×
Ad

ಪ್ರೇಯಸಿಯೊಂದಿಗೆ ಮೋಜು ಮಾಡಲು ಬೈಕ್‌ಗಳ ಕಳವು: ಆರೋಪಿ ಬಂಧನ

Update: 2019-02-07 20:15 IST

ಬೆಂಗಳೂರು, ಫೆ. 7: ಪ್ರೇಯಸಿಯೊಂದಿಗೆ ಸುತ್ತಾಡುವ ಸಲುವಾಗಿ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಬೈಕ್ ಕಳ್ಳ ಕಾರ್ತಿಕ್ ಅಲಿಯಾಸ್ ಕಾಕನನ್ನು ಕೋರಮಂಗಲದ ಪೊಲೀಸರು ಬಂಧಿಸಿ, ಲಕ್ಷಾಂತರ ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬೊಮ್ಮನಹಳ್ಳಿಯ ಹೊಸಪಾಳ್ಯ ಬಳಿಯ ಕಾರ್ತಿಕ್(26) ಪ್ರವಾಸಿ ಸ್ಥಳಗಳಿಗೆ ಪ್ರೇಯಸಿ ಜೊತೆ ಹೋಗಿ ಮೋಜು ಮಾಡಲು ಬೈಕ್‌ಗಳನ್ನು ಕಳವು ಮಾಡುತ್ತಿದ್ದ. ಹೀಗಾಗಿ, ಒಂದೆರಡು ಬಾರಿ ಜೈಲಿಗೂ ಹೋಗಿ ಬಂದಿದ್ದ. ಆದರೂ ಬುದ್ಧಿ ಕಲಿಯದೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿ 4, ಮಡಿವಾಳ, ಕೋರಮಂಗಲದಲ್ಲಿ ತಲಾ ಒಂದು ಸೇರಿ, 10 ಬೈಕ್ ಕಳವು ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯು ಕಳವು ಮಾಡಿದ್ದ 4 ಬೈಕ್‌ಗಳ ನಂಬರ್, ಇಂಜಿನ್‌ನಲ್ಲಿನ ಚಾರ್ಸಿ ಸಂಖ್ಯೆಯನ್ನು ಅಳಿಸಿಹಾಕಿದ್ದು, ಅವುಗಳ ಮಾಲಕರನ್ನು ಪತ್ತೆ ಮಾಡಬೇಕಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.

ಆರೋಪಿಯ ಪ್ರೇಯಸಿಗೆ ಪಲ್ಸರ್ ಬೈಕ್ ಅಚ್ಚುಮೆಚ್ಚಾಗಿದ್ದರಿಂದ ಅವುಗಳನ್ನು ಕಳವು ಮಾಡುವ ಕೆಲಸಕ್ಕೆ ಇಳಿದಿದ್ದ. ಈ ಹಿಂದೆ ಬೈಕ್ ಕಳವು ಪ್ರಕರಣದಲ್ಲಿ ಬಂಧಿತನಾಗಿದ್ದ ಸಂದರ್ಭದಲ್ಲಿ ಜಾಮೀನು ಪಡೆಯಲು ವಕೀಲರಿಗೆ ಕಳವು ಮಾಡಿದ ಬೈಕ್ ಮಾರಾಟ ಮಾಡಿದ್ದ ಹಣವನ್ನು ನೀಡಿದ್ದ ಎಂಬುದು ತನಿಖೆಯಲ್ಲಿ ತಿಳಿದಿದೆ.

ಬಂಧಿತ ಆರೋಪಿ ಕಾರ್ತಿಕ್ ಜೈಲಿಗೆ ಹೋಗಿದ್ದ ಸಂದರ್ಭದಲ್ಲಿ ಆತನ ಪ್ರೇಯಸಿಯನ್ನು ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಬುದ್ಧಿವಾದ ಹೇಳಿದ್ದರೂ ಆಕೆಯ ವರ್ತನೆಯೂ ಸರಿಯಾಗಿರಲಿಲ್ಲ. ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ, ಆತನ ಸಂಪರ್ಕ ಬೆಳೆಸಿಕೊಂಡು ಹೊಸವರ್ಷ ಆಚರಣೆಯನ್ನು ಕಳವು ಮಾಡಿದ ಬೈಕ್‌ನಲ್ಲೇ ನಂದಿಬೆಟ್ಟ, ಹೊಗೇನಕಲ್ ಫಾಲ್ಸ್, ಕೊಡಗು, ಧರ್ಮಸ್ಥಳ ಮತ್ತಿತರೆ ಕಡೆಗಳಲ್ಲಿ ಸುತ್ತಾಡಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ.

ಕಳವು ಮಾಡಿದ ಬೈಕ್‌ನಲ್ಲಿ ಪ್ರೇಯಸಿ ಜೊತೆ ಸುತ್ತಾಡುವುದು. ಅನಂತರ ಅದನ್ನು ಮಾರಾಟ ಮಾಡಿ ಹೊಟೇಲ್, ಪಬ್‌ಗಳಿಗೆ ಹೋಗಿ ಮೋಜು, ಮಸ್ತಿ ಮಾಡುತ್ತಿದ್ದರು. ಇತ್ತೀಚಿಗೆ ಕೋರಮಂಗಲದಲ್ಲಿ ನಡೆದ ಪಲ್ಸರ್ ಬೈಕ್ ಕಳವು ಪ್ರಕರಣವನ್ನು ದಾಖಲಿಸಿಕೊಂಡ ಇನ್ಸ್‌ಪೆಕ್ಟರ್ ಮಂಜುನಾಥ್, ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕಾರ್ತಿಕ್ ಕಳ್ಳತನ ಹಾಗೂ ಪ್ರೇಯಸಿಯೊಂದಿಗಿನ ಸಂಬಂಧ ತಿಳಿದು ಆತನ ಪತ್ನಿ ಅವರಿಂದ ತೊರೆದು ಹೋಗಿದ್ದರು. ಆದರೂ, ಬುದ್ಧಿ ಕಲಿಯದೇ ಸದಾ ಕಳ್ಳತನದಲ್ಲಿ ತೊಡಗಿಸಿಕೊಂಡಿದ್ದರು. ಕಾರ್ತಿಕ್‌ನ ಪ್ರೇಯಸಿ ಖಾಸಗಿ ಕಂಪನಿಯಲ್ಲಿ ಸ್ವಾಗತಕಾರರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News