ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ನಗರ ಪೊಲೀಸರು ದೇಶದಲ್ಲಿಯೇ ಮುಂಚೂಣಿ: ಎಂ.ಬಿ.ಪಾಟೀಲ್

Update: 2019-02-04 16:12 GMT

ಬೆಂಗಳೂರು, ಫೆ.4: ಆಧುನಿಕ ತಂತ್ರಜ್ಞಾನಗಳ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಸಂಚಾರ ದಟ್ಟಣೆ ಹಾಗೂ ರಸ್ತೆ ಸುರಕ್ಷತೆ ಕಾಪಾಡುವಲ್ಲಿ ಬೆಂಗಳೂರು ನಗರ ಪೊಲೀಸರು ದೇಶದಲ್ಲಿಯೇ ಮುಂಚೂಣಿಯಲ್ಲಿದ್ದಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಶ್ಲಾಘಿಸಿದ್ದಾರೆ.

ಸೋಮವಾರ ಅಶೋಕನಗರದ ಸುಲೈಮಾನ್ ಹಾಕಿ ಮೈದಾನದಲ್ಲಿ ಸಾರಿಗೆ ಇಲಾಖೆ, ಸಂಚಾರ ಪೊಲೀಸ್ ವಿಭಾಗದ ಸಹಯೋಗದಲ್ಲಿ ನಡೆದ ‘30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ನಾಗರಿಕರು ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಹೇಳಿದರು. ನಗರದಲ್ಲಿ ಅತಿಹೆಚ್ಚು ರಸ್ತೆ ಅಪಘಾತ ಸಂಭವಿಸುತ್ತಿದ್ದ 40 ಸ್ಥಳಗಳನ್ನು ಗುರುತಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆಯು ಹೆಚ್ಚಾಗುತ್ತಿರುವುದರಿಂದ ಸಂಚಾರ ದಟ್ಟಣೆಯಾಗುತ್ತಿದೆ. ಇದನ್ನು ತಡೆಗಟ್ಟಲು ನಗರ ಸಂಚಾರ ಪೊಲೀಸರು ಬಳಸುತ್ತಿರುವ ಆಧುನಿಕ ತಂತ್ರಜ್ಞಾನಗಳು ದೇಶದಲ್ಲಿಯೇ ಪ್ರಖ್ಯಾತಿಯಾಗಿವೆ ಎಂದು ನುಡಿದರು.

ದೇಶದಲ್ಲಿ ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ 1.50 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ರಾಜ್ಯದಲ್ಲಿ 4 ಸಾವಿರ ಜನರು ಮೃತಪಟ್ಟರೆ, ಬೆಂಗಳೂರು ನಗರದಲ್ಲಿ ಪ್ರತಿದಿನ ಇಬ್ಬರಂತೆ ಪ್ರತಿವರ್ಷ 611 ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ರಸ್ತೆ ಅಪಘಾತಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಸಂಘಸಂಸ್ಥೆಗಳು ಒಂದುಗೂಡಿ ಎಲ್ಲಾ ರೀತಿಯಲ್ಲೂ ಸವಾರರಿಗೆ ಸುರಕ್ಷತೆ ಒದಗಿಸುತ್ತಿದೆ ಎಂದು ಹೇಳಿದರು.

ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸುವುದರ ಮೂಲಕ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಜೊತೆ ಸಹಕರಿಸಬೇಕು. ಸಂಘ ಸಂಸ್ಥೆಗಳು ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಮಕ್ಕಳು ದೇಶದ ಮುಂದಿನ ಜವಾಬ್ಧಾರಿಯುತ ಪ್ರಜೆಗಳು. ಅವರಲ್ಲಿ ಈಗಿನಿಂದ ರಸ್ತೆ ಸುರಕ್ಷತೆಯ ಕುರಿತು ತಿಳಿಸಬೇಕು ಎಂದು ತಿಳಿಸಿದರು.

ಶಾಸಕ ಎನ್.ಎ.ಹಾರೀಸ್ ಮಾತನಾಡಿ, ನಗರದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸರಕಾರ ಇದಕ್ಕೆ ತಕ್ಕಂತೆ ರಸ್ತೆ ನಿರ್ಮಾಣ ಮತ್ತು ಸುರಕ್ಷತೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜನರು ಹೆಚ್ಚು ಸರಕಾರಿ ಸಾರಿಗೆಯನ್ನು ಬಳಸಿದರೆ ಸಂಚಾರ ದಟ್ಟಣೆ ಹಾಗೂ ವಾಯು ಮಾಲಿನ್ಯ ತಡೆಗಟ್ಟಬಹುದು ಎಂದು ನುಡಿದರು.

ಬಹುತೇಕ ಶಾಲಾ ವಾಹನಗಳು ರಸ್ತೆ ಬದಿ ನಿಲ್ಲಿಸುತ್ತಿರುವುದರಿಂದ ಪ್ರತಿನಿತ್ಯ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸಂಚಾರ ವಿಭಾಗವು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಪರಿಹಾರ ಕಲ್ಪಿಸಿಕೊಡಬೇಕು. ಗೃಹಸಚಿವರು ಹೆಚ್ಚು ಗಮನಹರಿಸಿ, ಸಂಚಾರದಟ್ಟಣೆ ಕಡಿಮೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಸಿಸಿಬಿ ಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಮಾತನಾಡಿ, ಸಂಚಾರ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳು ಸಂಭವಿಸುತ್ತಿವೆ. ದೇಶದಲ್ಲಿ ವರ್ಷಕ್ಕೆ 1.50 ಲಕ್ಷ ಜನರು ರಸ್ತೆ ಅಪಘಾತಗಳಿಂದ ಸಾವನ್ನಪ್ಪಿದ್ದಾರೆ. ನಗರದಲ್ಲಿಯೂ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅಪಘಾತಗಳ ಸಂಖ್ಯೆ ಇಳಿಕೆಯಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಚಾರ ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಪಥಸಂಚಲನ ನಡೆಸಿದ ಶಾಲಾ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜು, ಸಾರಿಗೆ ಇಲಾಖೆ ಆಯುಕ್ತ ಹಿಕ್ಕೇರಿ, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಬಿ.ಕೆ.ಸಿಂಗ್, ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News