ಕ್ರಿಮಿನಾಶಕ ಬಳಕೆಯಿಂದ ವಿಷಪೂರಿತ ಆಹಾರ ಉತ್ಪಾದನೆ: ಡಾ.ಬಿಮಲ್ ಚಜೇರ್
ಬೆಂಗಳೂರು, ಫೆ. 3: ಕೃಷಿ ಚಟುವಟಿಕೆಯಲ್ಲಿ ಅತಿಯಾಗಿ ಕ್ರಿಮಿನಾಶಕ ಬಳಸಲಾಗುತ್ತಿದೆ. ಇದರಿಂದ ವಿಷಪೂರಿತ ಆಹಾರ ಉತ್ಪಾದನೆಯಾಗುತ್ತಿದ್ದು, ಹಲವು ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ ಎಂದು ದಿಲ್ಲಿ ಏಮ್ಸ್ ಆಸ್ಪತ್ರೆಯ ನಿವೃತ್ತ ಪ್ರಾಧ್ಯಪಕ ಡಾ.ಬಿಮಲ್ ಚಜೇರ್ ಹೇಳಿದ್ದಾರೆ.
ಲಯನ್ಸ್ ಕ್ಲಬ್ ವತಿಯಿಂದ ಮಹಾಲಕ್ಷ್ಮೀ ಲೇಔಟ್‌ನ ಆರ್.ಜಿ.ರಾಯಲ್ ಸಭಾ ಮಂಟಪದಲ್ಲಿ ನಡೆದ ‘ಬೈಪಾಸ್ ದಿ ಬೈಪಾಸ್ ಸರ್ಜರಿ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಧಿಕ ಇಳಿವರಿ ಪಡೆಯುವ ಉದ್ದೇಶದಿಂದ ಹಾಗೂ ಅತಿ ವೇಗವಾಗಿ ಸ್ಥಿತಿವಂತರಾಗಬೇಕೆಂಬ ಅಭಿಲಾಷೆಯಿಂದ ಕೃಷಿಗೆ ರಾಸಾಯನಿಕಗಳನ್ನು ಬಳಕೆ ಮಾಡುತ್ತಿರುವುದು ದುರಂತ ಎಂದು ತಿಳಿಸಿದರು.
ಪ್ರಸ್ತುತ ದಿನಮಾನಗಳಲ್ಲಿ ಮಿತ ಆಹಾರ ಸೇವನೆ ಹಾಗೂ ಯೋಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜೀವನಶೈಲಿಯನ್ನು ರೂಪಿಸಿಕೊಂಡರೆ ರೋಗಮುಕ್ತ ಜೀವನ ನಡೆಸಲು ಸಾಧ್ಯ. ಈಗಿರುವ ಜೀವನಶೈಲಿಯನ್ನು ಬದಲಾಯಿಸಿಕೊಂಡರೆ ಆರೋಗ್ಯಪೂರ್ಣ ಜೀವನ ನಡೆಸಬಹುದು ಎಂದರು.
ಇತ್ತೀಚಿನ ದಿನಗಳಲ್ಲಿ ಕಿರಿಯ ವಯಸ್ಕರಿಗೂ ಹೃದಯ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ನಿಯತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯಕ. ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಕೊಬ್ಬಿನಾಂಶದ ಬಗ್ಗೆ ಜಾಗರೂಕತೆ ವಸಿಕೊಳ್ಳಬಹುದು. ಬಹುತೇಕ ಜನರಿಗೆ ಅತಿಯಾದ ಕೊಬ್ಬಿನಾಂಶದಿಂದ ಹೃದಯರೋಗ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟರು.
ಪ್ರತಿಯೊಂದು ಆಹಾರದಲ್ಲಿಯೂ ಪ್ರಕೃತಿದತ್ತವಾಗಿ ಎಣ್ಣೆ ಅಂಶವಿರುತ್ತದೆ. ಅಲ್ಲದೇ, ಮಾಂಸಹಾರ ಮತ್ತು ಹಾಲು ಉತ್ಪನ್ನಗಳ ಸೇವನೆಗಳಿಗಿಂತ ತರಕಾರಿ ಪದಾರ್ಥಗಳನ್ನು ಹೆಚ್ಚಾಗಿ ಬಳಸಬೇಕು. ಸಾವಯವ ಸಿರಿಧಾನ್ಯ ಆಹಾರ ಸೇವೆನೆ ಹಾಗೂ ಯೋಗ, ವ್ಯಾಯಾಮ ಚಟುವಟಿಕೆಗಳಲ್ಲಿ ಸಕ್ರಿಯರಾಗಬೇಕು ಎಂದು ಸಲಹೆ ನೀಡಿದರು.
ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಸಭೆಯ ಮುಖ್ಯಸ್ಥ ಜಿ.ವೆಂಕಟೇಶ್ ಮಾತನಾಡಿ, ಸಮಾಜದಿಂದ ಹಲವು ರೀತಿಯ ಕೊಡುಗೆಗಳನ್ನು ಪಡೆದುಕೊಂಡಿರುವ ನಾವು ಮಾನವೀಯತೆಯನ್ನು ಬೆಳೆಸಿಕೊಂಡು ಸಮಾಜ ಸುಧಾರಣೆಗಾಗಿ ಬದುಕಬೇಕು. ಭ್ರಷ್ಟಾಚಾರ ಮುಕ್ತ ಹಾಗೂ ಅಹಿಂಸಾ ತತ್ವಗಳನ್ನು ಅಳವಡಿಸಿಕೊಂಡು ಮೌಲ್ಯಯುಯುತ ಜೀವನ ನಡೆಸಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಲ್ಟಿಪಲ್ ಕೌನ್ಸಿಲ್‌ನ ಅಧ್ಯಕ್ಷ ಎಚ್.ಕೆ.ಗಿರಿಧರ, ಅನಿಲ್ ಕುಮಾರ್, ಸ್ವಾಗತ ಸಮಿತಿಯ ಖಜಾಂಚಿ ಆರ್. ಶಿವಶಂಕರ್, ಕೆ.ಸತ್ಯನಾರಾಯಣ್ ರಾಜು, ಬಿ.ಮೋಹನ್, ನಿತ್ಯಾನಂದ ಪೈ ಉಪಸ್ಥಿತರಿದ್ದರು.