ಸಮಾಜಕ್ಕೆ ನನ್ನನ್ನು ಹತ್ತಿರವಾಗಿಸಿದ ಕ್ಯಾನ್ಸರ್

Update: 2019-02-03 06:27 GMT

1.ಸೆಪ್ಟಂಬರ್ 8, 2013ರ ಅದೊಂದು ಮಂಗಳವಾರ ಎಂದಿನಂತೆ ಶಾಲೆಯ ಕೆಲಸಮುಗಿಸಿ ಮನೆಗೆ ಬರುತ್ತಿದ್ದ ನನಗೆ ಸಣ್ಣ ಕೆಮ್ಮಿಂದು ಆರಂಭವಾಯಿತು. ಆರು ಕಿಲೋಮೀಟರ್ ಅಂತರದ ಮನೆ ತಲುಪು ವಷ್ಟರಲ್ಲಿ ಕನಿಷ್ಠ 60 ಬಾರಿ ಎಂದರೂ ಕಡಿಮೆಯೇ ಎನ್ನುವಷ್ಟರ ಮಟ್ಟಿಗೆ ಕೆಮ್ಮು. ಮನೆಸೇರುವಷ್ಟರಲ್ಲಿ ನನ್ನ ದೇಹವನ್ನು ಹಿಂಡಿ ಹಿಪ್ಪೆ ಮಾಡಿಬಿಟ್ಟಿತು. ದೇಹದ ಬೇನೆ ಹೆಚ್ಚಾಗುತ್ತಲೆ ಮೊಣಕಾಲಿನ ಸೆಳೆತ ಶುರುವಾಯಿತು. ಹೊಸಿಲು ದಾಟಿ ಮಡದಿ ಮಕ್ಕಳ ಮೊಗವನ್ನು ನೋಡುವಷ್ಟರಲ್ಲಿ ಜ್ವರದ ತಾಪ ತೀವ್ರವಾಗಿ ಕೆಮ್ಮು ಮಾರಾಯ ಹಳದಿ ಕಫರೂಪವನ್ನು ತಾಳಿ ಹೊರಹೋಗಬೇಕು ಎಂಬ ಸದ್ದನ್ನು ಸಾರುತ್ತಲೆ ಇದ್ದನು. ಎಂದಿನಂತಿಲ್ಲದ ಅಪ್ಪನನ್ನು ಮಾತನಾಡಿಸುವ ಧೈರ್ಯ ಮಾಡದ ಮಕ್ಕಳು, ಗಂಡನ ಬಾಡಿದ ಮುಖವನ್ನು ನೋಡಿದ ಮಡದಿ ಮಂಕಾಗಿ ಮೂಲೆ ಸೇರಿ ನನ್ನ ನೋವಿನ ಕಥೆಯನ್ನು ಕೇಳಿ ರಾತ್ರಿ ಕಳೆದರು.

2. ಮರುದಿನ ಬೆಳಗ್ಗೆ ಏಳುವಷ್ಟರಲ್ಲಿ ದೇಹ ನಿತ್ರಾಣ ಸ್ಥಿತಿಯನ್ನು ತಲುಪಿತ್ತು. ವೈದ್ಯರ ಬಳಿ ಹೋಗಿ ದೇಹವನ್ನು ಪರೀಕ್ಷಿಸಿದಾಗ ಕೈಗೊಂದು ಚೀಟಿ ಬರೆದಿಟ್ಟು ನಾನಾ ರೀತಿಯ ರಕ್ತದ ಪರೀಕ್ಷೆಗಳಿಗೆ ಆದೇಶಿಸಿದರು. ಪೆಥಾಲಜಿಯವರು ರಕ್ತವನ್ನು ನನ್ನಿಂದ ಹೀರಿಕೊಂಡು ಅರ್ಧ ತಾಸು ಬಿಟ್ಟು ಬನ್ನಿ ರಿಪೋರ್ಟು ಕೊಡುತ್ತೇವೆ ಎಂದಾಗ ನನಗೇನು ಮಲೇರಿಯಾವೋ ಅಥವಾ ವೈರಲ್ ಫೀವರ್ ಇರಬಹುದು ಎಂದು ಭಾವಿಸಿ ಮನೆಗೆ ಹೊರಟೆನು. ಒಂದು ತಾಸು ಬಿಟ್ಟು ರಿಪೋರ್ಟ್‌ನ್ನು ಕೇಳಲು ಬಂದಾಗ ಮತ್ತೊಮ್ಮೆ ನನ್ನ ರಕ್ತವನ್ನು ಪರೀಕ್ಷಿಸಬೇಕು ಎಂದರು ಪೆಥಾಲಜಿಸ್ಟರು.ರಕ್ತವನ್ನು ಕೊಟ್ಟು ಹೊರಬಂದು 10 ನಿಮಿಷದಲ್ಲಿ ಮತ್ತೆ ರಕ್ತ ಬೇಕೆಂದಾಗ ಒಲ್ಲದ ಮನಸ್ಸಿನಿಂದಲೇ ಬೇಸರದಿಂದ ಇದೇನು? ಆಟವಾಡಿಸುತ್ತಿದ್ದಿರೇನು? ಎಂದು ಗೊಣಗುತ್ತಲೇ ರಕ್ತಕೊಟ್ಟೆನು. ಹೀಗೆ 5 ನೇ ಬಾರಿಯ ರಕ್ತಪರೀಕ್ಷೆ ಪೂರ್ಣವಾದಾಗಲೇ ನನಗೆ ತಿಳಿದದ್ದು ನನ್ನದೇಹದಲ್ಲಿ ಪ್ಲೇಟ್‌ಲೆಟ್ಸ್‌ಗಳ ಸಂಖ್ಯೆ 9,000 ತಲುಪಿರುವುದು.

ರಕ್ತದ ಪರೀಕ್ಷೆಯ ರಿಪೋರ್ಟ್ ಹಿಡಿದುಕೊಂಡ ಪೆಥಾಲಜಿಸ್ಟ್, ನಿಮಗೆ ರಕ್ತದ ಕ್ಯಾನ್ಸರ್ ಇರಬಹುದು ಎಂದು ಅನುಮಾನಿಸುತ್ತಿದ್ದೇನೆ. ನೀವು ತುರ್ತಾಗಿ ಬೆಂಗಳೂರಿಗೆ ಹೋಗಬೇಕು ಎಂದರು . 84 ಕೆ.ಜಿ. ತೂಕದ, 56 ಇಂಚು ಎದೆಯ, 6 ಅಡಿಗೆ 2 ಇಂಚು ಕಡಿಮೆಯ ನೀಳಕಾಯ ಕೃಷ್ಣ ವರ್ಣದ ನನಗೆ ಕ್ಯಾನ್ಸರ್‌ಎಂದರೆ ನನ್ನಿಂದ ನಂಬಲು ಅದೇಕೆ? ಯಾರಿಂದಲೂ ಸಾಧ್ಯವಾಗಲಿಲ್ಲ. ಮರುಮಾತನಾಡದೆ ಮನೆಗೆ ಕಾಲುಕಿತ್ತೆ.ತಯಾರು ಮಾಡಿಕೊಂಡು ಅಂದಿನ ರಾತ್ರಿಯೇ ಮಡದಿಯೊಂದಿಗೆ ಬೆಂಗಳೂರಿಗೆ ಕಿದ್ವಾಯಿ ಆಸ್ಪತ್ರೆಗೆ ಹೋದೆ.

3. ಕಿದ್ವಾಯಿ ಆಸ್ಪತ್ರೆಯೊಂದು ರೋಗಿಗಳ ಜಾತ್ರೆ. ಆ ಜಾತ್ರೆ ಯೊಳಗಿನ ಜಂಜಾಟದಲ್ಲಿ ನನ್ನರಕ್ತದ ಪರೀಕ್ಷೆಗಳು ಸುಲಭ ಸಾಧ್ಯವಲ್ಲ ಎಂದುಕೊಂಡು ಪರಿಚಿತರೊಬ್ಬರ ಸಲಹೆ ಮೇರೆಗೆ ಎಚ್.ಸಿಜಿ ಎಂಬ ಖಾಸಗಿ ಆಸ್ಪತ್ರೆಗೆ ಹೋದೆ. ಆಸ್ಪತ್ರೆಯ ವೈದ್ಯರು ನನ್ನನ್ನು ತಪಾಸಣೆ ಮಾಡಿ ರಕ್ತ ಪರೀಕ್ಷೆಯನ್ನು ಮಾಡಿ ನನ್ನನು ಒಳಕರೆದರು. ನೋಡಿ ನಿಮಗೆ (Acute myeloid Leukaemia)ಎಂಬ ರಕ್ತದ ಕ್ಯಾನ್ಸರ್ ಕಾಯಿಲೆ ಇದೆ ಎಂದರು. ಕ್ಯಾನ್ಸರ್ ಇರುವುದು ಖಚಿತ ಎಂದ ಮೇಲೆ ಕ್ಷಣಕಾಲ ವೌನಕ್ಕೆ ಜಾರಿ ಹೋದೆ, ಮತ್ತೆ ಮಾತನ್ನು ಆರಂಭಿಸಿ ನಾನು ಈ ರೋಗದಿಂದ ಬದುಕುಬಹುದೇ? ಎಂದೆ. ನಾವೇನು ಗ್ಯಾರಂಟಿ ಕೊಡಲು ಸಾಧ್ಯವಿಲ್ಲ. ಆದರೆ ಪ್ರಯತ್ನ ಮಾಡುತ್ತೇವೆ ಎಂದರು ವೈದ್ಯರು. ನಾನು ಚಿಕಿತ್ಸೆ ಪಡೆಯದೆ ಮನೆಗೆ ಹೋದರೆ ಎಷ್ಟು ದಿನ ಬದುಕುಬಹುದು ಎಂದೆ! 15 ರಿಂದ 20 ದಿನ ಬದುಕಬಹುದು. ನೀವು ಕೊನೆಯ ಹಂತದಲ್ಲಿದ್ದೀರಿ ಎಂದರು ವೈದ್ಯರು. ನಾನು ಬದುಕುವ ಅವಕಾಶ ಶೇಕಡ ಎಷ್ಟಿದೆ ಎಂದೆ. ಶೇ. 30ರಷ್ಟಿದೆ ಸ್ವಲ್ಪ ಕಷ್ಟ ಎನಿಸುತ್ತದೆ. ಆದರೂ ಪ್ರಯತ್ನಿಸುತ್ತೇವೆ ಎಂದರು. ಹಣ ಎಷ್ಟು ಖರ್ಚಾಗ ಬಹುದು?ಎಂದೆ. 10 ರಿಂದ 15 ಲಕ್ಷ ರೂ. ಆಗಬಹುದು. 5 ಲಕ್ಷ ತುರ್ತಾಗಿ ಹೊಂದಿಸಬೇಕು ಎಂದರು. ವೈದ್ಯರು ಮತ್ತು ನನ್ನ ನಡುವಿನ ಸಂವಾದ ನಡೆಯುತ್ತಿದ್ದಾಗಲೇ ದೇಹ ಕುಸಿದಂತಾಗಿ ನಾಲಗೆಯಲ್ಲಿ ನೀರಿನಂಶ ಇಂಗಿ ಹೋಗಿ ಕೈ ಕಾಲುಗಳಲ್ಲಿ ಸೆಳೆತ ಹೆಚ್ಚಾಗಿ ಹೋಯಿತು.ನನ್ನ ಜೊತೆಗಿದ್ದ ನನ್ನ ಬಾವ ಮತ್ತು ಮಡದಿ ನನ್ನ ಸ್ಥಿತಿಯನ್ನು ಕಂಡು ಕಣ್ಣೀರು ಸುರಿಸುತ್ತಾ ವೈದ್ಯರಲ್ಲಿ ಹೇಗಾದರೂ ಸರಿ ಬದುಕಿಸಿ ಕೊಡಿ ಎಂದು ಅಂಗಲಾಚಿ ನನ್ನಚಿಕಿತ್ಸೆಗೆ ಏರ್ಪಾಡು ಮಾಡಿಬಿಟ್ಟರು.

4. ಕ್ಯಾನ್ಸರ್ ಎಂಬ ಪದ ನನ್ನಜೀವನದಲ್ಲಿ ಅಂದು ನನ್ನ ಕಿವಿಗೆ ಬಿದ್ದದ್ದು ಮೊದಲ ಬಾರಿಯಾಗಿತ್ತು. ಪುಸ್ತಕ, ಪತ್ರಿಕೆಗಳಲ್ಲಿ ಓದುತ್ತಿದ್ದ ವಿಚಾರ ನನ್ನಜೀವನದಲ್ಲೊಂದು ಆಟ ಶುರು ಮಾಡುತ್ತದೆ ಎಂದು ನಾನಾದರೂ ಊಹಿಸಿರಲಿಲ್ಲ. ಕ್ಯಾನ್ಸರ್ ನನ್ನದೇಹವನ್ನು ಹೊಕ್ಕಿದ ಮೇಲೆ ಅದರಿಂದ ಹೊರಬರುವ ಮಾರ್ಗವನ್ನ್ನು ಯೋಚಿಸಬೇಕೆ ಹೊರತು ಅದಕ್ಕೆ ಹೆದರಿಕೊಂಡು ಹೋಗುವ ದಾರಿ ಹುಡುಕ ಬಾರದೆಂದು ಕೊಂಡು ಮನಸ್ಸನ್ನುಗಟ್ಟಿ ಮಾಡಿಕೊಂಡು ಈ ರೋಗ ವನ್ನು ಹೇಗಾದರೂಧೈರ್ಯ ದಿಂದ ಎದುರಿಸಲೇಬೇಕು ಎಂದು ಒಳಗೊಳಗೆ ತೀರ್ಮಾನಿಸಿ ಕೊಂಡೆ. ಕ್ಯಾನ್ಸರ್ ಎಂದರೆ ಸಾವಲ್ಲ್ಲ ಅದೊಂದು ಸವಾಲು. ಅದನ್ನು ಎದುರಿಸಿ ತೋರಿಸಬೇಕು ಎಂದು ಅಂದೇ ತೀರ್ಮಾನಿಸಿಬಿಟ್ಟೆ.

5. ನಾನು ಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯದ ಬೋಧಕ ನಾಗಿದ್ದು, ಶಂಕರಾಚಾರ್ಯರು, ವಿವೇಕಾನಂದರು, ಜಾನ್‌ಕೀಟ್ಸ್ ರ ಬಗ್ಗೆ ಆಗಾಗ್ಗೆ ವಿದ್ಯಾರ್ಥಿಗಳಿಗೆ ಹೇಳಿ, ಜೀವನದಲ್ಲಿ ಆಯಸ್ಸು ಮುಖ್ಯವಲ್ಲ, ಸಾಧನೆ ಮುಖ್ಯವಷ್ಟೆ ಎಂದು ವಿದ್ಯಾರ್ಥಿಗಳನ್ನು ಸಾಧನೆ ಯತ್ತ ಪ್ರೇರೇಪಿಸುತ್ತಿದ್ದೆ. ಆದರೆ ಆಗ ನನಗೆ ಅರಿವಾಗಿತ್ತು ಜೀವನದ ಬೆಲೆ ಏನೆಂದು; ಆದರೆ ಒಮ್ಮೆಲೆ ಹೆದರಿಕೊಂಡರೆ ಹೇಗೆ?ಎಂದು ನನಗೆ ನಾನೇ ಧೈರ್ಯ ತುಂಬಿಕೊಳ್ಳುತ್ತಾ ಪುಣ್ಯಾತ್ಮರಾದ ಶಂಕರ, ಕೀಟ್ಸ್, ವಿವೇಕಾನಂದರು ಅಲ್ಪಾಯುಷುವಿನಲ್ಲಿ ಭೂಮಿಯ ಋಣವನ್ನು ತೀರಿಸಿಕೊಂಡಿರುವಾಗ ನಾನೇನು ಮಹಾ! ಎಂದುಕೊಳ್ಳುತ್ತಾ ಧೈರ್ಯದಿಂದ ರೋಗವನ್ನು ಎದುರಿಸೋಣ. ಒಂದು ವೇಳೆ ಸಾಧ್ಯವಾಗದಿದ್ದರೆ ನನ್ನ ಭೂಮಿಯ ಋಣ ಇಲ್ಲಿಗೆ ತೀರಿತು ಎಂದು ಖಾಲಿ ಮಾಡೋಣ ಎಂದುಕೊಂಡೆ. ಆದರೆ ನಾನು ಹಠವಾದಿ. ನನ್ನ ಮೊದಲ ಆಯ್ಕೆ ಹೋರಾಟ. ಕ್ಯಾನ್ಸರ್‌ನೊಂದಿಗೆ ನನ್ನ ಹೋರಾಟವನ್ನು ಅಂದಿನಿಂದಲೇ ಆರಂಭಿಸಿಬಿಟ್ಟೆ. ನನ್ನ ಕಾಯಿಲೆ ಅಂತಿಮ ಹಂತದಲ್ಲಿದ್ದುದರಿಂದ ವೈದ್ಯರು ಮೂರು ಸೈಕಲ್‌ಗಳಲ್ಲಿ 22 ಕಿಮೊಥೆರಪಿಗಳನ್ನು ನನಗೆ ನೀಡಿದರು. ಕಿಮೊಥೆರಪಿಯ ಬೇನೆಗಳನ್ನು ನನ್ನಿಂದ ವರ್ಣಿಸಲು ಅಸಾಧ್ಯವೆಂದು ಭಾವಿಸುತ್ತೇನೆ. ನಿರಂತರವಾಗಿ ಕಾಡುವ ಜ್ವರ, ವಾಕರಿಕೆ, ದಣಿವು, ತಲೆ ಶೂಲೆ, ಮೈ ಉರಿ, ದೇಹವನ್ನು ಚಿಕಿತ್ಸೆಯುದ್ದಕ್ಕೂ ನನ್ನನ್ನು ಬಾಧಿಸು ತ್ತಲೇ ಇದ್ದುವು. ಹಸಿವಾಗುತ್ತಿದೆ ಊಟ ಸೇರುವುದಿಲ್ಲ, ತೂಕಡಿಕೆ ಬರುತ್ತಿದೆ ನಿದ್ರೆ ಹತ್ತುವುದಿಲ್ಲ, ಓಡಾಡಬೇಕೆನಿಸುತ್ತ್ತದೆ, ನಿಲ್ಲಲು ಕಾಲು ಬರುವುದಿಲ್ಲ. ಇಂತಹ ಅನುಭವಗಳು ಪ್ರತಿಯೊಬ್ಬ ಕ್ಯಾನ್ಸರ್ ರೋಗಿಗಳಿಗೂ ಸರ್ವೇ ಸಾಮಾನ್ಯವಾಗಿರುತ್ತದೆ. ನಿರಂತರ ಮೂರು ತಿಂಗಳ ಚಿಕಿತ್ಸೆಯ ನಂತರ ವಿರೂಪವಾಗಿ ಹೊರಬಂದ ಮೇಲೆ ಕನ್ನಡಿ ಮುಂದೆ ನಿಂತಾಗ ನನ್ನ ರೂಪ ನೋಡಿ ನಾನು ಬೆಚ್ಚಿದ್ದೆ. ಮೂರುತಿಂಗಳ ಚಿಕಿತ್ಸೆಯ ನಂತರ ನಾನು ಕಾಯಿಲೆಯಿಂದ ಆಶ್ಚರ್ಯಕರದಿಂದ ಪಾರಾಗಿ ವೈದ್ಯರಿಗೆ ಅಚ್ಚರಿಯಾಗಿ ಬಿಟ್ಟೆ. ಇಂದಿಗೆ ಐದು ವರ್ಷಗಳನ್ನು ಪೂರೈಸಿ 6ನೇ ವರ್ಷದ ಆರಂಭದಲ್ಲಿದ್ದೇನೆ.

6. ನಮ್ಮ ದೇಹದಲ್ಲಿ ಜೀವಕೋಶಗಳ ಅಪರಿಮಿತ ಹೆಚ್ಚಳ ದಿಂದುಂಟಾಗುವ ಕ್ಯಾನ್ಸರ್ ರೋಗಕ್ಕೆ ನಾವು ನೇರ ಕಾರಣವಲ್ಲ. ಕಲುಷಿತವಾದ ವಾತಾವರಣ, ಒತ್ತಡದ ಬದುಕು, ಆಧುನಿಕ ಜೀವನ ಶೈಲಿ, ಜಂಕ್‌ಫುಡ್‌ಗಳ ಸೇವನೆ ಕ್ಯಾನ್ಸರ್‌ಗೆ ಕಾರಣವಾಗುತ್ತಿವೆ ಎಂದು ವೈದ್ಯರು ಅಂದಾಜಿಸುತ್ತಾರೆ. ಧೂಮಪಾನ ಮತ್ತು ಹೊಗೆಸೊಪ್ಪಿನ ಸಂಬಂಧಿ ವಸ್ತುಗಳ ಸೇವನೆ ಕ್ಯಾನ್ಸರ್‌ಗೆ ಕಾರಣ ಎನ್ನುವ ಕಾಲವೊಂದಿತ್ತು. ಆದರೆ ಇಂದು ಅವುಗಳು ಕಾರಣವಾಗಬಹುದೇ ಹೊರತು ಧೂಮಪಾನವೇ ಕಾರಣ ಎಂದು ಹೇಳುವಾಗಿಲ್ಲ. ಜೀವನದಲ್ಲಿ ಏನೂ ಅರಿಯದ, ಯಾವ ಚಟಕ್ಕೂ ಬಲಿಯಾಗದೆ ಇರುವ ಎಷ್ಟೋ ಮುಗ್ಧ ಜೀವಿಗಳು ಕ್ಯಾನ್ಸರ್‌ಗೆ ಶರಣಾಗುತ್ತಿ ರುವುದನ್ನು ಕಾಣುತ್ತಿದ್ದೇನೆ. ಕ್ಯಾನ್ಸರ್‌ರೋಗಕ್ಕೆ ನಾವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರ ಜೊತೆಗೆ ನಮ್ಮ ದೇಹದಲ್ಲಿನ ಒಂದು ಸಣ್ಣ ಬದಲಾವಣೆಯನ್ನೂ ನಾವು ಉಪೇಕ್ಷೆ ಮಾಡದೆ ತಪಾಸಣೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಕ್ಯಾನ್ಸರ್ ತಗಲಿದೆ ಎಂದು ತಿಳಿದೊಡನೆ ತಜ್ಞ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವುದರ ಜೊತೆಗೆ ಅನುಕರಣೀಯ ಕ್ರಮಗಳನ್ನು ಅನುಸರಿಸಿ ಧೈರ್ಯದಿಂದ ಕ್ಯಾನ್ಸರನ್ನು ಎದುರಿಸಿದರೆ ರೋಗದಿಂದ ಎಲ್ಲರೂ ಹೊರಬರುವ ಸಾಧ್ಯತೆಯೇ ಹೆಚ್ಚು.

8. ಕ್ಯಾನ್ಸರನ್ನು ಗೆದ್ದ ಖುಷಿ ನನ್ನಕುಟುಂಬಕ್ಕೆ ಮಾತ್ರ ಸೀಮಿತ ವಾಗಬಾರದೆಂದು ಯೋಚಿಸಿಕೊಂಡು ನನ್ನಂತೆ ರೋಗಕ್ಕೆ ಒಳಗಾಗಿ ಬದುಕಿರುವವರನ್ನು ಕೂಡಿಕೊಂಡು ಸಂಜೀವಿನಿ ಕ್ಯಾನ್ಸರ್ ಕೇರ್ ಟ್ರಸ್ಟ್ ಸಂಸ್ಥೆಯನ್ನು ಸ್ಥಾಪಿಸಿ ಕಳೆದ 4 ವರ್ಷಗಳಿಂದ ಸಾರ್ವಜನಿಕರಿಗೆ ಕ್ಯಾನ್ಸರ್ ಒಂದು ಸಾಮಾನ್ಯರೋಗ. ‘ಧೈರ್ಯ ಮತ್ತು ಜೀವನೋತ್ಸಾಹದಿಂದ ಎದುರಿಸಿ’ ಎಂದು ಜಾಗೃತಿ ಮೂಡಿಸುತ್ತಿದ್ದೇನೆ. ರೋಗಿಗಳ ವಿಳಾಸ ತಿಳಿದು ಮನೆ ಮನೆಗೆ ಹೋಗಿ ಮನಸ್ಥೈರ್ಯ ತುಂಬುತ್ತಿದ್ದೇನೆ. ಕ್ಯಾನ್ಸರ್ ಯಾರಿಗಾದರೂ ಶಾಪವಾಗಿರಬಹುದು. ಆದರೆ ನನಗೆ ಒಂದು ವರವೆಂದೇ ಭಾವಿಸಿದ್ದೇನೆ. ಕಾರಣ ರಾಜ್ಯದ ಉದ್ದಗಲಕ್ಕೂ ನನ್ನನ್ನು ಪರಿಚಯಿಸಿ ಕೊಟ್ಟಿದೆ. ಸಾರ್ವಜನಿಕರ ಮುಂದೆ ನನಗೊಂದು ಪ್ಲಾಟ್‌ಫಾರಂ ನಿರ್ಮಿಸಿಕೊಟ್ಟಿದೆ. ನನ್ನಿಂದ ಜನರು ಆಟೋಗ್ರಾಫ್ ಕೆಳವಷ್ಟರಮಟ್ಟಿಗೆ ಬೆಳೆಸಿದೆ. ನನ್ನಿಂದ ಕ್ಯಾನ್ಸರ್‌ಗೆದ್ದ ಜೀವನ ಪ್ರೇಮಿ ಮತ್ತು ಬದುಕಿ ಬಂದವರು ಎಂಬ ಎರಡು ಕೃತಿಗಳನ್ನು ಬರೆಸಿದೆ. ಕ್ಯಾನ್ಸರ್ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಲ್ಲಿ ಕ್ಯಾನ್ಸರ್ ಎಂದರೆ ಸಾವು ಎಂಬ ಅಜ್ಞಾನವನ್ನು ಅಳಿಸುವ ಕೆಲಸದಲ್ಲಿ ನಿರತವಾಗಿವೆ.

ರಮೇಶ್ ಬಿಳಿಕೆರೆ, ಮೈಸೂರು

Writer - ರಮೇಶ್ ಬಿಳಿಕೆರೆ, ಮೈಸೂರು

contributor

Editor - ರಮೇಶ್ ಬಿಳಿಕೆರೆ, ಮೈಸೂರು

contributor

Similar News