ಹತ್ತು ಮೋದಿ ಬಂದರೂ ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ: ಡಿಸಿಎಂ ಡಾ.ಜಿ.ಪರಮೇಶ್ವರ್

Update: 2019-02-06 16:09 GMT

ಬೆಂಗಳೂರು, ಫೆ.6: ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತರಾದರೆ ಇಂತಹ ಹತ್ತು ಮೋದಿ ಬಂದರೂ ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಬುಧವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ನೀಡಿದ್ದ ಯಾವ ಭರವಸೆಯನ್ನೂ ಪ್ರಧಾನಿಯಾದ ಬಳಿಕ ಮೋದಿ ಈಡೇರಿಸಿಲ್ಲ ಎಂದು ದೂರಿದರು.

ಈ ದೇಶದ ಬಡವರು ಮೋದಿಯನ್ನು ಎಂದಿಗೂ ಕ್ಷಮಿಸುವುದಿಲ್ಲ. ಕಾಂಗ್ರೆಸ್‌ನವರು ಸಂಘಟಿತರಾದರೆ ಇಂಥ 10 ಮೋದಿ ಬಂದರೂ ಏನು ಮಾಡಲು ಆಗಲ್ಲ. ಮೋದಿ ಮತ್ತೊಂದು ಬಾರಿ ಪ್ರಧಾನಿ ಆಗುವುದಿಲ್ಲ ಎಂದು ಅವರು ಭವಿಷ್ಯ ನುಡಿದರು.

ಮುಂದಿನ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಸಭೆ ಕರೆಯಲಾಗಿದೆ. ಈ ಚುನಾವಣೆಯಲ್ಲಿ ಕರ್ನಾಟಕದಲ್ಲಿ 28 ಕ್ಷೇತ್ರವನ್ನೂ ಗೆದ್ದು, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವ ಶಪಥವನ್ನು ನಮ್ಮ ಕಾರ್ಯಕರ್ತರು ಮಾಡಬೇಕು ಎಂದು ಅವರು ಕರೆ ನೀಡಿದರು.

ಕಾಂಗ್ರೆಸ್ ಕಾರ್ಯಕ್ರಮ, ಸಿದ್ಧಾಂತಗಳು, ನಮ್ಮ ನಾಯಕರು ಕೊಟ್ಟ ಸಂದೇಶಗಳನ್ನು ಜನರಿಗೆ ತಲುಪಿಸಲು ಕಾಂಗ್ರೆಸ್ ತಂದ ಹೊಸ ಪತ್ರಿಕೆ ಕೆಲಸ ಮಾಡಲಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕಾಂಗ್ರೆಸ್ ಪಕ್ಷ ಉದ್ಯೋಗ ಕೊಟ್ಟಿದೆ. ಆದರೆ ಈ ಯೋಜನೆ ಮುಚ್ಚಲು ಈಗಿನ ಕೇಂದ್ರ ಸರಕಾರ ಪ್ರಯತ್ನ ಮಾಡುತ್ತಿದೆ, ಅದು ಸಾಧ್ಯವಾಗುವುದಿಲ್ಲ ಪರಮೇಶ್ವರ್ ತಿಳಿಸಿದರು.

ನಮ್ಮ ದೇಶದಲ್ಲಿ ಜಿಎಸ್‌ಟಿ ತಂದಿದ್ದರಿಂದ ಸಣ್ಣ ವ್ಯಾಪಾರಸ್ಥರು ಸ್ವಂತ ಉದ್ಯೋಗ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೋದಿ ಸರಕಾರ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ಕಪ್ಪುಹಣ ವಾಪಸ್ ತರುವುದಾಗಿ ನೋಟು ಅಮಾನ್ಯೀಕರಣ ಮಾಡಿದರು. ಆದರೆ ಇಂದು ಕಪ್ಪುಹಣ ಇನ್ನಷ್ಟು ಜಾಸ್ತಿ ಆಗಿದೆ. ಇಂಥ ಪಕ್ಷ ಮುಂದಿನ ಬಾರಿ ಅಧಿಕಾರಕ್ಕೆ ಬರಕೂಡದರು. ಈ ದೃಷ್ಟಿಯಿಂದ ನಮ್ಮ ಕಾರ್ಯಕರ್ತರು ಒಗ್ಗಟ್ಟಾಗಿ ದುಡಿಯಬೇಕು ಎಂದು ಅವರು ಕರೆ ನೀಡಿದರು. ಜೊತೆಗೆ ಹಿಂದಿನ ಕಾಂಗ್ರೆಸ್ ಸರಕಾರ ತಂದ ಜನಪ್ರಿಯ ಯೋಜನೆಗಳು ಹಾಗೂ ಈಗಿನ ಬಿಜೆಪಿ ಸರಕಾರದ ದುರಾಡಳಿತದ ಬಗ್ಗೆ ಜನರಿಗೆ ಮುಟ್ಟಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಮೋದಿ ಬಂದ ಕ್ಷಣದಿಂದಲೂ ಬರೀ ಸುಳ್ಳಿನ ಕಂತೆಯನ್ನೇ ಹೇಳಿಕೊಂಡು ಬಂದಿದ್ದಾರೆ. ಅದನ್ನು ಸಹ ಜನರಿಗೆ ಮನದಟ್ಟು ಮಾಡಿಕೊಡಬೇಕು. ಒಟ್ಟಾರೆ ಮುಂದಿನ ಚುನಾವಣೆ ಕಾರ್ಯಕರ್ತರ ಸಂಘಟನೆಯ ಮೇಲೆ ನಿಂತಿದೆ ಎಂದು ಅವರು ಪರಮೇಶ್ವರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News