ಜೀತ ಕಾರ್ಮಿಕರಿಂದ ಮಾನವ ಹಕ್ಕು ಆಯೋಗಕ್ಕೆ ದೂರು: ಶೋಷಕರ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರು: ಫೆ.5: ಕಳೆದ ಆರು ತಿಂಗಳಿಂದ ನಮ್ಮನ್ನು ಜೀತ ಪದ್ಧತಿಯಡಿ ಶೋಷಣೆ ಮಾಡಿದ ಸಕಲೇಶಪುರದ ಇಟ್ಟಿಗೆ ಗೂಡಿನ ಮಾಲಕರ ವಿರುದ್ಧ ಕ್ರಮ ಜರುಗಿಸಬೇಕೆಂದು ಜೀತ ಕಾರ್ಮಿಕರು ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಇರುಳರ್ ಸಮುದಾಯಕ್ಕೆ ಸೇರಿದ 24 ಕಾರ್ಮಿಕರನ್ನು ಆರು ತಿಂಗಳ ಕಾಲ ಸಕಲೇಶಪುರದ ಇಟ್ಟಿಗೆ ಗೂಡೊಂದರಲ್ಲಿ ಜೀತ ಕಾರ್ಮಿಕರಾಗಿ ಇಟ್ಟುಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಇದರಲ್ಲಿ 4 ರಿಂದ 16 ವರ್ಷದೊಳಗಿನ 6 ಜನ ಮಕ್ಕಳು ಕೆಲಸ ಮಾಡುವವರು, ಕೆಲಸ ಮಾಡದೇ ಇರುವ ಕೂಸುಗಳು ಒಳಗೊಂಡಿದ್ದಾರೆ. ಇವರೆಲ್ಲರೂ ತಮಿಳು ನಾಡಿನ ಕೃಷ್ಣಗಿರಿಯಿಂದ ಇಬ್ಬರು ಮಾನವ
ಕಳ್ಳಸಾಗಾಣೆದಾರರಿಂದ ಸಾಗಿಸಲ್ಪಟ್ಟು, ಇಟ್ಟಿಗೆ ಗೂಡಿನ ಮಾಲಕರು ಇವರುಗಳನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದರು.
ಫೆಬ್ರವರಿ 4 ರಂದು ಸಕಲೇಶಪುರದ ತಹಶೀಲ್ದಾರ್‌ರವರು ಇಟ್ಟಿಗೆ ಗೂಡಿಗೆ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ. ಜೀತ ಕಾರ್ಮಿಕರು ಒಟ್ಟು ಐದು ಕಟುಂಬದವರಾಗಿದ್ದು, ಇವರಲ್ಲಿ 10 ಚಿಕ್ಕ ಮಕ್ಕಳು, 4 ಹದಿಹರೆಯದವರು ಮತ್ತು 10 ವಯಸ್ಕರು ಇದ್ದರು ಎಂಬುದು ಕಂಡು ಬಂದಿದೆ.
ಕಾರ್ಮಿಕರನ್ನು ಇಟ್ಟಿಗೆ ಗೂಡಿಗೆ ಕರೆದೊಯ್ಯುವ ಮೊದಲು, ಮಾಲಕರು ದಿನಕ್ಕೆ ವೇತನದಂತೆ ಗಂಡಸರಿಗೆ 500 ರೂ. ಮತ್ತು ಹೆಂಗಸರಿಗೆ 400 ರೂ. ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದ್ಯಾವ ಭರವಸೆಯನ್ನು ಮಾಲಕರು ಈಡೇರಿಸದೆ, ನಮಗೆ ಅತೀವ ಕಷ್ಟ ನೀಡಿದರು ಎಂದು ಜೀತಕಾರ್ಮಿಕ ಮುತ್ತುರಾಜ್ ಅಳಲನ್ನು ತೋಡಿಕೊಂಡಿದ್ದಾರೆ.
ಯಾವುದೇ ವಸತಿ ಸೌಕರ್ಯವನ್ನು ನೀಡದೆ ಟೆಂಟ್ಗಳನ್ನು ಹಾಕಿಕೊಳ್ಳಲು ಕೇವಲ ಟಾರ್ಪಾಲಿನ್ ಶೀಟ್ಗಳನ್ನು ನೀಡಿದ್ದರು. ಅವರಿಗೆ ಯಾವುದೇ ವಿದ್ಯುತ್ ಅಥವಾ ಶೌಚಾಲಯ ವ್ಯವಸ್ಥೆ ನೀಡಲಾಗಿರಲಿಲ್ಲ ಹಾಗೂ ಅವರು ಕಟ್ಟಿಗೆ ಬಳಸಿಯೇ ಅಡಿಗೆ ತಯಾರಿಸಿಕೊಳ್ಳಬೇಕಾಗಿತ್ತು. ಕೆಲವು ಕಾರ್ಮಿಕರು ಶವಸಂಸ್ಕಾರಕ್ಕಾಗಿ ಮನೆಗೆ ಮರಳಬಹುದೆ ಎಂದು ಕೇಳಿದಾಗ ಮಾಲಕರು ನಿರಾಕರಿಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ವಾರಕ್ಕೊಮ್ಮೆ ಕಾರ್ಮಿಕರಿಗೆ ಬೇಕಾದ ದಿನಸಿ ವಸ್ತುಗಳನ್ನು ಕೊಳ್ಳಲು ಮಾರುಕಟ್ಟೆಗೆ ಹೋಗಲು ಅವಕಾಶ ನೀಡಲಾಗುತ್ತಿತ್ತು ಆದಾಗ್ಯೂ, ಅವರುಗಳು ಮಾರುಕಟ್ಟೆಗೆ ಹೋಗುವಾಗ ತಮ್ಮ ಕುಟುಂಬದವರನ್ನು ಕಾರ್ಖಾನೆಯಲ್ಲೇ ಬಿಟ್ಟು ಹೋಗಬೇಕಾಗಿತ್ತು. ಹೀಗಿದ್ದಾಗ್ಯೂ ಮಾಲಕರ ಕಡೆಯವರು ಮೋಟಾರ್ ಸೈಕಲ್ನಲ್ಲಿ ಬಂದು ಕಾರ್ಮಿಕರನ್ನು ಮಾರುಕಟ್ಟೆಯಲ್ಲಿ ಹಿಂಬಾಲಿಸುತ್ತಿದ್ದರು ಹಾಗೂ ಅವರ ಮೇಲೆ ನಿಗಾ ಇಡುತ್ತಿದ್ದರು. ಕಾರ್ಮಿಕರು ಕುಟುಂಬ ಸಮೇತವಾಗಿ ಹೊರಗಡೆ ಹೋಗಲು ಅವರಿಗೆ ಅನುಮತಿಯಿರಲಿಲ್ಲ. ಈ ರೀತಿಯಾಗಿ, ಮಾಲಕರು ಕಾರ್ಮಿಕರ ಸ್ವಾತಂತ್ರವನ್ನು ಕಸಿದುಕೊಂಡು, ಅವರನ್ನು ಬಲವಂತವಾಗಿ ಜೀತದಲ್ಲಿಟ್ಟುಕೊಂಡಿದ್ದರು.
ಚಿಕ್ಕ ಮಗುವೊಂದು ಕಾರ್ಖಾನೆಯಲ್ಲಿ ನಾಯಿಯಿಂದ ಕಚ್ಚಿಸಿಕೊಂಡು ತೀವ್ರ ಗಾಯಗೊಂಡಾಗ್ಯೂ, ಮಾಲಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಯಾವುದೇ ಹಣವನ್ನು ನೀಡಿರಲಿಲ್ಲ. ಅಂತಿಮವಾಗಿ, ಕಾರ್ಮಿಕರು ತಮ್ಮ ತಮ್ಮೊಳಗೆ ಹಣವನ್ನು ಸಂಗ್ರಹಿಸಿ ಮಗುವನ್ನು ಆಸ್ಪತ್ರೆಗೆ ತೋರಿಸುವಂತಾಯಿತು. ಕೆಲಸದ ಸಮಯದಲ್ಲಿ ಗಾಯಗೊಂಡ ಒಬ್ಬ ಮಹಿಳೆಯನ್ನೂ ಸಹ ಆಸ್ಪತ್ರೆಗೆ ಹೋಗಲು ಅನುಮತಿಸಿರಲಿಲ್ಲ. ಮಾಲಕರು ಕೆಟ್ಟ ಕೆಟ್ಟ ಮಾತುಗಳಿಂದ ನಿಂದಿಸುತ್ತಿದ್ದರು ಎಂದು ಕಾರ್ಮಿಕರು ತಮ್ಮ ನೋವನ್ನು ಮಾನವ ಹಕ್ಕು ಆಯೋಗದ ಮುಂದೆ ತೋಡಿಕೊಂಡಿದ್ದಾರೆ.
ಕಾರ್ಮಿಕರಿಗೆ ಬೆಳಗ್ಗೆ 6ರಿಂದ ಸಂಜೆ 7ರವರೆಗೆ ಕೆಲಸ ಮಾಡಲು ಬಲವಂತ ಮಾಡಲಾಗುತ್ತಿದ್ದು, ಮಧ್ಯಾಹ್ನ ಊಟದ ವೇಳೆಗೆ ಕೇವಲ 10 ರಿಂದ 15 ನಿಮಿಷ ಬಿಡುವು ನೀಡುತ್ತಿದ್ದರು. ತಮ್ಮ ಮ್ಕಕಳಿಗೆ ಸ್ನಾನ ಮಾಡಿಸಲು ಸಹ ಮಾಲಕರು ವಿರಾಮ ನೀಡದೆ ಕೆಲಸ ಮಾಡಿಸುತ್ತಿದ್ದರು ಎಂದು ಕಾರ್ಮಿಕರು ಆರೋಪಿಸುತ್ತಾರೆ. ಹೀಗಾಗಿ ಇಟ್ಟಿಗೆ ಮಾಲಕರ ಶೋಷಣೆಯ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ, ಜೀತ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮಾನವ ಹಕ್ಕು ಆಯೋಗಕ್ಕೆ ಮನವಿ ಮಾಡಲಾಗಿದೆ.