'ಕಡವು ಮನೆ'ಯೊಳಗೊಂದು ಇಣುಕು ನೋಟ

Update: 2019-02-09 13:07 GMT

ಕನ್ನಡದ ಪ್ರಸಿದ್ಧ ಕಾದಂಬರಿಕಾರರೂ, ಕತೆಗಾರರೂ ಆಗಿರುವ ಫಕೀರ್ ಮುಹಮ್ಮದ್ ಕಟ್ಪಾಡಿಯವರು ಸಂವೇ ದನಾ ಶೀಲರಾಗಿ ಸೃಜನಶೀಲ ಸಾಹಿತ್ಯ ರಚಿಸುವಂತೆ ವೈಚಾರಿಕ ಚಿಂತನೆಗಳುಳ್ಳ ಮತ್ತು ಅಧ್ಯಯನ ಶೀಲವಾದ ಕೃತಿ ಗಳನ್ನೂ ಕನ್ನಡ ಸಾಹಿತ್ಯಕ್ಕೆ ನೀಡಿದವರು. ಕಡವು ಮನೆ ಇಂಬಳಗಳು, ಪಾಡು ಎಂಬ ಮೂರು ನೀಳ್ಗತೆ ಗಳ ಸಂಕಲನ. ಕಡವು ಮನೆಯಂತೂ ಕಿರು ಕಾದಂಬರಿಯೇ ಸರಿ. ಈ ಮೂರು ನೀಳ್ಗತೆಗಳು ಸೃಷ್ಟಿಯಾದ ಹಿನ್ನೆಲೆಯನ್ನು ಕಥೆ ಗಾರರು ಮುನ್ನುಡಿಯಲ್ಲಿ ನಿವೇದಿಸಿಕೊಂಡಿದ್ದಾರೆ. ತರವಾಡು ಮನೆಯ ವೈಭವದ ಅವನತಿ ನಮ್ಮ ಜಿಲ್ಲೆಯಲ್ಲಿ ಕೋಮುವಾದ ಸೃಷ್ಟಿಸಿದ ತಲ್ಲಣಗಳು, ಸೂಫಿ ಚಿಂತನೆಯ ಬದುಕಿನ ಅಧ್ಯಾತ್ಮ ರಹಸ್ಯದ ಅನುಭವ.

ಈ ಮೂರು ವಸ್ತುಗಳನ್ನಿಟ್ಟುಕೊಂಡು ಈ ನೀಳ್ಗತೆ ಗಳು ರೂಪುಗೊಂಡಿವೆ. ಬದುಕನ್ನು ಅದರ ಸಮಗ್ರತೆಯಲ್ಲಿ ಗ್ರಹಿಸುವ ನೈಪುಣ್ಯ ವಿದ್ದರೆ ಮಾತ್ರ ಒಂದು ವಿಶ್ವಾತ್ಮಕ ನೋಟ ವನ್ನು ಕತೆಗಾರ ನೀಡಬಲ್ಲ. ಅವನಿಂದ ದೇಶ ಕಾಲ ಮೀರಿದ ವೌಲ್ಯಗಳು ಸಾಹಿತ್ಯದಿಂದ ಲಭ್ಯವಾಗುತ್ತವೆ. ತನ್ನ ಅನುಭವಕ್ಕೆ ಸಾಕ್ಷಿಯಾಗಿ ಬರೆಯುವ ಸೃಜನಶೀಲ ಲೇಖಕ ತನ್ನ ಗೊಂದಲಗಳಿಗೆ, ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುವವರೆಗೂ ಅನ್ವೇಷಣೆ ನಡೆಸುತ್ತಿರುತ್ತಾನೆ. ಈಅನ್ವೇಷಣೆಯ ಫಲವಾಗಿ ಈ ಮೂರು ನೀಳ್ಗತೆಗಳು ಹುಟ್ಟಿ ಕೊಂಡಿವೆ. ಇದು ಕೇವಲ ಮುಸ್ಲಿಂ ಕುಟುಂಬದ ಕತೆಯಾಗಿ ಉಳಿ ದಿಲ್ಲ. ಸಮಸ್ತ ಮಾನವ ಕುಲದ ತಲ್ಲಣಗಳನ್ನು ಸಹೃದಯರಿಗೆ ಮುಟ್ಟಿಸಿ ಮನಸ್ಸನ್ನು ಆರ್ದೃಗೊಳಿಸಿದೆ. ಸೀತಾನದಿಯ ದಡದಲ್ಲಿದ್ದ ಕಡವು ಮನೆಯ ವೈಭವದ ಕಥನ ಬಾಲಕ ಸಲೀಮನ ಕಣ್ಣುಗಳಿಂದ ನಮಗೆ ಕಾಣಿಸುತ್ತದೆ. ಸಲೀಮನ ಮಾವ ಶಾಬುದ್ದೀನ್ ಯಜ ಮಾನ ಹಲವು ಚಟಗಳ ದಾಸ. ಅತ್ತೆ ದರ್ಷಿಷ್ಟೆ. ಸಲೀಮನ ತಾಯಿ ಈ ತರ ವಾಡು ಮನೆಯಲ್ಲಿ ಗಂಡನ ಜೊತೆಯಲ್ಲಿ ಇದ್ದಾಳೆ. ಅಜ್ಜಿಯ ಹಿರಿತನಕ್ಕೆ ಸಲೀಮ ಶಿರಬಾಗುತ್ತಾನೆ. ನೆರೆಯಿಂದಾವೃತವಾದ ಕಡವು ಮನೆಯ ಸದಸ್ಯರ ನೆರೆಕರೆಯವರ ಪಡಿಪಾಟಲುಗಳು ದೃಶ್ಯವಾಗಿ ಕಣ್ಣಿಗೆ ಕಟ್ಟಿಕೊಟ್ಟಿದೆ. ಸಲೀಮ ಪಿಯುಸಿ ಓದು ವಷ್ಟರಲ್ಲಿ ಈ ಮನೆಯ ವೈಭವದ ಇಳಿತ ಪ್ರಾರಂಭವಾಗುತ್ತದೆ ಕುಟುಂಬದ ಶ್ರೀಮಂತಿಕೆಯ ಭರತ ಇಳಿತಗಳು ಅಹಂ ಕಾರದ ಮೇಲಾಟಗಳು ನಿಂದೆ ಅಪಮಾನ ಗಳಿಗೆಲ್ಲಾ ಸಲೀಮ ಸಾಕ್ಷಿದಾರನಾಗುತ್ತಾನೆ.

ಮಾವನ ಮಗಳು ಶಾಹೀನಾ ಗಂಡನ ಮನೆಯ ಹಿಂಸೆ ತಾಳಲಾರದೆ ಬಂದು ಮಾನಸಿಕ ಏರಿತಗಳಿಂದ ನರಳಿದ್ದು, ಒಂದು ದಿನ ಕಡವಿನ ದೋಣಿ ಚಾಲಕ ಹುಸೈನಾಕಾ ನೊಂದಿಗೆ ಆಕೆ ಓಡಿ ಹೋದದ್ದು, ಕಡವು ಮನೆಯ ವೈಭವಕ್ಕೆ, ಖ್ಯಾತಿಗೆ ಮಸಿ ಬಳಿದ ಘಟನೆಗಳೆಂದು ಹಿರಿಯರು ನೊಂದು ಕೊಂಡಿದ್ದು, ಮನೆ ಪಾಲಾಗಿ ಕುಟುಂಬ ಒಡೆದದ್ದು ಇವೆಲ್ಲವನ್ನೂ ಕಾಮ-ಪ್ರೇಮ-ಮಮತೆ ಕಕ್ಕುಲಾತಿಗಳ ಸಮ ಪಾಕದಂತೆ ಕತೆ ಗಾರರು ಚಿತ್ರಿಸಿದ್ದಾರೆ. ಇದೇ ಶಾಹೀನಾಳ ಗಂಡ ಹುಸೈನಾಕಾ ನದಿಗಳಿಗೆ ಸೇತುವೆ ಕಟ್ಟುವ ಕಂಟಾಕ್ಟುದಾರನಾಗಿ ಬೆಳೆದು ಒಡೆದ ಕಡವು ಮನೆಗಳನ್ನು ಜೋಡಿಸುವ ಸೇತುವೆಯಾಗಿ ಗೌರವ ಪಡೆದದ್ದು ಕತೆಗೆ ಉತ್ತಮ ತಿರುವು ನೀಡಿದೆ. ಕತೆಗಾರ ಲೋಕ ಜೀವನದ ಅಂತರ್ದರ್ಶನದ ಜೊತೆಗೆ ಮನುಷ್ಯ ಸ್ವಭಾವಗಳ ವಿಮರ್ಶೆಯನ್ನೂ ಮಾಡುತ್ತಾನೆ. ಸಲೀಮನನ್ನು ಅವಮಾನಿಸಿದ ಮಾವನ ಮಗಳನ್ನೇ ಮೆಚ್ಚಿದ್ದಲ್ಲದೆ ಮಾವ ಇವನಲ್ಲಿ ಸಾಲ ಕೇಳುವ ಸ್ಥಿತಿಗೆ ಬಂದನೆಂಬಲ್ಲಿಗೆ ಕತೆ ಮುಕ್ತಾಯವಾಗುತ್ತದೆ. ಸಾಹಿತ್ಯದ ಬೇರು ಗಿಡದಲ್ಲಿ ಹೂ ತಲೆಯಲ್ಲಿ ಎಂಬ ಮಾತು ಇದೆ. ಓದಿ ಮುಗಿಸಿದಾಗ ಉಂಟಾಗುವ ಆನಂದ ಮತ್ತು ನಿರಾಳತೆಯೇ ಈ ಹೂಗಳು, ಸಾಹಿತಿಯ ಅಂತರಂಗ ಅರಳಿ ದಂತೆ ಅನುಭವ ವಿಸ್ತಾರವಾಗುತ್ತದೆ ಎಂಬುದಕ್ಕೆ ಕಟ್ಟಾಡಿಯವರ ಈ ಕತೆ ಸಾಕ್ಷಿಯಾಗಿದೆ.

ಇಂಬಳಗಳು ಇತ್ತೀಚಿನ ವರ್ಷಗಳಲ್ಲಿ ನಮ್ಮ ಜಿಲ್ಲೆಯ ಪ್ರಪಂಚದಾದ್ಯಂತ ಕೆಟ್ಟ ಕಾರಣಕ್ಕೆ ಪ್ರಸಿದ್ಧಿಯಾದದ್ದು ಗೊತ್ತಲ್ಲಾ. ಆ ವಸ್ತುಗಳನ್ನೊಳಗೊಂಡಿದೆ. ಶಾಮರಾಯ, ಶಾಬುದ್ದೀನ್ ಸಹೋದ್ಯೋಗಿಗಳು. ಒಂದೇ ಆಫೀಸಿನಲ್ಲಿ ಕೆಲಸ ಮಾಡುವ ಭಿನ್ನ ಕೋಮಿನ ವ್ಯಕ್ತಿಗಳ ಅಸಹನೆಗೆ ವ್ಯಂಗ್ಯಕ್ಕೆ, ಕುಚೋದ್ಯಕ್ಕೆ ಮುಸ್ಲಿಮರು ವಸ್ತುವಾಗಿ ಬದಲಾವಣೆಗೊಳ್ಳಲು ಕಾರಣವಾದ ಮನೋಸ್ಥಿತಿಯ ಬಗ್ಗೆ ಕತೆಗಾರರು ತುಂಬಾ ಸಂಕಟ ಪಟ್ಟು ವರ್ಣಿಸುತ್ತಾರೆ. ಕಟ್ಪಾಡಿಯವರ ಕಚ್ಚಾದ ಕಾದಂಬರಿಯ ಬಗ್ಗೆ ಬರಗೂರರು ಒಂದು ಮಾತು ಹೇಳುತ್ತಾರೆ. ‘ಬಂಡಾಯದ ಚಳವಳಿಯಲ್ಲಿರುವವರಿಗೆ ಸಮೂಹ ಸನ್ನಿಗೆ ಒಳಗಾಗದ, ಮೆರವಣಿಗೆಯ ನಡುವೆ ಇದ್ದೂ ಒಂಟಿತನ ಅನುಭವಿಸುವ ಸೂಕ್ಷ್ಮತೆ ಇರಬೇಕು’. ಇದು ಸತ್ಯದ ಮಾತು. ಕತೆಗಾರನ ಮನಸ್ಸು ಕುಲುಮೆಯಂತಿದ್ದರೂ ಅದರಲ್ಲಿ ತಾಯಿಯ ಒಡಲಿನ ಮಮತೆ ಮತ್ತು ಸೂಕ್ಷ್ಮತೆ ಇದೆ. ಸಮದ್‌ನೊಂದಿಗೆ ಕೇವಲ ಮಾತಾಡಿದ ಕಾರಣಕ್ಕೇ ಶಿಕ್ಷಿಸಿದ ತಂದೆಯ ನೀಚತನಕ್ಕೆ ಹೇಸಿ ಶ್ಯಾಮರಾಯರ ಮಗಳು ಶೀಲಾವತಿ ಶಾಬುದ್ದೀನ್‌ನ ಮಗ ಸಮದ್‌ನೊಂದಿಗೆ ರಿಜಿಸ್ಟರ್ಡ್ ಮದುವೆಯಾದಳು. ಸಮದ್‌ಗೆ ಊರಲ್ಲಿ ಎಲ್ಲೂ ಕೆಲಸ ಸಿಗದಂತೆ ಮಾಡಿದ ಊರವರ ಮನಸ್ಥಿತಿ ಯನ್ನು ಕಂಡು ಧೃತಿಗೆಡದೆ ಮಾಂಸದಂಗಡಿಯನ್ನು ತೆರೆದು ಬದುಕುವ ದಾರಿ ಹುಡುಕಬೇಕಾದಾಗ ಶೀಲಾವತಿಯೂ ಕಂಗೆಡಲಿಲ್ಲ.

ಆಕೆಯನ್ನು ಮತಾಂತರಿಸ ಬೇಕೆಂದು ಮುಸ್ಲಿಂ ಕೋಮುವಾದಿ ಗಳಿಂದ ಒತ್ತಾಯ ಬಂದಾಗ ಸಮದ್ ‘‘ಈ ತೀರ್ಮಾನ ಅವಳ ಇಷ್ಟಕ್ಕೆ ಬಿಟ್ಟಿದ್ದು’’ ಎಂದು ದೃಢವಾಗಿ ನಿಂತ. ಎರಡೂ ಮತಗಳ ಕೋಮುವಾದಿಗಳ ಸಣ್ಣತನ ಮತ್ತು ಹಿಂಸಾತ್ಮಕ ಮನೋ ಭಾವವನ್ನು ಇಲ್ಲಿ ಕತೆಗಾರರು ತೆರೆದಿಟ್ಟಿದ್ದಾರೆ. ಶ್ರೇಷ್ಠ ಕತೆಗಾರನ ಪ್ರತಿಭೆಗೆ ಮಾತ್ರ ಈ ಶಕ್ತಿ ಇರುತ್ತದೆ. ಮೂರನೆಯ ಕತೆ ಪಾಡು- ಸೂಫಿ ಸಂತರ ಆಧ್ಯಾತ್ಮಿಕ ಸಾಧನೆ, ಪವಾಡ, ನಂಬಿಕೆಗಳನ್ನು ಬಿಂಬಿಸಿದ ಕತೆ ನಂಬಿಕೆ ಮತ್ತು ಮೂಢನಂಬಿಕೆಗಳ ಮಧ್ಯದ ಗೆರೆ ಬಹಳ ತೆಳುವಾಗಿದೆ. ಅಜ್ಜ ಮಾಡುವ ಇಸ್ಮ್‌ನ ಕೆಲಸದಲ್ಲಿ ಹಮೀದ್ ಭಾಗವಹಿಸುತ್ತಿ ದ್ದುದರಿಂದ ಸಕಲ ಜೀವಗಳ ನೋವು ನಿವಾರಿಸುವುದೇ ಮುಖ್ಯವೆಂದು ನಂಬಿದ್ದ ಅವನಿಗೆ ಪಾಡಿನ ಗುಡ್ಡದಲ್ಲಿ ಸಿಕ್ಕಿದ ಪುಣ್ಯ ಪುರುಷನ ದರ್ಶನವು ಕೆಲವು ಕರಾಮತ್ತುಗಳನ್ನು ಅಂದರೆ ಪವಾಡಗಳನ್ನು ಕಣ್ಣಾರೆ ಕಾಣು ವಂತಾಯಿತು. ಇದೇ ಪುಣ್ಯ ಪುರುಷ ಅವನ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ. ಮುಂದೆ ಹಮೀದ್ ತನ್ನ ಪಾಂಡಿತ್ಯ, ಭಕ್ತಿ ಶ್ರದ್ಧೆಯಿಂದ ‘ಹಝ್ರತ್’ ಎಂದು ಕರೆಸಿಕೊಂಡ ಇಲ್ಲಿಂದ ಅವನ ಕುದ್ರತ್ ಬದಲಾಯಿತು. ಅಜ್ಜನ ಪ್ರಭಾವಲಯ ದಿಂದ ಬಿಡುಗಡೆ ಹೊಂದ ಬೇಕೆಂದು ಬಯಸಿದರೂ ಸಾಧ್ಯವಾಗದೆ ಹಮೀದ್ ಸೂಫಿ ಸಂತನಾದ.

ಗಿರಿಯಲ್ಲಿ ಹಿಂದೂ ಮುಸ್ಲಿಮರೊಳಗೆ ಜಗಳವಾದಾಗ ‘ದೇವರು ಮುಸ್ಲಿಮರಿಗೆ ಮಾತ್ರ ಅಭಯ ನೀಡಿಲ್ಲ ಇಡೀ ಮಾನವ ಕುಲಕ್ಕೇ ಅಭಯ ನೀಡಿದ್ದಾನೆ’ ಎಂದು ಸಾರಿ ಹೇಳಿದ. ಹಮೀದ್ ಊರಿಗೆ ಬಂದರೆ ಮಳೆ ಯಾಗುತ್ತದೆಂದು ನಂಬಿದ್ದಂತೆ ಮಳೆ ಬಂತು. ಅದು ನಿಲ್ಲದಾಗ ನಿಲ್ಲಿಸೆಂದು ಜನ ಈ ಸಂತನನ್ನು ಕೇಳಿಕೊಂಡರು. ಜನರ ಸ್ವಾರ್ಥ, ಲಾಲಸೆಗಳಿಂದ ನಾಶವಾದ ಊರನ್ನು ಕಂಡು ನೊಂದ ಹಮೀದ್ ‘ನಾನು ನಿಮಗಾಗಿ ಪ್ರಾರ್ಥಿಸಲಾರೆ’ ಎಂದಾಗ ಜನ ಕಲ್ಲು ತೂರತೊಡಗಿದರು. ತಲೆಗೆ ಬಡಿದ ಕಲ್ಲು ರಕ್ತ ಹರಿಸಿತ್ತು ‘‘ನಾನು ಇಂದು ಎಲ್ಲ ಬಂಧನಗಳಿಂದ ಮುಕ್ತನಾಗಿದ್ದೇನೆಂದು’’ ಗೆಳೆಯ ಸಂಜೀವನಿಗೆ ಹೇಳುತ್ತಾ ಮುಗ್ಧ ನಗು ಬೀರಿದ ಹಮೀದ್. ನಮ್ಮ ಆತ್ಮ ಸಂಸ್ಕಾರಕ್ಕೆ ಸಾಹಿತ್ಯದಿಂದ ಆಗುವಷ್ಟು ಸಹಾಯ ಮತಾಚಾರದಿಂದಲೂ ಆಗುವುದಿಲ್ಲ ಎನ್ನುತ್ತಾರೆ ಕುವೆಂಪು. ಸೂಫಿ ಸಂತರು ಅವರ ನಂಬಿಕೆ, ಆಚರಣೆಗಳ ಬಗ್ಗೆ ಯಾವುದೇ ಋಣಾತ್ಮಕ ವಿಚಾರಗಳನ್ನು ಹೇಳದೆ ಕತೆಗಾರರು ಈ ಕತೆಯ ಮೂಲಕ ಆತ್ಮ ಸಂಸ್ಕಾರವನ್ನು ಮಾಡಿದ್ದಾರೆ. ದೇವರನ್ನು ಪ್ರೀತಿಸುವವನು ಮನುಷ್ಯರನ್ನು ಪ್ರೀತಿಸುತ್ತಾನೆ ಎಂಬ ಸತ್ಯವನ್ನು ಈ ಕತೆ ಅನಾವರಣಗೊಳಿಸಿದೆ. ಸಾಹಿತ್ಯದ ಸ್ವರೂಪ ಮತ್ತು ಉದ್ದೇಶಗಳು ಲೇಖಕನ ಪ್ರತಿಭೆಯನ್ನು ಮಾತ್ರವಲ್ಲ ಒಂದು ನಾಡಿನ ಸಂಸ್ಕೃತಿ ಹಾಗೂ ವೈಚಾರಿಕತೆಗಳನ್ನೂ ಅವಲಂಬಿಸಿರುತ್ತದೆ. ಭಾವನೆಗೂ ಭಾಷೆಗೂ ಅನ್ಯೋನ್ಯ ಸಂಬಂಧವಿದ್ದರೆ ಉತ್ತಮ ಕತೆ ರೂಪುಗೊಳ್ಳುತ್ತದೆ. ಸರಳವಾಗಿ ಬರೆಯುವುದು ಒಳ್ಳೆಯವ ನಾಗಿರುವಷ್ಟೇ ಕಷ್ಟ ಎಂದು ಹಿರಿಯರ ಮಾತಿದೆ. ಕಟ್ಪಾಡಿಯವರು ಸರಳವಾದ ಶೈಲಿಯಲ್ಲಿ ಕರಾವಳಿಯ ಸಾಂಸ್ಕೃತಿಕ, ಸಾಮಾಜಿಕ ಪಲ್ಲಟಗಳನ್ನು ಒಂದು ದೊಡ್ಡ ಕ್ಯಾನ್ವಾಸ್‌ನಲ್ಲಿ ಚಿತ್ರಿಸಿಕೊಟ್ಟ ಈ ಕಡವಿನ ಮನೆ ಬಹುಕಾಲ ನಮ್ಮ ಸ್ಮರಣೆಯಲ್ಲಿರುವಂತೆ ಮಾಡುತ್ತದೆ. ಅದಕ್ಕಾಗಿ ಕಟ್ಪಾಡಿಯವರನ್ನು ಸಹೃದಯರು ಅಭಿನಂದಿಸಲೇಬೇಕು.

Writer - ಬಿ.ಎಂ. ರೋಹಿಣಿ

contributor

Editor - ಬಿ.ಎಂ. ರೋಹಿಣಿ

contributor

Similar News