ಶಾಸಕರಿಗೆ ಆಮಿಷ ಆರೋಪ: ದಾಖಲೆ ಬಿಡುಗಡೆ ಮಾಡಲು ಸಿ.ಟಿ.ರವಿ ಆಗ್ರಹ

Update: 2019-02-07 15:55 GMT

ಬೆಂಗಳೂರು, ಫೆ. 7: ಶಾಸಕರಿಗೆ 30ರಿಂದ 40 ಕೋಟಿ ರೂ. ಆಮಿಷ ಒಡ್ಡುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಅವರೊಬ್ಬ ನ್ಯಾಯವಾದಿ. ಹೀಗೆ ಆಮಿಷವೊಡ್ಡಿದರೆ ಏನು ಮಾಡಬೇಕೆಂದು ಅವರಿಗೆ ಗೊತ್ತಿಲ್ಲವೆಂದರೆ ಹೇಗೆ? ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಆಮಿಷವೊಡ್ಡಿದ್ದರೆ ಸಾಕ್ಷಿ ಸಮೇತ ಅದನ್ನು ಸಾಬೀತು ಮಾಡುತ್ತಿದ್ದರು. ಆದರೆ, ಅವರು ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ತಮ್ಮ ಶಾಸಕರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದೆ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಟೀಕಿಸಿದರು.

ದಿಲ್ಲಿಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸಂಸದರು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ. ಆಮಿಷವೊಡ್ಡಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದಿದ್ದರು. ದಾಖಲೆ ಬಿಡುಗಡೆಗೆ ಸೂಕ್ತ ಸಮಯ ಯಾವುದು ಎಂದು ನನಗೆ ಗೊತ್ತಿಲ್ಲ ಎಂದರು.

ನಾಳಿನ ಬಜೆಟ್ ಮಂಡನೆ ಬಗ್ಗೆ ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳಲಿದ್ದು, ಅದಕ್ಕೆ ತಕ್ಕಂತೆ ಎಲ್ಲ ಶಾಸಕರು ನಡೆದುಕೊಳ್ಳಲಿದ್ದಾರೆ. ಲೋಕಸಭೆ ಮಾದರಿಯಲ್ಲಿ ಬಜೆಟ್ ಭಾಷಣದ ಬಳಿಕ ಬಜೆಟ್ ಪ್ರತಿ ನೀಡುವ ತೀರ್ಮಾನದ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News