ಬಿಬಿಎಂಪಿ ಸಾಲದ ಶ್ವೇತಪತ್ರ ಹೊರಡಿಸಲು ಆಯುಕ್ತರಿಗೆ ಪತ್ರ

Update: 2019-02-04 16:26 GMT

ಬೆಂಗಳೂರು, ಫೆ.3: ಬಿಬಿಎಂಪಿ ಮಾಡಿರುವ ಸಾಲದ ಬಗ್ಗೆ ಶ್ವೇತಪತ್ರ ಹೊರಡಿಸಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ.

ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು 2018 ನ.17ರಂದು 1989ರಿಂದ ಇಲ್ಲಿಯವರೆಗೆ ಬಿಬಿಎಂಪಿಯಲ್ಲಿ ಯಾವ ಯಾವ ಪಕ್ಷಗಳ ಆಡಳಿತಾವಧಿಯಲ್ಲಿ ಎಷ್ಟೆಷ್ಟು ಸಾಲ ಮಾಡಲಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದರು.

ಪದ್ಮನಾಭರೆಡ್ಡಿಯವರು ಬರೆದ ಪತ್ರದ ಹಿನ್ನೆಲೆ ಡಿಸಿಎಂ ಪರಮೇಶ್ವರ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜನಾಮೂರ್ತಿ ಅವರಿಗೆ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಉಪಮುಖ್ಯಮಂತ್ರಿಗಳ ಸೂಚನೆಯಂತೆ ಅಪರ ಮುಖ್ಯ ಕಾರ್ಯದರ್ಶಿ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಹಿಂದಿನ ಆಡಳಿತಾಧಿಕಾರಿಗಳ ಅವಧಿಯಲ್ಲಿ ಮಾಡಲಾದ ಸಾಲ ತೀರಿಸಲು ಬಿಜೆಪಿ ಆಡಳಿತದ ಸಂದರ್ಭ ಬಿಬಿಎಂಪಿ 11 ಪಾರಂಪರಿಕ ಕಟ್ಟಡ ಅಡಮಾನವಿಟ್ಟು ಸಾಲ ಪಡೆದಿತ್ತು. ಈ ವಿಚಾರದಲ್ಲಿ ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ಹಾಗೂ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರ ನಡುವೆ ಆಗಾಗ ಪರಸ್ಪರ ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತಿದ್ದವು. ಹೀಗಾಗಿ ಪದ್ಮನಾಭರೆಡ್ಡಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದು 1989ರಿಂದ ಈ ವರೆಗೆ ಯಾರ-ಯಾರ ಆಡಳಿತ ಅವಧಿಯಲ್ಲಿ ಎಷ್ಟೆಷ್ಟು ಸಾಲ ಮಾಡಲಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿದ್ದರು.

ವಿರೋಧ ಪಕ್ಷದ ನಾಯಕರ ಪತ್ರಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಂದಿಸಿದ್ದು, ಬಿಬಿಎಂಪಿ ಆಯುಕ್ತರಿಗೆ ಈ ಕುರಿತು ಶೀಘ್ರ ಕ್ರಮಕ್ಕೆ ಸೂಚಿಸಿದ್ದಾರೆ. ಯಾರ-ಯಾರ ಅವಧಿಯಲ್ಲಿ ಎಷ್ಟು ಸಾಲ ಮಾಡಲಾಗಿತ್ತು ಎಂಬುದು ಶ್ವೇತಪತ್ರ ಮೂಲಕ ತಿಳಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News