ರಾಜಕೀಯ ಪ್ರವೇಶ ಸದ್ಯಕ್ಕಿಲ್ಲ: ಯದುವೀರ್ ಒಡೆಯರ್
ಕಲಬುರ್ಗಿ, ಫೆ.6: ನಾನು ರಾಜಕೀಯಕ್ಕೆ ಬರುವ ಯೋಚನೆ ಸದ್ಯಕ್ಕೆ ಇಲ್ಲ. ರಾಜಕೀಯ ಕ್ಷೇತ್ರದ ಹೊರತಾಗಿಯೂ ಸಮಾಜ ಸೇವೆಯನ್ನು ಮಾಡಬಹುದೆಂದು ಯದುವೀರ್ ಒಡೆಯರ್ ಅಭಿಪ್ರಾಯಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಬಹಮನಿ ಸುಲ್ತಾನರ ಕೋಟೆ, ಖ್ವಾಝಾ ಬಂದೇ ನವಾಝ್ ದರ್ಗಾ, ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ರಾಜಕೀಯಕ್ಕೆ ಬಂದೇ ಸಮಾಜದ ಸೇವೆ ಮಾಡಬೇಕು ಅಂತೇನಿಲ್ಲ. ಈಗಾಗಲೇ ಮೈಸೂರು ಅರಮನೆ ಮೂಲಕ ಅನೇಕ ಸಾಮಾಜಿಕ ಸೇವೆಗಳನ್ನು ಮಾಡಲಾಗುತ್ತಿದೆ. ರಾಜಕೀಯ ನಾಯಕರು ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ್ದಾರೆ. ಆದರೆ, ನಾನು ರಾಜಕೀಯಕ್ಕೆ ಬರುವುದಿಲ್ಲ. ಮೈಸೂರಿನ ರಾಜಮನೆತನದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೊಗುವುದಷ್ಟೇ ನಮ್ಮ ಕೆಲಸ ಎಂದರು.
ತಮಗೆ ಪ್ರವಾಸೋದ್ಯಮ ಇಲಾಖೆಯ ರಾಯಭಾರಿಯನ್ನಾಗಿ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಾನು ರಾಯಭಾರಿ ಆದರೆ, ಕಲಬುರ್ಗಿ ಭಾಗದ ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.