ಮೈತ್ರಿ ಸರಕಾರದ ಬಜೆಟ್: ರಾಜ್ಯ ರಾಜಕೀಯ ನಾಯಕರ ಪ್ರತಿಕ್ರಿಯೆ

Update: 2019-02-08 17:25 GMT

ಬೆಂಗಳೂರು,ಫೆ.8: ಮೈತ್ರಿ ಸರಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಬಜೆಟ್ ಮಂಡಿಸಿದ್ದು, ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿದಂತೆ ಇತರೆ ರಾಜಕೀಯ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಮೈತ್ರಿ ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಬಜೆಟ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ಸಮಾಜದ ಕಟ್ಟಕಡೆಯ ಮನುಷ್ಯನವರೆಗೂ ತಲುಪಿಸುವುದು ಸಮ್ಮಿಶ್ರ ಸರಕಾರದ ಜವಾಬ್ದಾರಿಯಾಗಿದೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

ಒಂದೇ ಕಂತಿನಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿ ಎಲ್ಲ ಇಲಾಖೆಗಳ ಕೆಲಸವನ್ನು ಸ್ಥಗಿತಗೊಳಿಸಿದ್ದ ಸಿಎಂ ಕುಮಾರಸ್ವಾಮಿ ಇದೀಗ ರಾಜ್ಯದ ಜನರಿಗೆ ಸುಳ್ಳು ಹೇಳಿದ್ದಾರೆ. ಮುಖ್ಯಮಂತ್ರಿಗೆ ಹಾಸನ ಬಿಟ್ಟು ಬೇರೆಯದು ನೆನಪಾಗಿಲ್ಲ. ಇಂಥ ಬಜೆಟ್ ಅನ್ನು ನಾನು ಖಂಡಿಸುತ್ತೇವೆ. ಸದನದ ಒಳಗೆ ಸೋಮವಾರದಿಂದ ಚರ್ಚೆ ಮಾಡುತ್ತೇವೆ. ಬಜೆಟ್‌ನಲ್ಲಿ ಮಹದಾಯಿ ಯೋಜನೆ ಬಗ್ಗೆ ಚಕಾರ ಎತ್ತಿಲ್ಲ. ಪೊಲೀಸ್ ಇಲಾಖೆಯನ್ನು ಸಂಪೂರ್ಣ ಕಡೆಗಣನೆ ಮಾಡಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಜಾರಿಗೊಳಿಸಿದ ಯೋಜನೆ ಬಗ್ಗೆ ಬಜೆಟ್‌ನಲ್ಲಿ ಮಾಹಿತಿ ಇಲ್ಲ.
-ಬಿ.ಎಸ್.ಯಡಿಯೂರಪ್ಪ, ವಿಧಾನಸಭೆಯ ವಿಪಕ್ಷ ನಾಯಕ

ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಬೀದರ್ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ನೀರಾವರಿ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಬೀದರ ಜಿಲ್ಲೆಗೆ ವಿಶೇಷವಾದ ಕೊಡುಗೆ ನೀಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗೆ ಧನ್ಯವಾದ ಸಲ್ಲಿಸುತ್ತೇನೆ.
-ಬಂಡೆಪ್ಪ ಕಾಶೆಂಪೂರ, ಸಹಕಾರ ಸಚಿವ

ನಮ್ಮ ಸರಕಾರ ಮಂಡಿಸಿದ ಆಯವ್ಯಯವು ನಾಡಿನ ಎಲ್ಲ ಕ್ಷೇತ್ರಗಳ, ಎಲ್ಲಾ ಜನಾಂಗಗಳ ಸಮಗ್ರ ಹಿತ ಕಾಯ್ದುಕೊಳ್ಳಲು ಮತ್ತು ರಾಜ್ಯದ ಅಭಿವೃದ್ಧಿಯ ಗತಿಯನ್ನು ಮತ್ತಷ್ಟು ಹೆಚ್ಚಿಸಲು ಪೂರಕವಾಗಿದೆ.
-ಡಾ. ಜಯಮಾಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News