ಸಮಗ್ರ ಆರೋಗ್ಯ ಪರಿಕಲ್ಪನೆ ಅಗತ್ಯ: ಶಾಸಕಿ ಸೌಮ್ಯಾ ರೆಡ್ಡಿ

Update: 2019-02-03 16:50 GMT

ಬೆಂಗಳೂರು, ಫೆ.3: ಆರೋಗ್ಯವಂತ ಸಮಾಜ ನಿರ್ಮಾಣದ ದೃಷ್ಟಿಯಿಂದ ಸಮಗ್ರ ಆರೋಗ್ಯದ ಪರಿಕಲ್ಪನೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದು ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಇಂದಿಲ್ಲಿ ಹೇಳಿದರು.

ರವಿವಾರ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಫರ್ಸ್ಟ್ ಆರ್ಯ ವೈಶ್ಯ(ಬಿ) ನೆಟ್‌ವರ್ಕಿಂಗ್ ಹಾಗೂ ಬಿಶಿಪ್ ಸಂಸ್ಥೆಯು ಹಮ್ಮಿಕೊಂಡಿದ್ದ ‘ಆರೋಗ್ಯಕ್ಕಾಗಿ ನಡಿಗೆ’ ಬೃಹತ್ ವಾಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಉತ್ತಮ ಆರೋಗ್ಯದ ಬಗ್ಗೆ ಕೇವಲ ಸೈದ್ಧಾಂತಿಕ ಜ್ಞಾನ ಹೊಂದಿದರೆ ಸಾಲದು. ಬದಲಿಗೆ ನಾವು ನಮ್ಮ ಆರೋಗ್ಯದ ಪರಿಣಾಮಕಾರಿ ಫಲಿತಾಂಶ ಪಡೆಯಲು ದೈನಂದಿನ ಚಟುವಟಿಕೆಗಳಲ್ಲಿ ಚಿಕ್ಕ-ಚಿಕ್ಕ ಬದಲಾವಣೆ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ನಾವು ಹಿರಿಯ ನಾಗರಿಕರೆಂದು ಸುಮ್ಮನೆ ಕುಳಿತುಕೊಳ್ಳುವುದು ತಪ್ಪು. ದಿನನಿತ್ಯ ನಡಿಗೆ ಜತೆ ಸ್ನೇಹಿತರೊಂದಿಗೆ ಕಷ್ಟ ಸುಖ ಮಾತನಾಡಿದರೆ ಮನಸ್ಸಿನ ಭಾರ ಇಳಿಯುತ್ತದೆ, ಮನಸ್ಸು ಆಹ್ಲಾದಗೊಳ್ಳುತ್ತದೆ ಎಂದ ಅವರು, ಆಹಾರ-ವಿಹಾರ, ಆಚಾರ ವಿಚಾರಗಳಲ್ಲಿ ಧನ್ಮಾತಕ ಬದಲಾವಣೆ ಕಂಡುಕೊಂಡರೆ, ಖಂಡಿತವಾಗಿಯೂ ಒಳ್ಳೆಯ ಆರೋಗ್ಯ ಪಡೆಯಲು ಸಾಧ್ಯ ಎಂದು ನುಡಿದರು.

ಆರೋಗ್ಯ ಎಂದರೆ ಕೇವಲ ದೈಹಿಕ, ಮಾನಸಿಕ ಅಥವಾ ಸಾಮಾಜಿಕ ಆರೋಗ್ಯವಷ್ಟೇ ಅಲ್ಲ. ಆಧ್ಯಾತ್ಮಿಕ ಆರೋಗ್ಯವೂ ಸೇರಿಕೊಳ್ಳುತ್ತದೆ. ಇನ್ನೂ, ಆಹಾರ ಪದ್ಧತಿ ಮತ್ತು ನಮ್ಮ ಸಾಮರ್ಥ್ಯವನ್ನು ಋಣಾತ್ಮಕ ಚಿಂತನೆಗೆ ಬಳಸುವುದು ಮತ್ತಿತರ ಕಾರಣಗಳು ಜನಾರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯ ಎನ್.ನಾಗರಾಜ್, ಬಿ ಶಿಪ್ ಅಧ್ಯಕ್ಷ ಶ್ರೀಧರ್, ಭಾಗ್ಯಲಕ್ಷ್ಮೀ ಸಂಸ್ಥೆಯ ನಾಗರಾಜು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News