ಸಿದ್ಧಗಂಗಾ ಶ್ರೀಗೆ ‘ಭಾರತ ರತ್ನ’ ನೀಡುವಂತೆ ಒತ್ತಾಯ: ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ

Update: 2019-02-06 16:13 GMT

ಬೆಂಗಳೂರು, ಫೆ.6: ತುಮಕೂರು ಜಿಲ್ಲೆಯ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಪ್ರಶಸ್ತಿಯನ್ನು ಕೊಡಬೇಕೆಂದು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಬುಧವಾರ ನಗರದಲ್ಲಿ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿ ತ್ರಿವಿದ ದಾಸೋಹಿ ಎಂದೇ ಪ್ರಸಿದ್ಧರಾಗಿ ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾಗಿ ಎಂಟು ದಶಕಗಳಿಗೂ ಹೆಚ್ಚು ಕಾಲ ನಿರಂತರ ಸೇವೆ ಸಲ್ಲಿಸಿದ ಡಾ.ಶಿವಕುಮಾರ ಸ್ವಾಮೀಜಿಯವರು ಭಾರತ ದೇಶ ಅಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿಯೇ ಒಂದು ವಿಶಿಷ್ಟವಾದಂತಹ ದಾಖಲೆಯನ್ನು ಸ್ಥಾಪಿಸಿದವರು. ವಿದ್ಯೆಯನ್ನು ವ್ಯಾಪಾರ ಮಾಡದೆ ವಿದ್ಯಾದಾನಕ್ಕಿಂತ ಶ್ರೇಷ್ಠದಾನವಿಲ್ಲವೆಂಬುದನ್ನು ಅಕ್ಷರಶಃ ಪಾಲಿಸಿದ ಪ್ರಾತಃ ಸ್ಮರಣೀಯರಾದ ಶ್ರೀಗಳಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ಕೊಡಬೇಕೆಂದು ಕೆಪಿಸಿಸಿ ಉಪಾಧ್ಯಕ್ಷೆ ಮೋಟಮ್ಮ ಸೂಚಿಸಿದ ನಿರ್ಣಯವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಗುರಪ್ಪ ನಾಯ್ಡು ಅನುಮೋದಿಸಿದರು.

ನಿರ್ಣಯ-2: 2018ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೆ ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ಜಾತ್ಯತೀತ ಸಿದ್ಧಾಂತವನ್ನು ಎತ್ತಿ ಹಿಡಿಯುವ ದೃಷ್ಟಿಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪರಸ್ಪರ ಒಪ್ಪಿಗೆ ಮೇರೆಗೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚಿಸಿ ಜನಪರ ಆಡಳಿತ ನಡೆಸುತ್ತಿರುವುದನ್ನು ಕೆಪಿಸಿಸಿ ಸರ್ವ ಸದಸ್ಯರ ಸಭೆ ಸ್ವಾಗತಿಸಿದೆ.

ಈ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯದ ರೈತರ ಸುಮಾರು 44 ಸಾವಿರ ಕೋಟಿ ರೂ.ಗಳ ಸಾಲಮನ್ನಾ ಮಾಡಿ ರೈತರನ್ನು ಋಣಮುಕ್ತರನ್ನಾಗಿಸಲು ತೀರ್ಮಾನಿಸಿದ್ದನ್ನು ಹಾಗೂ ಬಡ ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ದೈನಂದಿನ ವ್ಯವಹಾರದ ಅವಶ್ಯಕತೆಗೆ ಅನುಕೂಲವಾಗಲು 10 ಸಾವಿರ ರೂ.ಗಳ ಬಡ್ಡಿ ರಹಿತ ಸಾಲ ನೀಡಲು ‘ಬಡವರ ಬಂಧು’ ಕಾರ್ಯಕ್ರಮವನ್ನು ಜಾರಿಗೆ ತರುವ ಮೂಲಕ ಸರಕಾರವು ಬಡವರ, ರೈತರ ಪರವಾಗಿ ಇದೆ ಎಂಬುದನ್ನು ಸಾಬೀತುಪಡಿಸಿದೆ.

ಸಾಗಬೇಕಾದ ದಾರಿ ಬಹಳದೂರವಿದ್ದು, ಈ ಹಾದಿಯಲ್ಲಿ ಎದುರಾಗಿರುವ 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳು ಅತ್ಯಂತ ಹೆಚ್ಚಿನ ಸ್ಥಾನಗಳು ಗೆಲ್ಲುವುದರ ಮುಖಾಂತರ ಭಾರತದಲ್ಲಿ ಮಹತ್ತರ ಬದಲಾವಣೆ ತರಲು ರಾಜ್ಯದ ಅಮೂಲ್ಯ ಕೊಡುಗೆ ನೀಡುವಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು, ಜನಪ್ರತಿನಿಧಿಗಳು ಶ್ರಮಿಸಬೇಕೆಂದು ಹಾಗೂ ರಾಜ್ಯದ ಜನತೆಗೆ ಈ ಸಮ್ಮಿಶ್ರ ಸರಕಾರಕ್ಕೆ ಮತ್ತು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳಿಗೆ ಆಶೀರ್ವದಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಜಿ.ನಂಜಯ್ಯನಮಠ ಸೂಚಿಸಿದ ನಿರ್ಣಯವನ್ನು ವಿಧಾನಪರಿಷತ್ ಸದಸ್ಯ ಪ್ರಕಾಶ್ ಕೆ.ರಾಥೋಡ್ ಅನುಮೋದಿಸಿದರು.

ನಿರ್ಣಯ-3: ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಗಾಂಧಿಯನ್ನು ನೇಮಿಸಿ ಅತ್ಯಂತ ಕಠಿಣ ಸವಾಲು ಇರುವ ಪೂರ್ವ ಉತ್ತರ ಪ್ರದೇಶದ ಜವಾಬ್ದಾರಿಯನ್ನು ನೀಡಿ, ಕಾಂಗ್ರೆಸ್‌ ಪಕ್ಷವು ಎದುರಾಗಬಹುದಾದ ಎಂತಹ ಕಠಿಣ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿದೆ ಎಂಬ ಸಂದೇಶವನ್ನು ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯನ್ನು ಕೆಪಿಸಿಸಿ ಸರ್ವ ಸದಸ್ಯರ ಸಭೆ ಅಭಿನಂದಿಸಿದೆ.

ಪ್ರಿಯಾಂಕಾ ಗಾಂಧಿಗೆ ಸಂಪೂರ್ಣ ಯಶಸ್ಸು ದೊರೆತು, ಮುಂದಿನ ದಿನಗಳಲ್ಲಿ ಭಾರತದ ಯುವ ಜನಾಂಗದ ಆಶಯಗಳನ್ನು ಈಡೇರಿಸುವಲ್ಲಿ ಪ್ರಮುಖ ಭೂಮಿಕೆ ನಿರ್ವಹಿಸುವ ಅವಕಾಶಗಳು ಸಿಗಲೆಂದು ಕೆಪಿಸಿಸಿ ಉಪಾಧ್ಯಕ್ಷೆ ರಾಣಿ ಸತೀಶ್ ಸೂಚಿಸಿದ ನಿರ್ಣಯವನ್ನು ವಿಧಾನಪರಿಷತ್ ಸದಸ್ಯ ರಿಝ್ವನ್ ಅರ್ಶದ್ ಅನುಮೋದಿಸಿದರು.

ಇದಲ್ಲ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಿದ್ಧತೆ ಮಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳನ್ನು ಸದುಪಯೋಗಪಡಿಸಿಕೊಳ್ಳುವುದು, ಜನ ಸಂಪರ್ಕ ಅಭಿಯಾನವನ್ನು ಯಶಸ್ವಿಗೊಳಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News