ಆರ್ ಟಿಐ ಅರ್ಜಿ: ಕಪ್ಪು ಹಣ ಎಷ್ಟಿದೆ ಎಂಬ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದ ವಿತ್ತ ಸಚಿವಾಲಯ

Update: 2019-02-04 10:58 GMT

ಹೊಸದಿಲ್ಲಿ, ಫೆ.4: ಭಾರತೀಯರು ದೇಶ ವಿದೇಶಗಳಲ್ಲಿ ಹೊಂದಿರುವ ಕಪ್ಪು ಹಣ ಎಷ್ಟಿದೆ ಎಂದು ಮಾಹಿತಿ ನೀಡುವ ಮೂರು ವರದಿಗಳ ಪ್ರತಿಗಳನ್ನು ಒದಗಿಸಲು ವಿತ್ತ ಸಚಿವಾಲಯ ನಿರಾಕರಿಸಿದೆ. ಈ ವರದಿಗಳನ್ನು ಸಂಸದೀಯ ಸಮಿತಿಯೊಂದು ಪರಿಶೀಲಿಸುತ್ತಿದ್ದು, ಹೀಗಿರುವಾಗ ಮಾಹಿತಿ ಬಹಿರಂಗ ಪಡಿಸುವುದು ಸಾಧ್ಯವಿಲ್ಲವೆಂದು ಹೇಳಿದೆ. ಈ ವರದಿಗಳನ್ನು ಸರಕಾರಕ್ಕೆ ನಾಲ್ಕು ವರ್ಷಗಳಿಗೂ ಹಿಂದೆ ಸಲ್ಲಿಸಲಾಗಿತ್ತು.

ಆರ್‍ ಟಿಐ ಅರ್ಜಿಯೊಂದಕ್ಕೆ ಉತ್ತರಿಸಿದ ಸಚಿವಾಲಯ, ದಿಲ್ಲಿ ಮೂಲದ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆ್ಯಂಡ್ ಪಾಲಿಸಿ (ಎನ್‍ಐಪಿಎಫ್‍ಪಿ), ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಇಕನಾಮಿಕ್ ರಿಸರ್ಚ್ (ಎನ್‍ಸಿಎಇಆರ್) ಹಾಗೂ ನ್ಯಾಷನಲ್ ಇನ್‍ ಸ್ಟಿಟ್ಯೂಟ್ ಆಫ್ ಫಿನಾನ್ಶಿಯಲ್ ಮ್ಯಾನೇಜ್ಮೆಂಟ್, ಫರೀದಾಬಾದ್ (ಎನ್‍ಐಎಫ್‍ಎಂ) ವರದಿಗಳು ಸರಕಾರಕ್ಕೆ ಕ್ರಮವಾಗಿ ಡಿಸೆಂಬರ್ 30, 2013, ಜುಲೈ 18, 2014 ಹಾಗೂ ಆಗಸ್ಟ್ 21, 2014ರಂದು ಸಲ್ಲಿಸಲಾಗಿತ್ತು ಎಂದು  ತಿಳಿಸಿದೆ.

“ವರದಿಗಳನ್ನು ಹಾಗೂ ಅವುಗಳಿಗೆ ಸರಕಾರದ ಪ್ರತಿಕ್ರಿಯೆಯನ್ನು  ವಿತ್ತ ಸ್ಥಾಯಿ ಸಮಿತಿಯ ಮುಂದಿಡುವ ಸಲುವಾಗಿ ಲೋಕಸಭಾ ಸೆಕ್ರಟೇರಿಯಟ್ ಗೆ ಕಳುಹಿಸಲಾಗಿದೆ. ಸೆಕ್ರಟೇರಿಯಟ್ ಈಗಾಗಲೇ ಸಮಿತಿಯ ಮುಂದೆ ವರದಿಗಳನ್ನು ಇರಿಸಿದ್ದು ಅವುಗಳನ್ನು ಪರಿಶೀಲಿಸಲಿದೆ” ಎಂದು ಆರ್‍ಟಿಐ ಉತ್ತರ ತಿಳಿಸಿದೆ.

ಈ ವರದಿಗಳಲ್ಲಿನ ಮಾಹಿತಿಯನ್ನು ಬಹಿರಂಗ ಪಡಿಸಿದಲ್ಲಿ ಅದು ಸಂಸತ್ತಿನ ನಿಯಮಗಳನ್ನು ಉಲ್ಲಂಘಿಸಿದಂತೆ ಹಾಗೂ  ಈ ಮಾಹಿತಿಗೆ ಆರ್‍ಟಿಐ ಕಾಯಿದೆಯ ಸೆಕ್ಷನ್ 8(1)(ಸಿ) ಅನ್ವಯ ವಿನಾಯಿತಿಯಿದೆ ಎಂದು ತಿಳಿಸಿದೆ.

ಸದ್ಯ ಕಪ್ಪು ಹಣ ಎಷ್ಟಿದೆ ಎಂಬ ಬಗ್ಗೆ ಮಾಹಿತಿಯಿಲ್ಲವಾದರೂ ಅಮೆರಿಕಾದ ಗ್ಲೋಬಲ್ ಫೈನಾನ್ಶಿಯಲ್ ಇಂಟೆಗ್ರಿಟಿ ವರದಿ ಪ್ರಕಾರ 2005-2014 ಅವಧಿಯಲ್ಲಿ ಅಂದಾಜು 77,000 ಕೋಟಿ ಕಪ್ಪು ಹಣ ಭಾರತ ಪ್ರವೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News