ಸಮಾನ ಕೆಲಸಕ್ಕೆ ಸಮಾನ ವೇತನ, ಕಾರ್ಮಿಕ ಕಾಯ್ದೆ ಜಾರಿಗೆ ಆಗ್ರಹಿಸಿ ಧರಣಿ
ಬೆಂಗಳೂರು, ಫೆ.4: ಸಮಾನ ಕೆಲಸಕ್ಕೆ ಸಮಾನ ವೇತನ, ಕಾರ್ಮಿಕ ಕಾಯ್ದೆ ಜಾರಿ ಸೇರಿದಂತೆ ಮತ್ತಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು ನಗರದಲ್ಲಿಂದು ಪ್ರತಿಭಟನಾ ಧರಣಿ ನಡೆಸಿದರು.
ನಗರದ ಸಿಟಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಕಿಯರ ಸಂಘದ ನೇತೃತ್ವದಲ್ಲಿ ಇಲ್ಲಿನ ಸ್ವಾತಂತ್ರ ಉದ್ಯಾನವನದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಕನಿಷ್ಠ ವೇತನ, ಕನಿಷ್ಠ ಮಾಸಿಕ ಪಿಂಚಣಿ ಸೇರಿದಂತೆ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ಬಿ.ಆರ್.ಜಯಲಕ್ಷ್ಮಿ, ಕಳೆದ 44 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕನಿಷ್ಠ ಗೌರವಧನ ಪಡೆದು ಸಮುದಾಯಕ್ಕಾಗಿ, ಸರಕಾರದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿರುವ ನಿಷ್ಠಾವಂತ ಕಾರ್ಯಕರ್ತೆಯರಾಗಿದ್ದೇವೆ. ಆದರೆ, ನಮಗೆ ಕನಿಷ್ಠ ವೇತನ ನೀಡಲು ಸರಕಾರ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
1975ನೇ ಸಾಲಿನಲ್ಲಿ ಈ ಯೋಜನೆ ಜಾರಿಗೆ ಬಂದಾಗ ಗೌರವಧನ ಆಧಾರದಲ್ಲಿ ಮಧ್ಯಾಹ್ನದವರೆಗೆ ಮಾತ್ರ ಕಾರ್ಯ ನಿರ್ವಹಿಸಬೇಕಿತ್ತು. ಆದರೆ, 2011ರಿಂದ ಸಹಾಕಿಯರ ಸಮಯದ ವಿಸ್ತರಣೆ ಮಾಡಿದ ಸರಕಾರ ಮಕ್ಕಳ ತಾಯಂದಿರ ಬಹುತೇಕ ಜವಾಬ್ದಾರಿಯನ್ನು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮೇಲೆ ಹೇರಿದೆ ಎಂದು ಅವರು ದೂರಿದರು.
ನಂತರ ಮಾತನಾಡಿದ ಸಂಘದ ಕಾರ್ಯದರ್ಶಿ ಉಮಾಮಣಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಪ್ರತಿ ತಿಂಗಳು ನೀಡುವ ಗೌರವ ಧನವು ಇತ್ತೀಚಿಗೆ ವಿಳಬವಾಗುತ್ತಿದೆ. ತಿಂಗಳ 5ನೇ ತಾರೀಖುಯೊಳಗೆ ನೀಡಬೇಕೆಂದಿದ್ದರೂ, ಸೂಕ್ತ ಸಮಯಕ್ಕೆ ದೊರೆಯುತ್ತಿಲ್ಲ ಏಕೆ ಎಂದು ಪ್ರಶ್ನೆ ಮಾಡಿದರು.
1982ನೇ ಸಾಲಿನಲ್ಲಿ ಬರೀ 172 ರೂ. ಗೌರವಧನ ಇರುವಾಗ, 50 ರೂಪಾಯಿ ಮಾತ್ರ ಪ್ರಭಾರ ಭತ್ತೆ ಇದ್ದಾಗಿದ್ದು, ಇದುವರೆಗೂ ಹೆಚ್ಚು ಮಾಡದೆ, ಪ್ರಭಾರ ಕೇಂದ್ರದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವೇ ಎಂದ ಅವರು, ಕಾರ್ಮಿಕರ ಕಾಯ್ದೆಯಂತೆ ವಿವಿಧ ಕೆಲಸದ ವರ್ಗದವರಿಗೆ ವೇತನವನ್ನು ಹೆಚ್ಚಿಸಬೇಕೆಂದು ಕೇಂದ್ರ ಸರಕಾರವು ಅಧಿಸೂಚನೆ ಹೊರಡಿಸಿದೆ. ರಾಜ್ಯವೂ ಇದೆ ಮಾದರಿಯಲ್ಲಿ ಕಳೆದ 40 ವರ್ಷಗಳಿಂದ ದುಡಿಯುತ್ತಿರುವ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಕಾಯ್ದೆ ಅನ್ವಯ ವೇತನ ಹೆಚ್ಚಳ ಮಾಡುವರೆಗೂ ಹೋರಾಟ ಮುಂದುವರೆಸಲಾಗುವುದು ಎಂದು ತಿಳಿಸಿದರು.
ಬೇಡಿಕೆಗಳು:
-ಸೇವಾವಧಿ ಆಧಾರದಲ್ಲಿ ಗೌರವಧನ/ವೇತನ ಹೆಚ್ಚಳ
-ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಪ್ರತಿ ತಿಂಗಳ 5 ನೆ ತಾರೀಕಿನೊಳಗೆ ನೀಡಬೇಕು.
-ಅಂಗನವಾಡಿ ಕೇಂದ್ರದ ಸ್ವಚ್ಛತೆಗೆ ನೀಡುತ್ತಿರುವ ಹಣವನ್ನು ಹೆಚ್ಚಳ ಮಾಡಬೇಕು.
-ಬೇಸಿಗೆ ರಜೆ ಅಂಗನವಾಡಿಗೂ ನೀಡಬೇಕು
-ಮಾತೃವಂದನಾ ಹಾಗೂ ಮಾತೃಶ್ರೀ ಯೋಜನೆಗಳಿಗೆ ದುಡಿಸಿಕೊಳ್ಳುವುದಕ್ಕೆ ಸಂಭಾವನೆ ನೀಡಬೇಕು.
-ಕಾರ್ಯಕರ್ತೆಯರಿಗೆ ಮೇಲ್ವಿಚಾರಕರ ಹುದ್ದೆ ನೀಡುವಾಗ ಇಲಾಖೆ ಪರೀಕ್ಷೆ ಮಾಡಿ ನೇಮಿಸಬೇಕು. ಈ ಹಿಂದೆ ಲೋಕ ಸೇವಾ ಆಯೋಗ ನಡೆಸಿದ ಪರೀಕ್ಷೆ ರದ್ದು ಮಾಡಿ, ಸೇವಾ ಹಿರಿತನದ ಆಧಾರದಲ್ಲಿ ಭಡ್ತಿ ನೀಡಬೇಕು.
-ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು.