ಬಜೆಟ್ ಮೇಲೆ ಸಚಿವ ರೇವಣ್ಣ ಪ್ರಭಾವ ಗಾಡವಾಗಿದೆ: ಯಡಿಯೂರಪ್ಪ

Update: 2019-02-08 16:25 GMT

ಬೆಂಗಳೂರು, ಫೆ.8: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್‌ನಲ್ಲಿ ಸಚಿವ ರೇವಣ್ಣ ಪ್ರಭಾವ ಗಾಢವಾಗಿ ವ್ಯಕ್ತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ರಾಜ್ಯ ಸರಕಾರದ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಆಯವ್ಯಯದಲ್ಲಿ ಕುಮಾರಸ್ವಾಮಿ ಹಾಸನ ಜಿಲ್ಲೆಯನ್ನು ಮರೆತಿಲ್ಲ. ತಮ್ಮ ಸಹೋದರ ರೇವಣ್ಣ ಅವರ ತವರು ಜಿಲ್ಲೆ ಹಾಸನ ಅಭಿವೃದ್ಧಿಯೇ ಸಮ್ಮಿಶ್ರ ಸರಕಾರದ ಪರಮ ಗುರಿಯಾಗಿದೆ. ಹೀಗಾಗಿ ಬಜೆಟ್ ಮೇಲೆ ಸಚಿವ ರೇವಣ್ಣ ಪ್ರಭಾವ ಇರುವುದು ಸ್ಪಷ್ಟವಾಗಿದೆ ಎಂದು ಟೀಕಿಸಿದರು.

ಬಹುಮತ ಇಲ್ಲದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸಿದ್ದು ಸರಿಯಲ್ಲ. ಆದಾಗ್ಯು ಕ್ರಾಂತಿಕಾರಿ ಬಜೆಟ್ ನೀಡುವ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಇದೊಂದು ಡೋಂಗಿ ಬಜೆಟ್ ಎಂದರೆ ತಪ್ಪಾಗಲಾರದು ಎಂದು ಅವರು ಹೇಳಿದರು.

ಸದನದಲ್ಲಿ ಬಜೆಟ್ ವಿರುದ್ಧ ಹೋರಾಟ

ಮುಖ್ಯಮಂತ್ರಿ ಕುಮಾರಸ್ವಾಮಿ ಮೂರನೇ ಬಾರಿಗೆ ಬಜೆಟ್ ಮಂಡಿಸಿದ್ದು, ಕಳೆದ ಆಯವ್ಯಯದಲ್ಲಿನ ಶೇ.35ರಷ್ಟು ಹಣವನ್ನೂ ಕೂಡ ಖರ್ಚು ಮಾಡಿಲ್ಲ. ರೈತರ ಸಾಲಮನ್ನಕ್ಕಾಗಿ 45 ಸಾವಿರ ಕೋಟಿ ರೂ. ಹಣವನ್ನು ಒಂದೇ ಕಂತಿನಲ್ಲಿ ನೀಡುವುದಾಗಿ ನೀಡಿದ ಭರವಸೆಯಂತೆ ನಡೆದುಕೊಂಡಿಲ್ಲ. ನೀರಾವರಿ, ಪರಿಶಿಷ್ಟ ಜಾತಿ, ವರ್ಗ ಮತ್ತಿತರ ಇಲಾಖೆಗಳಲ್ಲಿಯೂ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಜನತೆಗೆ ಸುಳ್ಳು ಹೇಳಿ ವಂಚನೆ ಮಾಡಿದ್ದಾರೆ. ಹೀಗಾಗಿ ಸೋಮವಾರದಿಂದ ಎರಡೂ ಸದನಗಳಲ್ಲಿ ಬಜೆಟ್ ವಿರುದ್ಧ ಹೋರಾಟ ನಡೆಸುವುದಾಗಿ ಯಡಿಯೂರಪ್ಪ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News