ಆಮಿಷಗಳಿಗೆ ಬಲಿಯಾಗದೆ ಆತ್ಮಸ್ಥೈರ್ಯದಿಂದ ಇರಿ: ಬಿಜೆಪಿ ಶಾಸಕರಿಗೆ ಬಿಎಸ್‌ವೈ ಸೂಚನೆ

Update: 2019-02-07 16:42 GMT

ಬೆಂಗಳೂರ, ಫೆ. 7: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಯಾವುದೇ ಸಂದರ್ಭದಲ್ಲಿಯಾದರೂ ಪತನಗೊಳ್ಳುವ ಸಂಭವವಿದ್ದು, ಬಿಜೆಪಿ ಶಾಸಕರು ಯಾವುದೇ ಆಮಿಷಗಳಿಗೆ ಒಳಗಾಗದೇ ಆತ್ಮಸ್ಥೈರ್ಯದಿಂದ ಇರಬೇಕು ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸಲಹೆ ಮಾಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಮೈತ್ರಿ ಸರಕಾರ ಪತನಕ್ಕೆ ದಿನಗಣನೆ ಆರಂಭವಾಗಿದ್ದು, ನಮ್ಮ ಶಾಸಕರು ಆಮಿಷಗಳಿಗೆ ಬಲಿಯಾಗದೆ ಒಗ್ಗಟ್ಟು ಪ್ರದರ್ಶಿಸಬೇಕು. ನೀವೆಲ್ಲರೂ ಆಶಾಭಾವನೆ ಇಟ್ಟುಕೊಳ್ಳಬೇಕೆಂದು ಸೂಚಿಸಿದರು ಎಂದು ಗೊತ್ತಾಗಿದೆ.

ಪ್ರಸಕ್ತ ಬೆಳವಣಿಗೆಗಳನ್ನು ನೋಡಿದರೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರಕಾರ ಆಯವ್ಯಯ ಮಂಡನೆಗೂ ಮೊದಲೇ ಪತನಗೊಂಡರೂ ಅಚ್ಚರಿ ಇಲ್ಲ. ಹೀಗಾಗಿ ಬಿಜೆಪಿ ಶಾಸಕರನ್ನು ಸೆಳೆಯಲು ರಾಜ್ಯ ಸರಕಾರ ಆಮಿಷ ಒಡ್ಡುತ್ತಿರುವುದು ಗಮನಕ್ಕೆ ಬಂದಿದೆ. ನಿಮ್ಮ ಭವಿಷ್ಯದ ದೃಷ್ಟಿಯಿಂದ ಕೆಟ್ಟ ನಿರ್ಧಾರವನ್ನು ಕೈಗೊಳ್ಳಬೇಡಿ ಎಂದು ಸೂಚಿಸಿದ್ದಾರೆಂದು ಗೊತ್ತಾಗಿದೆ.

ಮೈತ್ರಿ ಸರಕಾರದ ಬೆಳವಣಿಗೆಗಳನ್ನು ಗಮನಿಸಿದರೆ ನಮಗೆ ಪೂರಕವಾಗಿದೆ. ಯಾವ ಶಾಸಕರು ರಾಜೀನಾಮೆ ನೀಡುತ್ತಾರೆಂದು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕಲಾಪಕ್ಕೆ ಕಡ್ಡಾಯವಾಗಿ ಹಾಜರಾಗಿ ಒಗ್ಗಟ್ಟು ಪ್ರದರ್ಶಿಸಬೇಕು. ಇದು ಬಿಜೆಪಿ ವರಿಷ್ಠರ ಸೂಚನೆ ಎಂದು ಯಡಿಯೂರಪ್ಪ ತಿಳಿಸಿದರು ಎಂದು ಹೇಳಲಾಗಿದೆ.

ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣದ ವೇಳೆ ಮೈತ್ರಿ ಸರಕಾರದ ಬಂಡವಾಳ ಬಯಲಾಗಿದೆ. ಮುಖ್ಯಮಂತ್ರಿ ಮೇಲೆ ವಿಶ್ವಾಸವಿಲ್ಲದೆ ಅವರವರೇ ಬಡಿದಾಡಿಕೊಂಡು ಸರಕಾರ ಉರುಳಿ ಬೀಳಲಿದೆ. ಹೀಗಾಗಿ ಎಲ್ಲರೂ ತಾಳ್ಮೆಯಿಂದ ಇರಬೇಕು ಎಂದು ಯಡಿಯೂರಪ್ಪ ನಿರ್ದೇಶನ ನೀಡಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News