ಕಲಾತ್ಮಕತೆ ಕೃತಿಯೊಂದರ ಯಶಸ್ಸಿನ ಸಂಕೇತ: ಹಿರಿಯ ವಿಮರ್ಶಕ ದಂಡಪ್ಪ

Update: 2019-02-03 16:48 GMT

ಬೆಂಗಳೂರು, ಫೆ. 3: ಕಲಾತ್ಮಕತೆಯೊಂಬುದು ಕೃತಿಯೊಂದರ ಯಶಸ್ಸಿನ ಸಂಕೇತವಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್‌ರವರ ‘ಯಾತ್ರೆ’ ಕಾದಂಬರಿ ಯಶಸ್ವಿ ಕೃತಿಯಾಗಿದೆ ಎಂದು ಹಿರಿಯ ವಿಮರ್ಶಕ ದಂಡಪ್ಪ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಕಾವ್ಯಮಂಡಲ ಮತ್ತು ಹೇಮಂತ ಪ್ರಕಾಶನ ನಗರದ ಇಸ್ರೋ ಲೇಔಟ್‌ನಲ್ಲಿ ಆಯೋಜಿಸಿದ್ದ ಶೂದ್ರ ಶ್ರೀನಿವಾಸ್‌ರವರ ಯಾತ್ರೆ ಕಾದಂಬರಿ ಕುರಿತು ಅವರು ಮಾತನಾಡಿದರು.

ಕೃತಿಯಲ್ಲಿರುವ ಪಾತ್ರಗಳು ಇಲ್ಲವೆ ಕೃತಿಗೆ ಆರಿಸಿಕೊಂಡುವ ವಸ್ತುವಿಷಯವನ್ನು ಆಧರಿಸಿ ಕೃತಿಯನ್ನು ವಿಮರ್ಶಿಸಲು ಬರುವುದಿಲ್ಲ. ಆ ಕೃತಿಯ ವಸ್ತು ವಿಷಯವನ್ನು ಹೇಗೆ ಕಲಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ ಎನ್ನುವುದರ ಮೇಲೆ ಕೃತಿಯನ್ನು ವಿಮರ್ಶಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಕಾದಂಬರಿ ಪ್ರಕಾರವೆ ಮನುಷ್ಯ ಜಿಜ್ಞಾಸೆಯನ್ನು ಸಮಗ್ರವಾಗಿ ಕಟ್ಟಿಕೊಡಲು ಸಾಧ್ಯವಾಗುವಂತಹದ್ದಾಗಿದೆ. ಅದರಲ್ಲೂ ಶೂದ್ರ ಶ್ರೀನಿವಾಸ್‌ರವರ ಯಾತ್ರೆ ಕಾದಂಬರಿಯಲ್ಲಿ ಮನುಷ್ಯ, ಸಮಾಜ ಹಾಗೂ ಜಗತ್ತನ್ನು ಹಿಡಿಯಾಗಿ, ಕಲಾತ್ಮಕವಾಗಿ ರೂಪಿಸುವ ಮೂಲಕ ಮಾನವೀಯತೆ ವೌಲ್ಯಗಳನ್ನು ಓದುಗನ ಮನಸಿನಲ್ಲಿ ಬಿತ್ತುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಮಾತನಾಡಿ, ನಗರೀಕರಣವು ಗ್ರಾಮಗಳನ್ನು ಒಂದೊಂದಾಗಿ ನಿರ್ಣಾಮ ಮಾಡುತ್ತಾ ವಿಸ್ತರಿಸಿಕೊಳ್ಳುತ್ತಿದೆ. ಇದರಿಂದಾಗಿ ಇಡೀ ಗ್ರಾಮೀಣ ಸಂಸ್ಕೃತಿಯೆ ನಾಶವಾಗುತ್ತಿದೆ. ಈಗಿನ ಯುವ ತಲೆಮಾರಿಗೆ ನಮ್ಮ ಕೂಡು ಕುಟುಂಬದ ಪರಿಕಲ್ಪನೆಯೆ ಇಲ್ಲವಾಗಿದೆ. ಇದೆಲ್ಲವನ್ನು ಕಾದಂಬರಿ ರೂಪಕ್ಕೆ ತರಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆಂದು ತಿಳಿಸಿದರು.

ಕಾದಂಬರಿಯೆಂದರೆ ಅದು ಕೇವಲ ಓದುವಂತಹ ಕ್ರಿಯೆ ಮಾತ್ರವಲ್ಲ. ನಮ್ಮ ಜಗತ್ತಿನ ಅನುಭವವನ್ನು ಹಿಡಿಯಾಗಿ ಕಟ್ಟಿಕೊಡುವ ಸಾರವಾಗಿದೆ. ಕಾದಂಬರಿಯನ್ನು ಓದುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಯಾವುದೆ ವಸ್ತುವಿನ ಕುರಿತು ಆಳವಾಗಿ ತಿಳಿಯಲು, ಆಲೋಚಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ನನ್ನಂತಹ ಹಲವರ ಚಿಂತನೆಯನ್ನು ರೂಪಿಸಿದ ನಾಡಿನ ಸಾಕ್ಷಿಪ್ರಜ್ಞೆಯಾದ ಪಿ.ಲಂಕೇಶ್ ನೇತೃತ್ವದಲ್ಲಿ ತಿಂಗಳಿಗೊಂದು ಪುಸ್ತಕ ಹಾಗೂ ಕಾವ್ಯ, ಕತೆ, ಕಾದಂಬರಿಯ ವಿವಿಧ ನೆಲೆಗಳ ಕುರಿತು ವಿಮರ್ಶಿಸುವ ಕಮ್ಮಟವನ್ನು ಆಯೋಜಿಸಲಾಗುತ್ತಿತ್ತು. ಅದೇ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ತಿಂಗಳಿಗೊಮ್ಮೆ ಕಮ್ಮಟವನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಲೇಖಕರಾದ ಪ್ರೊ.ಮಲರ್ ವಿಳಿ, ಪ್ರೊ.ಜಯಶ್ರೀ ಕಂಬಾರ ಹಾಗೂ ಜಯಶಂಕರ ಹಲಗೂರು ಯಾತ್ರೆ ಕಾದಂಬರಿ ಕುರಿತು ಮಾತನಾಡಿದರು. ಈ ವೇಳೆ ಆದೂರ್ ಪ್ರಕಾಶ್, ಜೇನುಗೂಡು ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News