×
Ad

ಹುಟ್ಟುಹಬ್ಬ-ವಿವಾಹ ವಾರ್ಷಿಕೋತ್ಸವ ದಿನ ಎಚ್‌ಎಸ್‌ಆರ್ ಠಾಣೆಯ ಪೊಲೀಸರಿಗೆ 2 ದಿನ ವಿಶೇಷ ರಜೆ !

Update: 2019-02-04 21:54 IST

ಬೆಂಗಳೂರು, ಫೆ.4: ಸದಾ ಕೆಲಸದ ಒತ್ತಡದಲ್ಲೇ ಜೀವನ ಸಾಗಿಸುವ ಪೊಲೀಸ್ ಸಿಬ್ಬಂದಿಗೆ ರಜೆ ತೆಗೆದುಕೊಳ್ಳುವುದು ಕಷ್ಟಕರ ಎನ್ನುವ ಮಾತಿದೆ. ಆದರೆ, ಇದರ ನಡುವೆ, ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ವೊಬ್ಬರು, ತನ್ನ ಸಿಬ್ಬಂದಿಗೆ ಎರಡು ದಿನ ವಿಶೇಷ ರಜೆ ಘೋಷಿಸಿ, ಸಿಬ್ಬಂದಿಯ ಮನ ಗೆದಿದ್ದಾರೆ.

ನಗರದ ಎಚ್‌ಎಸ್‌ಆರ್ ಪೊಲೀಸ್ ಠಾಣೆಯ ಸಿಬ್ಬಂದಿಗೆ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ದಿನದಂದು ಕಡ್ಡಾಯ ವಾರದ ರಜೆಯನ್ನಾಗಿ ಠಾಣೆಯ ಇನ್‌ಸ್ಪೆಕ್ಟರ್ ಎಸ್.ಆರ್ ರಾಘವೇಂದ್ರ ಅವರು ಘೋಷಣೆ ಮಾಡಿದ್ದಾರೆ. ವಾರದಲ್ಲಿ ಯಾವುದೇ ದಿನ ರಜೆ ಇರಲಿ ಅದರ ಬದಲಿಗೆ ಸಿಬ್ಬಂದಿಯ ಹುಟ್ಟುಹಬ್ಬದ ದಿನ ಹಾಗೂ ವಿವಾಹ ವಾರ್ಷಿಕೋತ್ಸವ ದಿನದಂದು ರಜೆ ಪಡೆದು ಕೊಳ್ಳಬಹುದು ಎಂದು ಅವರು ಠಾಣೆಯ ನೋಟಿಸ್ ಫಲಕದಲ್ಲಿ ಹಾಕಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒತ್ತಡದ ಬದುಕಿನಲ್ಲಿ ನಿಮ್ಮ ಕುಟುಂಬದವರು ನಿಮ್ಮ ಪ್ರೀತಿ ನಿರೀಕ್ಷೆ ಮಾಡುತ್ತಿರುತ್ತಾರೆ. ಇದಕ್ಕಾಗಿ ಹುಟ್ಟುಹಬ್ಬದ ದಿನ ಹಾಗೂ ವಿವಾಹದ ದಿನ ನಿಮ್ಮ ಕುಟುಂಬದ ಜೊತೆ ಕಳೆಯಿರಿ ಎಂದು ಇನ್‌ಸ್ಪೆಕ್ಟರ್ ಸಿಬ್ಬಂದಿಗೆ ಪತ್ರದ ಮೂಲಕ ಉಡುಗೊರೆ ನೀಡಿದ್ದಾರೆ.

ಹುಟ್ಟುಹಬ್ಬದ ದಿನವನ್ನು ಹಾಗೂ ನಿಮ್ಮ ವಿವಾಹದ ದಿನವನ್ನು ಹೆಚ್ಚ ಅರ್ಥಪೂರ್ಣವಾಗಿ ಆಚರಿಸಲು ಆ ದಿನಗಳಂದು ಕಡ್ಡಾಯವಾಗಿ ವಾರದ ರಜೆಯನ್ನು ಬಳಸಿಕೊಳ್ಳಲು ಸೂಚಿಸಿರುತ್ತೇನೆ. ಇದರಿಂದ ನೀವುಗಳು ವೃತ್ತಿ ಜೀವನದಲ್ಲಿ ಒತ್ತಡವಿಲ್ಲದೆ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲಿ ಎಂಬುದು ನನ್ನ ಆಶಯ ಎಂದು ಇನ್‌ಸ್ಪೆಕ್ಟರ್ ಎಸ್.ಆರ್.ರಾಘವೇಂದ್ರ ಸಿಬ್ಬಂದಿಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News