ನಿವೃತ್ತಿವರೆಗೂ ಸೇವೆ ಮುಂದುವರೆಸಲು ಗುತ್ತಿಗೆ ನೌಕರರ ಪಟ್ಟು
ಬೆಂಗಳೂರು, ಫೆ.6: ಬಾಕಿ ವೇತನ ನೀಡುವ ಜೊತೆಗೆ, ನಿವೃತ್ತಿವರೆಗೂ ತಮ್ಮ ಸೇವೆ ಮುಂದುವರೆಸಬೇಕೆಂದು ಆಗ್ರಹಿಸಿ ರಾಜ್ಯ ಸರಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರ ಗುತ್ತಿಗೆ ನೌಕರರು ಅನಿರ್ದಿಷ್ಟ ಸಾಮೂಹಿಕ ಧರಣಿ ನಡೆಸುತ್ತಿದ್ದಾರೆ.
ಬುಧವಾರ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೂ ಬೃಹತ್ ಮೆರವಣಿಗೆ ನಡೆಸಿ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಬೇಡಿಕೆಗಳನ್ನು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯ ಮಾಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ನಿತ್ಯಾನಂದ ಸ್ವಾಮಿ, 2018ರ ಆರಂಭದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ದಿಢೀರ್ ವಿದ್ಯಾರ್ಥಿ ನಿಲಯಗಳ ಅಡುಗೆ ಸಹಾಯಕರು ಮತ್ತು ಕಾವಲುಗಾರರ ಸುಮಾರು 5 ಸಾವಿರ ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಖಾಯಂ ನೌಕರರನ್ನು ನೇಮಿಸಿದರು. ಇದರಿಂದ, ಅನಗತ್ಯವಾಗಿ ಸರಕಾರದ ಆರ್ಥಿಕ ಹೊರೆ ಹೆಚ್ಚಾಯಿತೆ ಹೊರತು, ಯಾವುದೇ ರೀತಿ ಪ್ರಯೋಜನವಾಗಿಲ್ಲ. ಆದರೆ, ಹಲವು ವರ್ಷಗಳಿಂದ ದುಡಿಯುತ್ತಿದ್ದ ಹೊರಗುತ್ತಿಗೆ ನೌಕರರನ್ನು ಅಮಾನವೀಯವಾಗಿ ಹೊರ ಹಾಕಿದರು ಎಂದು ಆರೋಪಿಸಿದರು.
ಕಡಿಮೆ ವೇತನ ಪಡೆದು ಗುತ್ತಿಗೆದಾರರ ಶೋಷಣೆ ಮತ್ತು ವಾರ್ಡನ್ ಮೊದಲಾದ ಅಧಿಕಾರಿಗಳ ಕಿರುಕುಳವನ್ನು ಸಹಿಸಿಕೊಂಡು ಮಕ್ಕಳ ಸೇವೆ ಮಾಡಿದ್ದ ತಾಯಂದಿರನ್ನು ಕಡೆಗಣಿಸಲಾಗಿದೆ. ಕೆಲಸದಲ್ಲಿ ಅವರ ಅನುಭವವನ್ನು ಪರಿಗಣಿಸಲಿಲ್ಲ. ಉದ್ಯೋಗವನ್ನು ಅವಲಂಬಿಸಿ ಬದುಕುತ್ತಿದ್ದ ನೌಕರರು ಕಣ್ಣೀರು ಹಾಕುವಂತಾಗಿದೆ ಎಂದರು.
ಹೀಗಾಗಿ, ಕುಮಾರಸ್ವಾಮಿ ನೇತೃತ್ವದ ಸರಕಾರ ನಿವೃತ್ತಿವರೆಗೆ ಎಲ್ಲ ಹಾಸ್ಟೆಲ್ ಹೊರಗುತ್ತಿಗೆ ನೌಕರರನ್ನು ಸೇವೆಯಲ್ಲಿ ಮುಂದುವರಿಸಬೇಕು. ಜತೆಗೆ ಯಥಾಸ್ಥಿತಿ ಜಾರಿ ಮಾಡಲು ಆದೇಶ ನೀಡಿದ ನಂತರವೂ ಕೆಲಸಕ್ಕೆ ಸೇರಲು ಬಯಸುವ ಹೊರ ಗುತ್ತಿಗೆ ನೌಕರರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಅದೇ ರೀತಿ, ಹಿಂದಿನ ಸಾಲಿನ ಜುಲೈ ತಿಂಗಳ ವೇತನವನ್ನು ನೀಡಬೇಕೆಂದು ಆಗ್ರಹಿಸಿದರು.