ಅಂಥ ಅನುಭೂತಿಯೇ ಆಗಿದ್ದು. ಕೊನೆಯಲ್ಲಿ ಜಯ ನನ್ನ ಪಾಲಾದಾಗ ಖುಷಿಯಲ್ಲದೇ ಮತ್ತೇನು? ಯುದ್ಧ ಭೂಮಿಯಲ್ಲಿ ಹೋರಾ ಡಿ ಗೆದ್ದ ಅನುಭವ.

ಕ್ಯಾನ್ಸರ್‌ಗೆ ನಾನು ಥ್ಯಾಂಕ್ಸೃ್ ಹೇಳಲು ಬಯಸುತ್ತೇನೆ. ಏಕೆ ಗೊತ್ತಾ. ಕ್ಯಾನ್ಸರ್‌ನಿಂದ ನನಗೆ ಒಳ್ಳೆಯದೂ ಆಗಿದೆ. ಬಿಸಿಲಿಗೆ ಹೋದಾಗ ಚರ್ಮ ತುರಿಕೆ, ಮೊಡವೆ ಸಮಸ್ಯೆಯಂಥ ದೀರ್ಘ ಕಾಲದ ಸಮಸ್ಯೆಗಳು ನನ್ನಿಂದ ದೂರ ವಾಗಿವೆ. ಇದಲ್ಲವೇ ಖುಷಿ. ಜೊತೆಗೆ ನಾನು ಅಳವಡಿಸಿಕೊಂಡ ಆಹಾರ ಕ್ರಮ, ಯೋಗ, ವಾಕಿಂಗ್ ಇವೆಲ್ಲದರಿಂದ ಇಂದು ನನ್ನ ಜೀವನಕ್ರಮವೇ ಬದಲಾಗಿದೆ. ಜೀವನಕ್ಕೊಂದು ಶಿಸ್ತು ಬಂದಿದೆ. ಮೊದಲಿಗಿಂತಲೂ ಫ್ರೆಶ್ ಆ್ಯಂಡ್ ಫಿಟ್ ಆಗಿದ್ದೇನೆ.

ಕ್ಯಾನ್ಸರ್ ಯಾರಿಗೆ ಬೇಕಾದರೂ ಬರಬಹುದು. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಮಾಣ ಏರುತ್ತಲೇ ಸಾಗಿದೆ. ದೇಹದಲ್ಲಿ ಯಾವುದೇ ತರಹದ ಗಡ್ಡೆಗಳು ಕಂಡುಬಂದರೂ ಅಲಕ್ಷಿಸದೇ ಪರೀಕ್ಷೆಗೊಳ ಪಡುವುದು ಮುಖ್ಯ. ಆ ಗಡ್ಡೆ ಕ್ಯಾನ್ಸರ್ ಅಲ್ಲ ಅಂದಾಗ ನಿರಾಳಭಾವ. ಒಂದು ವೇಳೆ ಅದೇ ಆಗಿದ್ದರೆ ಭಯ ಪಡಬೇಡಿ. ಕೊರಗಬೇಡಿ. ಧೈರ್ಯದಿಂದ ಎದುರಿಸಿ. ಆತ್ಮವಿಶ್ವಾಸದಿಂದ ಮುಂದುವರಿಯಿರಿ. ವೈದ್ಯಕೀಯ ಚಿಕಿತ್ಸೆ ಜೊತೆಗೆ ಮನೋಬಲ ಹಿಡಿದಿಡಲು ಸಹಾಯ ವಾಗಲು ಧ್ಯಾನ, ಪ್ರಾಣಾಯಾಮ, ಯೋಗ, ಗಾಯತ್ರಿ ಮುದ್ರೆಗಳನ್ನು ಮಾಡಿ. ಸೂಕ್ತ ಆಹಾರಕ್ರಮ ಅಳವಡಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಕೊರಗಬೇಡಿ. ಯಾವುದಕ್ಕೂ ನಾವು ಮಾನಸಿಕವಾಗಿ ಸಿದ್ಧರಾಗಬೇಕಿದೆ. ಕ್ಯಾನ್ಸರ್ ಕುರಿತು ಧನಾತ್ಮಕ ಯೋಚನೆ ಜೊತೆಗಿರಲಿ. ಏಕೆಂದರೆ ಇದೇ ಧನಾತ್ಮಕ ಧೋರಣೆ ಸ್ತನ ಕ್ಯಾನ್ಸರ್ ವಿರುದ್ಧದ ಗೆಲುವಿನಲ್ಲಿ ನನ್ನ ಮೊದಲ ಹೆಜ್ಜೆಯಾಗಿದ್ದು ಸುಳ್ಳಲ್ಲ.

Writer - ಕೃಷ್ಣಿ ಶಿರೂರ

contributor

Editor - ಕೃಷ್ಣಿ ಶಿರೂರ

contributor

Similar News