ಸಿದ್ಧಗಂಗಾ ಶ್ರೀಗಳಿಗೆ ಮರಣೋತ್ತರ ‘ಭಾರತ ರತ್ನ’ ನೀಡಲು ಆಡಳಿತ, ವಿಪಕ್ಷ ಸದಸ್ಯರ ಆಗ್ರಹ

Update: 2019-02-06 16:20 GMT

ಬೆಂಗಳೂರು, ಫೆ. 6: ತುಮಕೂರಿನ ಸಿದ್ಧಗಂಗಾ ಮಠದ ಶತಾಯುಷಿ ಶ್ರೀ ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿಗೆ ಮರಣೋತ್ತರ ‘ಭಾರತ ರತ್ನ’ ನೀಡಬೇಕೆಂದು ವಿಧಾನಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರು ಪಕ್ಷಭೇದ ಮರೆತು ಆಗ್ರಹಿಸಿದ ಘಟನೆ ನಡೆಯಿತು.

ಬುಧವಾರ ವಿಧಾನಸಭೆಯಲ್ಲಿ ಸ್ಪೀಕರ್ ರಮೇಶ್‌ ಕುಮಾರ್ ಮಂಡಿಸಿದ ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಸಿದ್ಧಗಂಗಾ ಸ್ವಾಮೀಜಿಗಳ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಶ್ರೀಗಳಿಗೆ ಮರಣೋತ್ತರ ‘ಭಾರತ ರತ್ನ’ ನೀಡುವ ಮೂಲಕ ಗೌರವಿಸಬೇಕಿತ್ತು. ಆದರೆ, ಶ್ರೀಗಳಿಗೆ ಭಾರತ ರತ್ನ ಸಿಕ್ಕಿಲ್ಲ ಎಂಬ ನೋವು ಎಲ್ಲರಲ್ಲೂ ಇದೆ. ಹೀಗಾಗಿ ಶ್ರೀಗಳಿಗೆ ಭಾರತ ರತ್ನ ನೀಡಬೇಕು. ಇದರಿಂದ ಭಾರತ ರತ್ನ ಪ್ರಶಸ್ತಿಯ ಗೌರವವೂ ಹೆಚ್ಚಲಿದೆ ಎಂದರು. ನಾನಿಂದು ಶಿಸ್ತು, ಸರಳತೆ ಮೈಗೂಡಿಸಿಕೊಂಡಿದ್ದರೆ ಅದಕ್ಕೆ ಶ್ರೀಗಳ ನಿಕಟ ಸಂಪರ್ಕವೇ ಕಾರಣ ಎಂದು ಸ್ಮರಿಸಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯರಾದ ವಿ.ಸೋಮಣ್ಣ, ಜಗದೀಶ್ ಶೆಟ್ಟರ್, ಸಿದ್ಧಗಂಗಾ ಶ್ರೀಗಳು ನೊಬೆಲ್ ಪ್ರಶಸ್ತಿಗೆ ಅರ್ಹರಿದ್ದು, ಅವರಿಗೆ ಮರಣೋತ್ತರ ಭಾರತ ರತ್ನವನ್ನು ನೀಡುವ ಮೂಲಕ ಶ್ರೀಗಳ ಅನನ್ಯ ಸೇವೆಯನ್ನು ಗುರುತಿಸಬೇಕು ಎಂದು ಒತ್ತಾಯಿಸಿದರು.

ಸ್ಪೀಕರ್ ಗರಂ: ಸಂತಾಪ ಸೂಚನೆ ಮಂಡನೆ ವೇಳೆ ಸದಸ್ಯರು ತಮ್ಮ ತಮ್ಮಲೇ ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಡಿಸಿದ ಸ್ಪೀಕರ್ ರಮೇಶ್ ಕುಮಾರ್, ‘ಸದನಕ್ಕೆ ಎಂತಹ ಸ್ಥಿತಿ ಬಂತು, ಸಂತಾಪ ಸೂಚನೆ ನಿರ್ಣಯದ ವೇಳೆಯೂ ಮಾತನಾಡುವುದೇ’ ಎಂದು ತರಾಟೆಗೆ ತೆಗೆದುಕೊಂಡರು.

ಸ್ಪೀಕರ್ ರಮೇಶ್‌ಕುಮಾರ್ ಸಿಟ್ಟಾದ ಹಿನ್ನೆಲೆಯಲ್ಲಿ ಕ್ಷಣಕಾಲ ವಿಚಲಿತರಾದ ಆಡಳಿತ ಮತ್ತು ವಿಪಕ್ಷ ಸದಸ್ಯರು ಕೂಡಲೇ ನಿಶ್ಯಬ್ಧರಾಗಿ, ತಮ್ಮ ಸ್ಥಾನಗಳಲ್ಲಿ ಅಲಂಕರಿಸಿದರು. ಆ ಬಳಿಕ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದರು.

‘ಪುಟಗೋಸಿ ರತ್ನ'

‘ತಮ್ಮ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆಯ ಮೂಲಕ ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಜನಸಾಮಾನ್ಯರ ಮನಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಇಂತಹವರಿಗೆ ‘ಭಾರತ ರತ್ನ’ ಪ್ರಶಸ್ತಿ ಸೇರಿದಂತೆ ಯಾವ ‘ಪುಟಗೋಸಿ ರತ್ನ’ದ ಅಗತ್ಯವೂ ಇಲ್ಲ’

-ಜೆ.ಮಾಧುಸ್ವಾಮಿ ಬಿಜೆಪಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News