ಸಾಸಿವೆ ತಂದ ಭಾರತಿ

Update: 2019-02-03 07:49 GMT

ಭಾರತಿ ಬಿ.ವಿ. ಅವರದು ಸಾಹಿತ್ಯ ವಲಯದಲ್ಲಿ ಚಿರಪರಿಚಿತ ಹೆಸರು. ವೈವಿಧ್ಯಮಯ ಅಂಕಣ ಬರಹ, ಕತೆ, ಕವಿತೆಗಳ ಮೂಲಕ ಗಮನ ಸೆಳೆದವರು. ಭಾರತಿ ಅವರ ಕ್ಯಾನ್ಸರ್ ಗೆದ್ದ ಆತ್ಮಕಥನ ಎಲ್ಲರ ಹೃದಯ ಗೆದ್ದಿತ್ತು. ‘ಸಾಸಿವೆ ತಂದವಳು’ ಕೃತಿಯ ಮೂಲಕ ತಾನು ಕ್ಯಾನ್ಸರನ್ನು ಹೇಗೆ ಗೆದ್ದೆ ಎನ್ನುವುದನ್ನು ಹಂಚಿಕೊಂಡಿದ್ದಾರೆ. ‘ಸಾವಿಲ್ಲದ ಮನೆಯ ಸಾಸಿವೆಯನ್ನು ತಾ. ನಿನ್ನ ಮಗನನ್ನು ಬದುಕಿಸಿಕೊಡುವೆ’ ಎಂದು ಬುದ್ಧ ಹೇಳುತ್ತಾನೆ. ಸಾವಿಲ್ಲದ ಮನೆಯ ಸಾಸಿವೆ ತರಲು ಸಾಧ್ಯವೇ? ಕ್ಯಾನ್ಸರ್ ಗೆಲ್ಲುವ ಮೂಲಕ ತಾನು ಸಾಸಿವೆಯನ್ನು ತಂದೆ ಎಂದು ಭಾರತಿ ಈ ಕೃತಿಯಲ್ಲಿ ಹೇಳಿಕೊಳ್ಳುತ್ತಾರೆ. ಇಂದು ಕ್ಯಾನ್ಸರ್ ರೋಗಿಗಳಿಗೆ ಭಾರತಿ ಅವರು ಒಂದು ದೊಡ್ಡ ಆತ್ಮವಿಶ್ವಾಸ. ಯಾವುದೇ ವೈದ್ಯರು ರೋಗಿಗೆ ನೀಡುವ ಸಾಂತ್ವನ, ಧೈರ್ಯಕ್ಕಿಂತ ಭಾರತಿ ಅವರು ನೀಡಬಲ್ಲರು. ಅವರು ತನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಸುಮ್ಮನೆ ಒರಗಿ ಕುಳಿತಿರುವಾಗ ಯಾವುದೋ ಸೇವ್ ಆಗಿಲ್ಲದ ನಂಬರ್‌ನಿಂದ ಒಂದು ಕಾಲ್ ಬರುತ್ತದೆ. ಕಾಲ್ ತೆಗೆದ ಕೂಡಲೇ ಸಣ್ಣದೊಂದು ದನಿ,

‘ಮೇಡಂ, ಮೊನ್ನೆ ತಾನೇ ನನಗೆ ಬ್ರೆಸ್ಟ್ ಕ್ಯಾನ್ಸರ್ ಅಂತ ಬಯಾಪ್ಸಿ ರಿಪೋರ್ಟ್ ಬಂತು...’

‘ಮಕ್ಕಳಿಲ್ಲ ಅಂತ ಒದ್ದಾಡುವಾಗ ಬಸುರಿಯಾದೆ. ಈಗ ನೋಡಿದರೆ ಕ್ಯಾನ್ಸರ್ ಅಂತ ಡಯಾಗ್ನೈಸ್ ಆಗಿದೆ...’

‘ಅಕ್ಕ ನಿನ್ನೆ ತಾನೇ ನನ್ನ ರೇಡಿಯೇಷನ್ ಮುಗಿಯಿತು. ಸುಸ್ತಾಗಿ ಹೋಗಿದ್ದೀನಿ ಅಕ್ಕ’

‘ಅಮ್ಮನಿಗೆ ಕ್ಯಾನ್ಸರ್ ಅಂತ ಬಂದಿದೆ. ಆಕೆ ಏನೂ ಗೊತ್ತಾಗದ ಮುಗ್ಧೆ. ಹೆಚ್ಚು ಓದಿಲ್ಲ. ಅವರಿಗೆ ಹೇಳಬೇಕೋ, ಬೇಡವೋ ಅನ್ನುವುದೂ ಗೊತ್ತಾಗುತ್ತಿಲ್ಲ...’

‘ಅಕ್ಕ ಅಮ್ಮ ಹೋಗಿಬಿಟ್ಟರು ಟ್ರೀಟ್ಮೆಂಟ್ ಎಲ್ಲ ಮುಗಿದು ಸರಿಯಾಗುತ್ತಿದ್ದಾರೆ ಅನ್ನುವಾಗಲೇ...’

‘ಅಕ್ಕ ಮೊನ್ನೆ ಮೊನ್ನೆ ತಾನೇ ನಿಮ್ಮ ಹತ್ತಿರ ಕ್ಯಾನ್ಸರ್ ಅಂತ ಹೇಳಿಕೊಂಡಂತಿದೆ. ಆಗಲೇ ಎರಡು ವರ್ಷ ಕಳೆದು ಹೋಗಿದೆ!’

‘ಭಾರತಿ ನಿಮಗೆ ಅಂತಲೇ ಒಂದು ಓವರ್ ಕೋಟ್ ಮಾಡಿದ್ದೀನಿ. ಹಣ ಕೊಡ್ತೇನೆ ಅನ್ನಬಾರದು ಮತ್ತೆ. ಇದು ನನ್ನ ಪ್ರೀತಿ ಅಂದುಕೊಳ್ಳಿ....’

‘ಮೇಡಂ ನಾನು ಬೇಗ ಹುಷಾರಾಗಿ ವಾಪಸ್ ಬರ್ತೀನಿ ಬದುಕಿಗೆ. ಅಕ್ಕನೊಟ್ಟಿಗೆ ನಿಮ್ಮನ್ನೊಮ್ಮೆ ಕಾಣುತ್ತೇನೆ’

‘ಮೇಡಂ ನನ್ನ ತಮ್ಮನ ಚಿಕಿತ್ಸೆ ಸಮಯದಲ್ಲಿ ನೀವು ಸ್ವಲ್ಪ ಹಣ ಕೂಡಿಸಿ ಕೊಟ್ಟಿದ್ದಿರಿ. ಅವನು ಹೊರಟು ಹೋದ. ಆದರೆ ನಿಮ್ಮ ಸಹಾಯ ಯಾವತ್ತೂ ನೆನಪಿನಲ್ಲಿರುತ್ತದೆ’

‘ಅಕ್ಕ ನನ್ನ ಅತ್ತೆಗೆ ಕ್ಯಾನ್ಸರ್ ಅಂತ ತಿಳಿದಿದೆ. ನಿಮ್ಮ ಶ್ರೀನಾಥ್ ಡಾಕ್ಟರ್ದೊಂದು appointment ತೆಗೆಸಿ ಕೊಡಲಿಕ್ಕಾ ಗುತ್ತದಾ’

‘ಆಪರೇಷನ್ ಮಾಡಿ ಕ್ಯಾನ್ಸರ್ ಗಡ್ಡೆ ತೆಗೆದರು. ಯಾಕೋಜ್ವರ ಬಂದಂತಿದೆ. ಭಯವಾಗುತ್ತಿದೆ’

‘ಅಪ್ಪನನ್ನು ಹೇಗಾದರೂ ಉಳಿಸಿಕೊಳ್ಳಬೇಕು ಭಾರತಿ... ನನಗೆ ಅವರ ಸಂಕಟ ನೋಡಲಾಗುತ್ತಿಲ್ಲ...’

‘ಮೊನ್ನೆ ಪೆಟ್ ಸ್ಕಾನ್ ಆಯಿತು ಮೇಡಂ. ಕ್ಲಿಯರ್ ಅಂತ ಬಂದಿದೆ!’

‘ನನ್ನ ಅತ್ಯಂತ ಹತ್ತಿರದವರು ಈಗೀಗ ಕ್ಯಾನ್ಸರ್ ಅಂತ ತಿಳಿದ ಮೇಲೆ ನನ್ನನ್ನು ಯಾಕೋ ದೂರ ಮಾಡುತ್ತಿದ್ದಾರೆ’

‘ಅಕ್ಕ ನೋಡಿಕೊಳ್ಳುವ ಪ್ರೀತಿಯ ಜೀವಗಳಿದ್ದವು ಅಂತ ಈ ಸಾಗರವನ್ನೂ ದಾಟಿಬಿಟ್ಟೆವು ಅಲ್ಲವಾ?’

 ‘ಮೊನ್ನೆ ರೇಡಿಯೇಷನ್‌ಗೆ ಹೋಗಿದ್ದಾಗ ಪುಟ್ಟ ಮಗು...ಏಳು ವರ್ಷದ್ದು... ರೇಡಿಯೇಷನ್‌ಗೆ ಬಂದಿತ್ತು. ಸಂಕಟವಾಯ್ತು...’

ಹೀಗೆ ಹತ್ತು ಹಲವಾರು ಕತೆಗಳು ನನ್ನ ಎದೆಗೆ ರವಾನೆ ಯಾಗುತ್ತಾ ಹೋಗುತ್ತವೆ...

ಫೇಸ್‌ಬುಕ್‌ನಲ್ಲಿ ಚಿತ್ರಗಳನ್ನು ಹಾಕಿಕೊಳ್ಳುತ್ತ, ನಮ್ಮ- ನಿಮ್ಮೆಲ್ಲರಂತೆ ಕಾಣಿಸುವ ಹತ್ತು ಹಲವಾರು ದನಿಗಳು ಇನ್‌ಬಾಕ್ಸ್‌ನಲ್ಲಿ, ಫೋನಿನಲ್ಲಿ ನನ್ನೆದುರು ತೆರೆದುಕೊಳ್ಳುತ್ತವೆ. ಅವರಿಗೆ ವರ್ಷಗಟ್ಟಳೆ ಓದಿ, ಪಾಸ್ ಆಗಿ, ನುರಿತು, ಚಿಕಿತ್ಸೆ ಕೊಡುವ ಡಾಕ್ಟರ್ ಭರವಸೆಗಿಂತ, ಕ್ಯಾನ್ಸರ್‌ನಿಂದ ಬದುಕಿ ಉಳಿದ ನಾನು ಹೆಚ್ಚು ಭರವಸೆ ಮೂಡಿಸುತ್ತೇನೆ! ಹೌದು! ನಾನು ಹುಟ್ಟಿ ಅದೇನು ಕಡೆದು ಕಟ್ಟೆ ಹಾಕಿದೆನೋ ಅಂದುಕೊಳ್ಳುತ್ತಿದ್ದ ನನಗೆ, ಸಾರ್ಥಕ ಭಾವ ಮೂಡಿಸುವ ಘಳಿಗೆಗಳಿವು.

ಉಳಿದಂತೆ ‘ಕ್ಯಾನ್ಸರ್ ರೋಗ ನಿಮ್ಮ ಪಾಪದ ಫಲ’ ಅನ್ನುವ ಯಾವುದೋ ರಾಜ್ಯದ ಆರೋಗ್ಯ ಮಂತ್ರಿಯ ಹೇಳಿಕೆ

‘ಹಣವಿದ್ದರೆ ಚಿಕಿತ್ಸೆ ತೆಗೆದುಕೊಳ್ಳುವುದು ಏನು ಕಷ್ಟ?’ ಎನ್ನುವ ನಂಜಿನ ಮಾತುಗಳು

‘ಬ್ರೆಸ್ಟ್ ಕ್ಯಾನ್ಸರ್ ಕ್ಯಾನ್ಸರೇ ಅಲ್ಲ...’ ಅನ್ನುವ ಕಾರುಣ್ಯ ರಹಿತ ಬೇಜವಾಬ್ದಾರಿ ಮಾತುಗಳ ಲೋಕಕ್ಕೂ ನಮ್ಮ ಲೋಕಕ್ಕೂ ಸಂಬಂಧವೇ ಇಲ್ಲ.

ಗೊತ್ತೇ ನಿಮಗೆ? ನಮ್ಮ ಲೋಕದಲ್ಲಿ ಜಾತಿಗಳಿಲ್ಲ, ಧರ್ಮಗಳಿಲ್ಲ, ಪಂಗಡಗಳಿಲ್ಲ, ವರ್ಗಗಳಿಲ್ಲ. ಅಲ್ಲಿರುವುದು ಕೇವಲ ಎದೆ ನಡುಗಿಸುವ ನೋವು, ಅಸಹಾಯಕತೆಗಳು ಮಾತ್ರ. ಈ ವಿಶ್ವ ಕ್ಯಾನ್ಸರ್ ದಿನದಂದು ನಿಮ್ಮಲ್ಲಿ ಅರಿಕೆ ಯಿಷ್ಟೇ... ಬಿಡುವಾಗಿರುವಾಗ ಎಂದಾದರೊಮ್ಮೆ ಯಾವುದಾದರೂ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿ ನಮ್ಮ ಬದುಕು ಹೇಗೆಲ್ಲ ಇರುತ್ತದೆ ಆ ಸಮಯದಲ್ಲಿ ಅನ್ನುವುದನ್ನು ನೋಡಿ ಸಾಧ್ಯವಾದರೆ ಈ ಜಗತ್ತು ಬದುಕಲು ಮತ್ತಷ್ಟು ಸಹ್ಯವಾಗಿಸಿ...

Writer - ಭಾರತಿ ಬಿ.ವಿ.

contributor

Editor - ಭಾರತಿ ಬಿ.ವಿ.

contributor

Similar News