×
Ad

ಮೇಕೆದಾಟು-ಎತ್ತಿನಹೊಳೆ ಯೋಜನೆ ಜಾರಿ: ವಜುಭಾಯಿ ವಾಲಾ

Update: 2019-02-06 20:32 IST

ಬೆಂಗಳೂರು, ಫೆ.6: ‘ಮೇಕೆದಾಟು’ ಬ್ಯಾಲೆನ್ಸಿಂಗ್ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸುವುದಕ್ಕೆ ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹರ್ಷ ವ್ಯಕ್ತಪಡಿಸಿದರು.

ಬುಧವಾರ ವಿಧಾನಸೌಧದಲ್ಲಿನ ವಿಧಾನಸಭೆ ಸಭಾಂಗಣದಲ್ಲಿ ಉಭಯ ಸದನಗಳ ಸದಸ್ಯರ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಡಿಯ ಕಾಮಗಾರಿಗಳ ಪ್ರಗತಿಯನ್ನು ತ್ವರಿತಗೊಳಿಸಲಾಗುತ್ತಿದೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಎಡದಂಡೆ ಕಾಲುವೆಯಡಿಯಲ್ಲಿ ಉತ್ತಮ ಮೇಲುಸ್ತುವಾರಿಗಾಗಿ 1050 ಕೋಟಿ ರೂ.ಮೊತ್ತದ ಮೇಲ್ವಿಚಾರಣ ನಿಯಂತ್ರಣ ಮತ್ತು ದತ್ತಾಂಶ ಆರ್ಜನೆ (SCADA)ದ ಸ್ವಯಂಚಾಲನೆ ಹಾಗೂ ಔಗೋಳಿಕ ಮಾಹಿತಿ ವ್ಯವಸ್ಥೆ(GIS) ಕಾಮಗಾರಿಗಾಗಿ ಟೆಂಡರ್ ಅಂತಿಮಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಮೇವಿನ ಕೊರತೆಯನ್ನು ನಿರ್ವಹಿಸುವುದಕ್ಕಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಹಸಿರು ಮೇವನ್ನು ಬೆಳೆಸಲು ರೈತರಿಗೆ 8.11 ಲಕ್ಷ ಮೇವು ‘ಮಿನಿಕಿಟ್’ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಈ ಕಾರ್ಯಕ್ರಮದಿಂದ ಸುಮಾರು 30 ಲಕ್ಷ ಟನ್‌ಗಳಷ್ಟು ಹಸಿರು ಮೇವಿನ ಉತ್ಪಾದನೆಯಾಗುಬಹುದೆಂದು ನಿರೀಕ್ಷಿಸಲಾಗಿದೆ ಎಂದು ರಾಜ್ಯಪಾಲ ಹೇಳಿದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 2018-19ನೆ ಸಾಲಿನ ಜ.31ರವರೆಗೆ 18.56 ಲಕ್ಷ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಲಾಗಿದೆ. 812 ಲಕ್ಷಕ್ಕೂ ಹೆಚ್ಚಿನ ಮಾನವ ದಿನಗಳನ್ನು ಸೃಜಿಸಲಾಗಿದೆ. ಬರಪೀಡಿತ ತಾಲೂಕುಗಳಲ್ಲಿ ಪ್ರತಿಯೊಬ್ಬ ‘ಉದ್ಯೋಗ ಕಾರ್ಡು’ದಾರನಿಗೆ 150 ದಿನಗಳವರೆಗೆ ಕೆಲಸ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಶೂನ್ಯ ಬಂಡವಾಳ-ಇಸ್ರೇಲ್ ಮಾದರಿ ಕೃಷಿ: ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಮತ್ತು ಇಸ್ರೇಲಿ ಮಾದರಿಯ ಅಳವಡಿಕೆಯಂತಹ ಉಪಕ್ರಮಗಳ ಮೂಲಕ ಕೃಷಿ ಪದ್ಧತಿಗಳಲ್ಲಿ ಇನ್ನೂ ಹೆಚ್ಚಿನ ಸುಧಾರಣೆಗಳನ್ನು ತರಲು ಉದ್ದೇಶಿಸಿದ್ದೇವೆ. ಇಸ್ರೇಲ್ ತಂತ್ರಜ್ಞಾನ ಆಧರಿತ ಕೃಷಿಯನ್ನು ಜಾರಿಗೆ ತರಲು ಒಂದು ವಿಶೇಷ ಅಭಿಯಾನ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯಪಾಲ ಹೇಳಿದರು.

ರಾಜ್ಯದಲ್ಲಿ ಹಸಿರು ವಲಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ‘ಹಸಿರು ಕರ್ನಾಟಕ’ ಆಂದೋಲನವನ್ನು ಪ್ರಾರಂಭಿಸಿದ್ದು, 2019ರ ಮಳೆಗಾಲದ ಅವಧಿಯಲ್ಲಿ 652 ಲಕ್ಷ ಸಸಿಗಳನ್ನು ನೆಡುವ ಗುರಿಯಿದೆ. ನಮ್ಮ ನದಿಗಳ ನೀರಿನ ಒಳಹರಿವನ್ನು ಹೆಚ್ಚಿಸುವುದಕ್ಕಾಗಿ ‘ಕರ್ನಾಟಕ ನದಿ ಸಂರಕ್ಷಣಾ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಅರಣ್ಯ ಭದ್ರತೆ ಮತ್ತು ಸಂರಕ್ಷಣೆಯನ್ನು ಬಲಪಡಿಸುವ ದೃಷ್ಟಿಯಿಂದ 2018-19ನೆ ಸಾಲಿನಲ್ಲಿ ಅರಣ್ಯ ಇಲಾಖೆಯ ವಿವಿಧ ವೃಂದಗಳಲ್ಲಿ ಖಾಲಿಯಿರುವ 666 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. 3085 ಅರಣ್ಯ ಅಧಿಕಾರಿಗಳು, ಸಿಬ್ಬಂದಿಯ ಹೆಚ್ಚುವರಿ ಹುದ್ದೆಗಳನ್ನು ಮಂಜೂರು ಮಾಡಲಾಗಿದ್ದು, ಅವುಗಳನ್ನು ಹಂತ ಹಂತವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಸಾಲ ಮನ್ನಾ: ಪ್ರಸಕ್ತ ಸಾಲಿನ ಜ.31ರವರೆಗೆ 3.28 ಲಕ್ಷ ರೈತರ ಬೆಳೆ ಸಾಲ ಮನ್ನಾಕ್ಕಾಗಿ 1611 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಸಹಕಾರ ಸಂಘಗಳಲ್ಲಿ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ಬಾಕಿಯಿರುವ ಎಲ್ಲ ಅರ್ಹ ಬೆಳೆ ಸಾಲಗಳನ್ನು ಇದರ ವ್ಯಾಪ್ತಿಗೆ ತರುವ ಗುರಿಯೊಂದಿಗೆ ಈ ಸಾಲಮನ್ನಾ ಯೋಜನೆಯ ಅನುಷ್ಠಾನವನ್ನು ತ್ವರಿತಗೊಳಿಸಲಾಗುತ್ತಿದೆ ರಾಜ್ಯಪಾಲ ತಿಳಿಸಿದರು.

ಕೃಷಿ ಉತ್ಪನ್ನಗಳ ಬಾಳಿಕೆಯನ್ನು ಹೆಚ್ಚಿಸುವುದಕ್ಕಾಗಿ ಇರೇಡಿಏಷನ್ (ವಿಕಿರಣ) ಘಟಕಗಳಂತಹ ಸೌಲಭ್ಯಗಳನ್ನು ಮತ್ತು ರೈತರ ಪ್ರಯೋಜನಕ್ಕಾಗಿ ಸ್ವಚ್ಛತೆ, ಶ್ರೇಣೀಕರಣ ಮತ್ತು ಪ್ಯಾಂಕಿಂಗ್‌ನಂತಹ ಮೌಲ್ಯವರ್ಧಿತ ಸೇವಾ ಸೌಲಭ್ಯಗಳನ್ನು ಸರಕಾರ ಸ್ಥಾಪಿಸುತ್ತಿದೆ ಎಂದು ಅವರು ಹೇಳಿದರು.

ರಾಜ್ಯವು ರೇಷ್ಮೆ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. 1.30 ಲಕ್ಷ ರೈತ ಕುಟುಂಬಗಳು ಮತ್ತು 7 ಸಾವಿರ ನೇಯ್ಗೆ ಕುಟುಂಬಗಳು ರೇಷ್ಮೆ ಉದ್ಯಮವನ್ನು ಅವಲಂಬಿಸಿವೆ. ನೂತನ ತಂತ್ರಜ್ಞಾನವನ್ನು ಅಳವಡಿಸುವುದರತ್ತ ಮತ್ತು ಪೂರಕ ಮೂಲ ಸೌಕರ್ಯವನ್ನು ಸೃಜಿಸುವುದರತ್ತ ನಮ್ಮ ದೃಷ್ಟಿಕೋನವನ್ನು ಕೇಂದ್ರೀಕರಿಸಿದ್ದೇವೆ.

ತೋಟಗಾರಿಕೆ ಬೆಳೆ ಬೆಳೆಯುವ ಕ್ಷೇತ್ರ ವ್ಯಾಪ್ತಿಯನ್ನು 42 ಸಾವಿರ ಹೆಕ್ಟೇರುಗಳಿಗೆ ವಿಸ್ತರಿಸುವುದಕ್ಕಾಗಿ ಅರ್ಹ ರೈತರಿಗೆ ನೆರವನ್ನು ಒದಗಿಸಲಾಗಿದೆ. 51.49 ಲಕ್ಷ ಸಸಿ, ಕಸಿಗಳನ್ನು ವಿತರಿಸಲಾಗಿದೆ. ಪಾಲಿಹೌಸ್‌ಗಳಲ್ಲಿ ಅಧಿಕ ಮೌಲ್ಯದ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು 60 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News