ನಮ್ಮ ಮೆಟ್ರೋ: ಯುಪಿಎಸ್ ಯೂನಿಟ್ ಬದಲಾವಣೆಗೆ ಚಿಂತನೆ

Update: 2019-02-06 16:37 GMT

ಬೆಂಗಳೂರು, ಫೆ.6: ನಗರದಲ್ಲಿರುವ ಮೆಟ್ರೋ ಸಿಗ್ನಲ್‌ಗಳ ಕಾರ್ಯಾಚರಣೆಗೆ ಅಗತ್ಯವಿರುವ ಯುಪಿಎಸ್ ಯೂನಿಟ್‌ಗಳು ಕೈಕೊಡುತ್ತಿದ್ದ ಹಿನ್ನೆಲೆಯಲ್ಲಿ, ಯೂನಿಟ್‌ಗಳನ್ನೇ ಬದಲಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.

ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆಯವರೆಗಿನ ಮಾರ್ಗದಲ್ಲಿರುವ ತಲಾ 8 ಕಿ.ವ್ಯಾ. ಸಾಮರ್ಥ್ಯದ ಯುಪಿಎಸ್‌ಗಳು ಕೈಕೊಡುವುದರಿಂದ ಸಿಗ್ನಲಿಂಗ್‌ನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದು ಮೆಟ್ರೋ ಸೇವೆ ವ್ಯತ್ಯಯದಲ್ಲಿ ಪರಿಣಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಯುಪಿಎಸ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ ಎಂದು ನಿಗಮದ ಅಧಿಕಾರಿಗಳು ಹೇಳಿದ್ದಾರೆ.

ಹೈದರಾಬಾದ್ ಮೂಲಕ ಕಂಪನಿಯೊಂದರಲ್ಲಿ 2010 ರಲ್ಲಿ ಯುಪಿಎಸ್‌ಗಳನ್ನು ಖರೀದಿ ಮಾಡಲಾಗಿತ್ತು. ಆದರೆ, ಈಗ ಅವುಗಳ ಕಾರ್ಯಕ್ಷಮತೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂಬ ಅಂಶ ಪರಿಶೀಲನೆಯ ಸಂದರ್ಭದಲ್ಲಿ ಕಂಡು ಬಂದಿತು. ಅದಾದ ಕೆಲವು ದಿನಗಳ ಅಂತರದಲ್ಲಿ ಎರಡು-ಮೂರು ಬಾರಿ ಸೇವೆಯಲ್ಲಿಯೂ ವ್ಯತ್ಯಯವಾಗಿತ್ತು. ಈ ನಿಟ್ಟಿನಲ್ಲಿ ಬದಲಿಸಲು ಮುಂದಾಗಿದ್ದಾರೆ.

ಟೆಂಡರ್ ಕರೆಯದೇ ಯುಪಿಎಸ್‌ಗಳ ಖರೀದಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಒಂದು ವೇಳೆ ಟೆಂಡರ್ ಆಹ್ವಾನಿಸಿದರೂ ಅದು ಓಪನ್ ಟೆಂಡರ್‌ಗೆ ಸೀಮಿತ ಮಾಡಲು ಚಿಂತನೆ ನಡೆಸಲಾಗಿದೆ. ಅದರ ಪ್ರಕಾರ ಒಂದಷ್ಟು ದಿನ ಮೆಟ್ರೋ ವೆಬ್‌ಸೈಟ್‌ನಲ್ಲಿ ಟೆಂಡರ್ ಪ್ರಕಟಿಸಿ, ಬಳಿಕ ತೆಗೆದು ಹಾಕಲು ಉದ್ದೇಶಿಸಿದ್ದು, ಇದು ಕೇವಲ ನಾಮಕಾವಸ್ತೆಯಾಗಲಿದೆ.

ನಿಯಮಾನುಸಾರ ಖರೀದಿ: ನಗರದಲ್ಲಿ ಯುಪಿಎಸ್‌ಗಳನ್ನು ಅಳವಡಿಸಿ ಒಂಬತ್ತು ವರ್ಷಗಳು ದಾಟಿದೆ. ಇದರ ನಡುವೆ ಹಲವು ಬಾರಿ ಕೈಕೊಟ್ಟಿದ್ದರಿಂದ ಬದಲಾವಣೆಗೆ ನಿರ್ಧಾರ ಮಾಡಲಾಗಿದೆ. ಹೀಗಾಗಿ, ಟೆಂಡರ್ ಆಹ್ವಾನಿಸುವ ಮೂಲಕ ಎಲ್ಲ ನಿಯಮಗಳ ಪ್ರಕಾರ ಖರೀದಿ ಮಾಡಲಾಗುತ್ತದೆ. ಖರೀದಿಸುವ ಯುಪಿಎಸ್‌ಗಳಿಗೆ ವಾರಂಟಿ ಎಂಬುದಿಲ್ಲ. ಲೈಫ್ ಇದ್ದು, ಅದು ಬಳಕೆಯ ಮೇಲೆ ಅವಲಂಬನೆಯಾಗಿರುತ್ತದೆ ಎಂದು ಬಿಎಂಆರ್‌ಸಿಎಲ್‌ನ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News