‘ಪತ್ರೊಡೆ’ಯ ಕೆಸುವಿನ ಎಲೆಯ ವಿಶೇಷ ಆರೋಗ್ಯಲಾಭಗಳು ಏನೇನು ಗೊತ್ತಾ?

Update: 2019-02-08 16:15 GMT

ಕೆಸುವು ಯಾರಿಗೆ ಗೊತ್ತಿಲ್ಲ? ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಮಳೆಗಾಲದಲ್ಲಂತೂ ಕೆಸುವಿನ ಖಾದ್ಯಗಳಿಗೆ ಎಲ್ಲಿಲ್ಲದ ಆದ್ಯತೆ. ಚುಮುಚುಮು ಮಳೆ ಬೀಳುತ್ತಿರುವ ಸಮಯದಲ್ಲಿ ಗರಿಗರಿಯಾದ ಪತ್ರೊಡೆ ತಿನ್ನುವುದರ ರುಚಿಯೇ ಬೇರೆ. ಇಂತಹ ಕೆಸುವಿನ ಗಡ್ಡೆ ಮತ್ತು ಎಲೆಗಳು ಅಧಿಕ ಪ್ರಮಾಣದಲ್ಲಿ ಪೌಷ್ಟಿಕಾಂಶಗಳನ್ನು ಹೊಂದಿದ್ದು, ನಮ್ಮ ಶರೀರಕ್ಕೆ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತವೆ. ಕೆಸುವಿನ ಎಲೆಗಳ ಇಂತಹ ಕೆಲವು ಆರೋಗ್ಯಲಾಭಗಳ ಕುರಿತು ಮಾಹಿತಿಯಿಲ್ಲಿದೆ.....

* ಕ್ಯಾನ್ಸರನ್ನು ತಡೆಯುತ್ತದೆ

ಕೆಸುವಿನ ಎಲೆಗಳಲ್ಲಿ ಸಮೃದ್ಧವಾಗಿರುವ ವಿಟಾಮಿನ್ ಸಿ ನೀರಿನಲ್ಲಿ ಕರಗಬಲ್ಲ ಉತ್ಕರ್ಷಣ ನಿರೋಧಕವಾಗಿದ್ದು, ಕ್ಯಾನ್ಸರ್ ಗಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ. ಕೆಸುವಿನ ಎಲೆಗಳ ಸೇವನೆಯಿಂದ ಕರುಳಿನ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್‌ಗಳ ಅಪಾಯವನ್ನು ತಗ್ಗಿಸಬಹುದು ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.

* ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ

ಈ ಎಲೆಗಳಲ್ಲಿ ವಿಟಾಮಿನ್ ‘ಎ’ ಅಧಿಕ ಪ್ರಮಾಣದಲ್ಲಿದೆ. ಈ ವಿಟಾಮಿನ್ ಕಣ್ಣುಗಳ ಆರೋಗ್ಯವನ್ನು ಮತ್ತು ಉತ್ತಮ ದೃಷ್ಟಿಯನ್ನು ಕಾಯ್ದುಕೊಳ್ಳಲು ಹಾಗೂ ಅಂಧತ್ವಕ್ಕೆ ಕಾರಣವಾಗಬಲ್ಲ ಕಣ್ಣಿನ ರೋಗಗಳನ್ನು ತಡೆಯಲು ಅಗತ್ಯವಾಗಿದೆ.

* ಅಧಿಕ ರಕ್ತದೊತ್ತಡವನ್ನು ತಗ್ಗಿಸುತ್ತದೆ

ಕೆಸುವಿನ ಎಲೆಗಳಲ್ಲಿ ಸಪೋನಿನ್‌ಗಳು,ಟ್ಯಾನಿನ್‌ಗಳು,ಕಾರ್ಬೊಹೈಡ್ರೇಟ್‌ಗಳು ಮತ್ತು ಫ್ಲಾವನಾಯ್ಡಾಗಳು ಇರುವುದರಿಂದ ಅಧಿಕ ರಕ್ತದೊತ್ತಡವನ್ನು ತಗ್ಗಿಸುತ್ತವೆ. ಅಧಿಕ ರಕ್ತದೊತ್ತಡವು ಹೃದ್ರೋಗಗಳಿಗೂ ಕಾರಣವಾಗುವುದರಿಂದ ಕೆಸುವಿನ ಎಲೆಗಳ ಸೇವನೆ ಹೃದಯದ ಆರೋಗ್ಯಕ್ಕೂ ಪೂರಕವಾಗಿದೆ.

* ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ.

ಸಿ ವಿಟಾಮಿನ್ ಅನ್ನು ಸಮೃದ್ಧವಾಗಿ ಹೊಂದಿರುವ ಈ ಎಲೆಗಳು ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಮ್ಮ ಶರೀರದಲ್ಲಿಯ ಹಲವಾರು ಜೀವಕೋಶಗಳು, ವಿಶೇಷವಾಗಿ ರೋಗ ನಿರೋಧಕ ವ್ಯವಸ್ಥೆಯ ಟಿ-ಸೆಲ್‌ಗಳು ಮತ್ತು ಫ್ಯಾಗೊಸೈಟ್‌ಗಳು ಸೂಕ್ತವಾಗಿ ಕಾಯ ನಿರ್ವಹಿಸಲು ವಿಟಮಿನ್ ಸಿ ಅಗತ್ಯವಾಗಿದೆ. ಶರೀರದಲ್ಲಿ ವಿಟಾಮಿನ್ ಸಿ ಕೊರತೆಯಿದ್ದರೆ ರೋಗಕಾರಕಗಳ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿಗೆ ಸಾಧ್ಯವಾಗುವುದಿಲ್ಲ.

* ಮಧುಮೇಹವನ್ನು ತಡೆಯುತ್ತದೆ

ಕೆಸುವಿನ ಎಲೆಗಳು ರಕ್ತದಲ್ಲಿಯ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತವೆ ಮತ್ತು ದೇಹತೂಕ ನಷ್ಟವನ್ನು ತಡೆಯುತ್ತವೆ ಎನ್ನುವುದು ಅಧ್ಯಯನಗಳಿಂದ ಸಾಬೀತಾಗಿದೆ.

* ಜೀರ್ಣಕ್ರಿಯೆಗೆ ನೆರವಾಗುತ್ತದೆ

ಕೆಸುವಿನ ಎಲೆಗಳಲ್ಲಿ ನಾರು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ನಾವು ಸೇವಿಸಿದ ಆಹಾರವು ಸರಿಯಾಗಿ ಜೀರ್ಣಗೊಳ್ಳಲು ಮತ್ತು ಶರೀರವು ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತವೆ ಹಾಗೂ ಜೀರ್ಣ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸುತ್ತವೆ. ಕೆಸುವಿನ ಎಲೆಗಳು ನಮ್ಮ ಕರುಳಿನಲ್ಲಿರುವ,ಜೀರ್ಣಕ್ರಿಯೆಗೆ ಮತ್ತು ಹಾನಿಕಾರಕ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಟಕ್ಕೆ ನೆರವಾಗುವ ಎಷ್ಚೆರಿಚಿಯಾ ಕೋಲಿ ಮತ್ತು ಲ್ಯಾಕ್ಟೋಬಸಿಲಸ್ ಆ್ಯಸಿಡೊಫಿಲಸ್‌ನಂತಹ ಲಾಭದಾಯಕ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಉತ್ತೇಜಿಸುತ್ತವೆ.

* ಉರಿಯೂತವನ್ನು ತಗ್ಗಿಸುತ್ತದೆ

ಕೆಸುವಿನ ಎಲೆಗಳು ಉರಿಯೂತ ನಿರೋಧಕ ಮತ್ತು ಸೂಕ್ಷ್ಮಜೀವಿ ನಿರೋಧಕ ಗುಣಗಳನ್ನು ಹೊಂದಿರುವುದರಿಂದ ದೀರ್ಘಕಾಲಿಕ ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತವೆ.

*ನರಮಂಡಲವನ್ನು ರಕ್ಷಿಸುತ್ತದೆ

ಕೆಸುವಿನ ಎಲೆಗಳಲ್ಲಿರುವ ವಿಟಾಮಿನ್ ಬಿ6, ಥಿಯಾಮೈನ್, ನಿಯಾಸಿನ್ ಮತ್ತು ರಿಬೊಫ್ಲಾವಿನ್‌ಗಳು ನರಮಂಡಲಕ್ಕೆ ರಕ್ಷಣೆಯನ್ನೊದಗಿಸುತ್ತವೆ. ಈ ಎಲ್ಲ ಪೌಷ್ಟಿಕಾಂಶಗಳು ಭ್ರೂಣಸ್ಥಿತಿಯಲ್ಲಿ ಮಿದುಳಿನ ಸೂಕ್ತ ಬೆಳವಣಿಗೆಗೆ ಮತ್ತು ನರಮಂಡಲವನ್ನು ಸದೃಢಗೊಳಿಸಲು ನೆರವಾಗುತ್ತವೆ.

* ರಕ್ತಹೀನತೆಯನ್ನು ತಡೆಯುತ್ತದೆ

ಶರೀರದಲ್ಲಿ ಹಿಮೊಗ್ಲೋಬಿನ್ ಸಂಖ್ಯೆ ಕಡಿಮೆಯಾದಾಗ ರಕ್ತಹೀನತೆಯುಂಟಾಗುತ್ತದೆ. ಕೆಸುವಿನ ಎಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿರುವ ಕಬ್ಬಿಣ ಕೆಂಪು ರಕ್ತಕಣಗಳ ಉತ್ಪಾದನೆಯಲ್ಲಿ ನೆರವಾಗುತ್ತದೆ. ಅಲ್ಲದೆ ಅದರಲ್ಲಿರುವ ವಿಟಾಮಿನ್ ಸಿ ಶರೀರವು ಕಬ್ಬಿಣವನ್ನು ಚೆನ್ನಾಗಿ ಹೀರಿಕೊಳ್ಳಲು ನೆರವಾಗುವ ಮೂಲಕ ರಕ್ತಹೀನತೆಯ ಅಪಾಯವನ್ನು ಇನ್ನಷ್ಟು ತಗ್ಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News