ಟಿಇಟಿ ಪರೀಕ್ಷೆ ಅವ್ಯವಸ್ಥೆ: ಅಭ್ಯರ್ಥಿಗಳ ಪರದಾಟ

Update: 2019-02-03 16:52 GMT

ಬೆಂಗಳೂರು, ಫೆ.3: ರಾಜ್ಯಾದ್ಯಂತ ಶಿಕ್ಷಕರ ಆಯ್ಕೆಗಾಗಿ ರವಿವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕೊಠಡಿಗಳ ಅಲಭ್ಯತೆಯಿಂದಾಗಿ ಅಭ್ಯರ್ಥಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಬೆಂಗಳೂರು, ರಾಮನಗರ, ಶಿವಮೊಗ್ಗ ಸೇರಿದಂತೆ ಮತ್ತಿತರ ಕಡೆಗಳಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ ಸಂದರ್ಭದಲ್ಲಿ ಪರೀಕ್ಷೆ ಬರೆಯಲು ಬಂದವರಿಗೆ ಅಗತ್ಯವಾದ ಕೊಠಡಿಗಳಿಲ್ಲದೇ ಅಭ್ಯರ್ಥಿಗಳು ಪರದಾಡಿದರು. ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕ, ಪ್ರವೇಶಪತ್ರ, ಸ್ಥಳ ಸಂಪೂರ್ಣ ಮಾಹಿತಿ ನೀಡಲಾಗಿತ್ತು. ಆದರೆ, ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳಿಗೆ ಕೊಠಡಿಗಳು ದೊರೆಯದ ಕಾರಣ ಅರ್ಧಗಂಟೆಗೂ ತಡವಾಗಿ ಪರೀಕ್ಷೆ ಆರಂಭಿಸಲಾಗಿದೆ. ಶಿವಮೊಗ್ಗ ನಗರದ ಹಲವು ಕಡೆಯ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ 10.30 ಆದರೂ ಕೊಠಡಿಗಳು ದೊರೆಯಲೇ ಇಲ್ಲ.

ಸಾಮಾನ್ಯವಾಗಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಬೆ.10 ಗಂಟೆಗೆ ಆರಂಭವಾಗುತ್ತವೆ. ಆದರೆ, ಹಲವು ಕಡೆಗಳಲ್ಲಿ ನಿಗದಿಪಡಿಸಿದ ಸಮಯದ ನಂತರ ಅರ್ಧ ಗಂಟೆಯಾದರೂ ಪರೀಕ್ಷೆ ಆರಂಭವಾಗದಿದ್ದರಿಂದ ಅಭ್ಯರ್ಥಿಗಳು ಆತಂಕಕ್ಕೊಳಗಾಗಿದ್ದರು. ಶಿವಮೊಗ್ಗದಲ್ಲಿ ತಡವಾಗಿ ಪರೀಕ್ಷೆ ಆರಂಭವಾಗಿದ್ದನ್ನು ಮನಗಂಡು ಜಿಲ್ಲಾಧಿಕಾರಿ ಕೂಡಲೇ ಸ್ಥಳಕ್ಕಾಗಮಿಸಿ ಸ್ಥಳಾವಕಾಶ ಮಾಡಿಕೊಟ್ಟು, ಪರೀಕ್ಷೆ ಬರೆಯಲು ಹೆಚ್ಚಿನ ಸಮಯ ನೀಡುವುದಾಗಿ ಭರವಸೆ ನೀಡಿದರು.

ಅದೇ ರೀತಿಯಲ್ಲಿ ಪರೀಕ್ಷೆಗಳು ನಡೆದ ಹಲವೆಡೆ ನಡೆದಿದೆ ಎಂದು ವರದಿಯಾಗಿದ್ದು, ಪರೀಕ್ಷಾ ಪ್ರಾಧಿಕಾರದ ಬೇಜಾವಾಬ್ದಾರಿ ಧೋರಣೆಗೆ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News