×
Ad

ಭೂರಹಿತ ದಲಿತರಿಗೆ ಭೂಮಿ ಹಂಚಿಕೆಗೆ ಆಗ್ರಹಿಸಿ ಧರಣಿ

Update: 2019-02-04 21:46 IST

ಬೆಂಗಳೂರು, ಫೆ.4: ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರಕಾರವು ಭೂರಹಿತ ದಲಿತರಿಗೆ ಭೂಮಿ ಹಂಚಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ವತಿಯಿಂದ ಧರಣಿ ನಡೆಸಲಾಯಿತು. 

ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು, ನಿವೇಶನ ರಹಿತ ಎಲ್ಲರಿಗೂ ನಿವೇಶನ ನೀಡಬೇಕು ಹಾಗೂ ಮನೆ ಕಟ್ಟಿಕೊಳ್ಳಲು ಐದು ಲಕ್ಷ ಅನುದಾನ ನೀಡಬೇಕು. ಬೇಸಾಯದಲ್ಲಿ ತೊಡಗಲು ಬಯಸುವ ಭೂರಹಿತ ದಲಿತರಿಗೆ ಭೂಮಿ ನೀಡಬೇಕು. ಅದೇ ರೀತಿ, ಪ್ರತಿ ತಾಲೂಕಿನಲ್ಲೂ 500 ಎಕರೆ ಭೂಮಿ ಖರೀದಿಸಿ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಮಿತಿ ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಹರಳಹಳ್ಳಿ, ಪ್ರಸ್ತುತ ಸಾಲಿನಲ್ಲಿ ದಲಿತರಿಗೆ ಮೀಸಲಿಟ್ಟ ಅಭಿವೃದ್ಧಿ ಹಣ ಸಮರ್ಪಕವಾಗಿ ಜಾರಿಯಾಗಬೇಕು. ಜತೆಗೆ ಈ ಸಂಬಂಧ ಜಾರಿ ಮಾಡದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ನಿವೇಶನ ರಹಿತ ದಲಿತರಿಗೂ 4 ಗುಂಟೆ ಭೂಮಿ ನೀಡಬೇಕೆಂದು ಆಗ್ರಹಿಸಿದರು.

ಪ್ರಸಕ್ತ ಸಾಲಿನಲ್ಲಿ 29 ಸಾವಿರ ಕೋಟಿ ಅನುದಾನ ದಲಿತರಿಗೆ ನೀಡಿದ್ದೇವೆ ಎಂದು ಹೇಳುವ ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರವು ನಿರ್ದಿಷ್ಟವಾಗಿ ದಲಿತರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಸ್ಪಷ್ಟವಾದ ಯಾವುದೇ ಯೋಜನೆಯನ್ನು ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ಈ ಸಾಲಿನ ಬಜೆಟ್‌ನಲ್ಲಿ ದಲಿತರ ಅಭಿವೃದ್ಧಿಗೆ ಹೆಚ್ಚಿನ ಹಣ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿ ಗ್ರಾಮದಲ್ಲೂ ದಲಿತರಿಗೆ ಪ್ರತ್ಯೇಕ ರುದ್ರ ಭೂಮಿ ಮೀಸಲಿಡಬೇಕು. ಜೊತೆಗೆ, ದಲಿತರ ಸಾಲ ಮನ್ನಾ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ದಲಿತ ಕುಟುಂಬಗಳಿಗೆ ಕಡ್ಡಾಯವಾಗಿ 200 ದಿನ ಉದ್ಯೋಗ ಒದಗಿಸಬೇಕು. ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯಿದೆ ರಾಜ್ಯ ವ್ಯಾಪ್ತಿ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಸಿಎಂ ಕುಮಾರಸ್ವಾಮಿ ಉಪಯೋಜನೆ ಜಾರಿ ಮಾಡದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಮನವಿ ಮಾಡಿದರು.

ಸಂಚಾಲಕ ಎನ್.ನಾಗರಾಜ್ ಮಾತನಾಡಿ, ದೇವದಾಸಿ ಮಹಿಳೆಯರ ಮಾಸಿಕ ಸಹಾಯ ಧನವನ್ನು ಐದು ಸಾವಿರಕ್ಕೆ ಏರಿಕೆ ಮಾಡಬೇಕು. ಗಣತಿಯಲ್ಲಿ ಬಿಟ್ಟು ಹೋದ ದೇವದಾಸಿ ಮಹಿಳೆಯರ ಪಟ್ಟಿಯನ್ನು ಪರಿಗಣಿಸಿ ಅವರಿಗೂ ಸೌಲಭ್ಯ ವಿಸ್ತರಣೆ ಮಾಡಬೇಕು. ಮಂಗಳವಾದ್ಯ ಕಲಾವಿದರನ್ನು ಗಣತಿ ಮಾಡಿ ತಲಾ ಐದು ಸಾವಿರ ಪಿಂಚಣಿ ನೀಡಬೇಕು ಎಂದು ಅವರು ಹೇಳಿದರು.

ಸರಕಾರಿ ಕ್ಷೇತ್ರದಲ್ಲಿರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ಖಾಸಗಿ ಕ್ಷೇತ್ರದಲ್ಲಿ ಹಾಗೂ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ನೀಡಬೇಕು. ದಲಿತರ ನಿರುದ್ಯೋಗಿಗಳಿಗೆ 10 ಸಾವಿರ ನಿರುದ್ಯೋಗ ಭತ್ತೆ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಈ ಬೇಡಿಕೆಗಳು ಈಡೇರಿಸದಿದ್ದಲ್ಲಿ, ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಸಮಿತಿಯ ಸಂಚಾಲಕರಾದ ಎನ್.ರಾಜಣ್ಣ, ಎಚ್.ಜಿ.ನಾಗಣ್ಣ, ಮಾಯಶ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News