×
Ad

ಬೆಂಗಳೂರು: ಎಂಟು ಸೈಬರ್ ಪೊಲೀಸ್ ಠಾಣೆ ತೆರೆಯಲು ಸಿದ್ಧತೆ

Update: 2019-02-03 23:10 IST

ಬೆಂಗಳೂರು, ಫೆ.3: ರಾಜ್ಯದ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳಿಗೆ ಮಟ್ಟ ಹಾಕುವ ಉದ್ದೇಶದಿಂದ ನಗರದಲ್ಲಿ 8 ವಿಶೇಷ ಸೈಬರ್ ಕ್ರೈಂ ಪೊಲೀಸ್ ಠಾಣೆ ತೆರೆಯಲು ಪೊಲೀಸ್ ಇಲಾಖೆ ಮುಂದಾಗಿದೆ.

ನಗರದಲ್ಲಿ ವಿಪರೀತವಾಗಿ ಸೈಬರ್ ಪ್ರಕರಣಗಳು ಅತಿಯಾಗುತ್ತಿವೆ. ಇವುಗಳನ್ನು ಸಧ್ಯಕ್ಕಿರುವ ಒಂದು ಠಾಣೆಯಿಂದ ನಿಯಂತ್ರಣ ಮಾಡಲು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ನಗರದ 8 ಡಿಸಿಪಿ ವಿಭಾಗದಲ್ಲಿ ತಲಾ ಒಂದೊಂದು ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ಮಾದಕದ್ರವ್ಯ ತಡೆ ಠಾಣೆಗಳನ್ನು (ಸಿಇಎನ್) ಸ್ಥಾಪಿಸುವಂತೆ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಇರುವ ಸೈಬರ್ ಕ್ರೈಂ ಠಾಣೆ ಯಲ್ಲಿ ಪ್ರತಿದಿನ 10 ರಿಂದ 30 ಎಫ್‌ಐಆರ್‌ಗಳು ದಾಖಲಾಗುತ್ತಿವೆ. 2017ನೇ ಸಾಲಿನಲ್ಲಿ 2 ಸಾವಿರ ಸೈಬರ್ ಪ್ರಕರಣ ದಾಖಲಾಗಿದ್ದರೆ 2018ರಲ್ಲಿ ಇದರ ಪ್ರಮಾಣ ಶೇ.160 ಹೆಚ್ಚಳದೊಂದಿಗೆ 5,200 ತಲುಪಿದೆ. ಈ ಪ್ರಮಾಣದ ಅಪರಾಧಗಳನ್ನು ನಿಯಂತ್ರಿಸಲು ಇನ್ಸ್ಪೆಕ್ಟರ್ ಸೇರಿ ಕೇವಲ 12 ಸಿಬ್ಬಂದಿ ಇದ್ದು, ಶೇ.10 ಪ್ರಕರಣಗಳನ್ನು ತನಿಖೆ ಮಾಡಲು ಸಾಧ್ಯವಾಗುತ್ತಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ.

ಅಜ್ಞಾತ ಸ್ಥಳದಲ್ಲಿ ಕುಳಿತು ಅಮಾಯಕರ ಬ್ಯಾಂಕ್ ಖಾತೆಗೆ, ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳ ವಿವರ ಪಡೆದು ಸೈಬರ್ ಖದೀಮರು ಕನ್ನ ಹಾಕುತ್ತಿದ್ದಾರೆ. ಇತ್ತಿಚೆಗೆ ಬ್ಯಾಂಕ್ ಅಧಿಕಾರಿಗಳ ಸೊಗಿನಲ್ಲಿ ಕರೆ ಮಾಡಿ ಡಿಜಿಪಿ ಎ.ಎಂ. ಪ್ರಸಾದ್ ಅಲ್ಲದೆ, ನ್ಯಾಯಮೂರ್ತಿಗಳು, ಐಎಎಸ್ ಅಧಿಕಾರಿಗಳ ಖಾತೆಗೆ ಕನ್ನ ಹಾಕಿದ್ದರು. ಇಂತಹ ಪ್ರಕರಣಗಳನ್ನು ಪತ್ತೆಹಚ್ಚಲು ವಿಶೇಷ ತಂತ್ರಜ್ಞಾನಗಳು ಹಾಗೂ ತರಬೇತಿ ಹೊಂದಿರುವ ಸಿಬ್ಬಂದಿ ಅಗತ್ಯವಿರುತ್ತದೆ. ಅದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಿ ಸೈಬರ್ ಖದೀಮರ ಮೇಲೆ ನಿಗಾವಹಿಸಿದರೆ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.

ಪೊಲೀಸರಿಗೆ ವಿಶೇಷ ತರಬೇತಿ: ನಗರದ 8 ವಿಭಾಗಗಳಲ್ಲಿ ತೆರೆಯುವ ಸಿಇಎನ್ ಠಾಣೆಗಳಿಗೆ ನೇಮಕ ಮಾಡುವ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಈಗಾಗಲೇ ಗೃಹ ಇಲಾಖೆ ಮತ್ತು ಇನ್ಪೊಸಿಸ್ ಸಂಸ್ಥೆ ಸಹಯೊಗದಲ್ಲಿ ಸಿಐಡಿ ಕಚೇರಿಯಲ್ಲಿ ಸೈಬರ್ ಲ್ಯಾಬ್ ತೆರೆಯಲಾಗಿದೆ. ಇಲ್ಲಿ ಸೈಬರ್ ಕ್ರೈಂ ಠಾಣೆ ಸಿಬ್ಬಂದಿಗೆ ತರಬೇತಿ ಹಾಗೂ ತನಿಖೆಗೆ ಬೇಕಾದ ನೆರವನ್ನು ಸೈಬರ್ ಲ್ಯಾಬ್‌ನಿಂದ ಪಡೆಯಲು ನಗರ ಪೊಲೀಸರು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News