ಪೋಷಕರಿಗೆ ಕಾರ್ಯಾಗಾರಗಳು

Update: 2019-02-09 14:06 GMT

ಕಲಿಕೆಯೆಂಬ ಪ್ರಕ್ರಿಯೆ

► ಭಾಗ - 7

►► ಪೋಷಕರಿಗೇಕೆ ಕಾರ್ಯಾಗಾರ?

ಮಕ್ಕಳ ಪಾಲನೆ ಪೋಷಣೆಯ ನೇರ ಹೊಣೆಗಾರಿಕೆ ಕುಟುಂಬದ ಮತ್ತು ಪೋಷಕರ ಮೇಲೆಯೇ ಇರುವುದರಿಂದ ಮಕ್ಕಳ ಕುರಿತಾಗಿ ಮೊದಲು ತಿಳುವಳಿಕೆ ಮೂಡಿಸಬೇಕಾಗಿರುವುದು ಪೋಷಕರಲ್ಲಿ. ಮಕ್ಕಳ ಬಗ್ಗೆ ತಿಳುವಳಿಕೆ ತಮಗಿಲ್ಲ ಎಂಬ ಅರಿವೇ ಪೋಷಕರಿಗಿಲ್ಲದಿರುವುದು ಬಹು ದೊಡ್ಡ ಸಮಸ್ಯೆ. ತಾವು ಮಕ್ಕಳಾಗಿದ್ದೆವು, ಅದೆಷ್ಟೋ ಮಕ್ಕಳನ್ನು ಸಾಕಿ ಸಲಹಿದ್ದೇವೆ, ಆಡಿಸಿ ಬೆಳೆಸಿದ್ದೇವೆ. ಹಾಗಾಗಿ ತಮಗೆ ಮಕ್ಕಳ ಬಗ್ಗೆ ಎಲ್ಲಾ ಗೊತ್ತು ಎಂಬ ಹುಂಬ ವಿಶ್ವಾಸ ಈ ಪೋಷಕರದ್ದು. ನಿಜ ಹೇಳಬೇಕೆಂದರೆ, ತಾವೇ ತಪ್ಪು ಆರೈಕೆಗೆ ಅಥವಾ ಪೋಷಣೆಗೆ ಒಳಗಾಗಿದ್ದೆವು ಎಂಬ ಅರಿವೇ ಅವರಿಗೆ ಇರುವುದಿಲ್ಲ. ಹಾಗೆ ಅಂದುಕೊಳ್ಳುವುದು ಅಥವಾ ದೂರುವುದು ಹಿರಿಯರನ್ನು ಕಡೆಗಣಿಸಿದಂತೆ ಅಥವಾ ಅಗೌರವದಿಂದ ಕಂಡಂತೆ ಎಂಬ ಭಾವನಾತ್ಮಕ ಬದ್ಧತೆಯಿಂದ ತಪ್ಪುಗಳನ್ನು ತಿಳಿದುಕೊಳ್ಳುವ ಗೊಡವೆಗೆ ಹೋಗುವುದೇ ಇಲ್ಲ. ಹಾಗಾಗಿಯೇ ಪೋಷಕರಿಗೆ ಆ ಭ್ರಮೆಯಿಂದ ಬಿಡಿಸುವ, ಈ ಕಾಲಕ್ಕೆ ಅನುಗುಣವಾಗಿ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಅಗತ್ಯಗಳನ್ನು ಪೂರೈಸುವ, ವಿಸ್ತಾರವಾಗಿರುವ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳ ದೃಷ್ಟಿ ಯನ್ನು ಹೊಂದುವ ಎಲ್ಲಾ ಬಗೆಯ ತಿಳುವಳಿಕೆಗಳನ್ನು ಮತ್ತು ಪ್ರಾಯೋಗಿಕ ಸೂಚನೆಗಳನ್ನು ನೀಡಲು ಪೋಷಕರಿಗೆ ಕಾರ್ಯಾಗಾರಗಳನ್ನು ಏರ್ಪಡಿಸಬೇಕು.

ತಂದೆ ಅಥವಾ ತಾಯಿಯರಲ್ಲಿ ವಿಚಿತ್ರವಾದ ಧೋರಣೆಗಳಿವೆ. ನಾನೇ ಕಂಡಂತೆ ಕೆಲವು ತಂದೆಯರು ಎಂದಿಗೂ ಶಾಲೆಯ ಕಡೆಗೆ ಮುಖ ಮಾಡುವುದೇ ಇಲ್ಲ. ನಾನು ಹೋಗಿ ಮಾಡುವುದೇನು? ಅವಳು (ತಾಯಿ) ಹೋಗಿ ಫೀಸ್ ಕಟ್ಟುತ್ತಾಳೆ ಅಥವಾ ಶಾಲೆಯಲ್ಲಿ ಮಗುವಿನದು ಏನಾದರೂ ಸಮಸ್ಯೆ ಎಂದರೆ ಅವಳು ಹೋಗಿ ತಿಳಿದುಕೊಂಡು ಬರುತ್ತಾಳೆ. ನನಗೆ ಹೇಳುತ್ತಾಳೆ ಇತ್ಯಾದಿ. ಇನ್ನೂ ಕೆಲವು ತಂದೆಯರು ಬರುವುದು ಬರೇ ಜಗಳ ಆಡುವುದಕ್ಕೆ. ಹಕ್ಕುಗಳ ಬಗ್ಗೆ ಮಾತಾಡುವುದಕ್ಕೆ. ಯಾವುದೇ ಶಿಕ್ಷಣ ಸಂಸ್ಥೆಯು ತನ್ನ ಶಾಲೆಗೆ ಬರುವ ಮಕ್ಕಳ ಸಾಮಾಜಿಕ ಮತ್ತು ಶೈಕ್ಷಣಿಕ ಭವಿಷ್ಯದ ಬಗ್ಗೆ ನಿಜವಾದ ಕಾಳಜಿಯನ್ನು ಹೊಂದಿದ್ದೇ ಆದಲ್ಲಿ ಪೋಷಕರಿಗೆ ಅರಿವನ್ನು ಉಂಟುಮಾಡುವ ಶಿಬಿರಗಳನ್ನು ಮತ್ತು ಕಾರ್ಯಾಗಾರಗಳನ್ನು ನಡೆಸಲೇ ಬೇಕು. ಇಲ್ಲವಾದರೆ, ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯುವ ಕತೆಯಾಗುತ್ತದೆ.

►► ಶಾಲೆಗೆ ಬರದ ಪೋಷಕರು

ಕೆಲವು ಪೋಷಕರು ತಮ್ಮ ದೌಲತ್ತು ಅಥವಾ ದೌರ್ಬಲ್ಯಗಳಿಂದಾಗಿ ಶಾಲೆಗೆ ಬರುವುದಿಲ್ಲ. ಉತ್ತಮ ಹಣಕಾಸಿನ, ಉದ್ಯೋಗದ ಅಥವಾ ಅಧಿಕಾರದಲ್ಲಿರುವ ಕೆಲವು ಪೋಷಕರು ದೌಲತ್ತಿನ ಕಾರಣಕ್ಕೆ ಶಾಲೆಗೆ ಬರದಿದ್ದರೆ, ಮತ್ತೆ ಕೆಲವು ಪೋಷಕರು ತಮಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ, ಇಂಗ್ಲಿಷ್ ಬರುವುದಿಲ್ಲ, ಮಕ್ಕಳ ಕುರಿತಾಗಿ ನಮ್ಮನ್ನೇ ಆಕ್ಷೇಪಿಸುತ್ತಾರೆ, ತಾವಷ್ಟು ವಿದ್ಯಾವಂತರಲ್ಲ, ಬುದ್ಧಿವಂತರಲ್ಲ; ಹೀಗೆ ನಾನಾ ರೀತಿಯ ತಮ್ಮ ದೌರ್ಬಲ್ಯವನ್ನು ಮುಂದಿಟ್ಟುಕೊಂಡು ಶಾಲೆಯ ಕಡೆಗೆ ಸುಳಿಯುವುದಿಲ್ಲ. ಇನ್ನೂ ಕೆಲವು ಕಾರಣಗಳನ್ನು ಪಟ್ಟಿ ಮಾಡಬಹುದಾದರೆ, ಕೆಲವರು ಸರಿಯಾಗಿ ಫೀಸ್ ಕಟ್ಟಿರುವುದಿಲ್ಲ. ಹೋದರೆ ಫೀಸ್ ಕೇಳುತ್ತಾರೆ. ಅದಕ್ಕೆಂದೇ ಬರುವುದಿಲ್ಲ ಎಂಬ ಮಂದಿ ಒಂದು ಕಡೆಯಾದರೆ, ಹೋಗಿ ಮಾಡುವುದೇನು? ಸರಿಯಾದ ಸಮಯಕ್ಕೆ ಫೀಸ್ ಕಟ್ಟಿದರಾಯಿತು. ನಮ್ಮ ಮಗು ನಮಗೆ ಗೊತ್ತಿಲ್ಲವೇ? ಎಂಬ ಧೋರಣೆ. ಶಿಕ್ಷಕರ ಬಗ್ಗೆ ಮಗುವು ಹೇಳುವ ದೂರುಗಳನ್ನೂ ಕೂಡಾ ಕೆಲವು ಪೋಷಕರು ಶಾಲೆಯಲ್ಲಿ ಚರ್ಚಿಸಲು ಬರುವುದಿಲ್ಲ. ಈ ಒಂದು ವರ್ಷ ತಳ್ಳಿಬಿಡೋಣ, ಆಮೇಲೆ ಬೇರೆ ಶಾಲೆಗೆ ಸೇರಿಸೋಣ ಎಂಬ ಧೋರಣೆ. ಶಿಕ್ಷಕರ ಬಗ್ಗೆ ದೂರನ್ನು ನೀಡಲು ಅಥವಾ ಅದರ ಬಗ್ಗೆ ಮಾತಾಡಿದರೆ, ತಮ್ಮ ಮೇಲಿನ ಕೋಪವನ್ನು ಶಿಕ್ಷಕರು ಮಕ್ಕಳ ಮೇಲೆ ತೋರಿಸುತ್ತಾರೆ ಮತ್ತು ತಮ್ಮ ಮಗುವಿನ ಮೇಲೆ ಕಣ್ಣಿಟ್ಟು ಸೇಡು ಸಾಧಿಸುತ್ತಾರೆ ಎಂಬ ಭಯ. ಒಟ್ಟಾರೆ ತಮ್ಮದೇ ಆದಂತಹ ಕಾರಣಗಳಿಂದ ಪೋಷಕರು ಶಾಲೆಗೆ ಬರುವುದಿಲ್ಲ.

►► ಶಾಲೆ ಮಾಡಬೇಕಾಗಿರುವುದೇನು?

ಶಿಕ್ಷಣ ಸಂಸ್ಥೆಯು ಮಗುವನ್ನು ದಾಖಲು ಮಾಡಿಕೊಳ್ಳುವಾಗಲೇ ಇಬ್ಬರೂ ಕಡ್ಡಾಯವಾಗಿ ಬರಬೇಕು ಎಂದು ಸೂಚಿಸಿ ಅದರಂತೆ ನಡೆದುಕೊಳ್ಳಬೇಕು. ಒಬ್ಬರೇ ಪೋಷಕರು ಇದ್ದರೆ ಅದು ಬೇರೆ ಮಾತು. 2 ತಿಂಗಳಿಗೆ ಒಮ್ಮೆ ಪೋಷಕರ ಸಭೆ ಮತ್ತು ಮತ್ತೆ 2 ತಿಂಗಳಿಗೆ ಒಮ್ಮೆ ಪೋಷಕರಿಗೆ ಕಾರ್ಯಾಗಾರ ಅಥವಾ ಶಿಬಿರ ನಡೆಸಬೇಕು. ಒಂದು ತಿಂಗಳು ಆಡಳಿತ ಮಂಡಳಿ, ಶಿಕ್ಷಕರ ಮತ್ತು ಪೋಷಕರ ಸಭೆ ನಡೆಯಬೇಕು. ಇದರಲ್ಲಿ ಶಾಲೆಯಲ್ಲಿ ಇರುವ ಕುಂದು ಕೊರತೆಗಳ ಬಗ್ಗೆ, ಪ್ರಶಂಸೆ ಅಥವಾ ವಿಮರ್ಶೆಗಳ ಬಗ್ಗೆ ಚರ್ಚೆ ಮತ್ತು ವಿಚಾರ ವಿನಿಮಯವಾಗುವುದು. ಮತ್ತೊಂದು ತಿಂಗಳು ಆಡಳಿತ ಮಂಡಳಿಯು ಪೋಷಕರಿಗೆಂದೇ ಆಯೋಜಿಸುವ ಶಿಬಿರ ಮತ್ತು ಕಾರ್ಯಾಗಾರಗಳನ್ನು ನಡೆಸುವುದು. ಇದಲ್ಲದೇ ಪ್ರತಿ ಘಟಕ ಪರೀಕ್ಷೆಗಳು ನಡೆದಾಗ ಆಯಾ ತರಗತಿಯ ಉಪಾಧ್ಯಾಯರನ್ನು ಪೋಷಕರು ಸಂಧಿಸಿ, ಮಗುವಿನ ವ್ಯಕ್ತಿಗತ ಪ್ರಗತಿ ಮತ್ತು ಸಮಸ್ಯೆಗಳ ಬಗ್ಗೆ ಮಾತಾಡಿಕೊಳ್ಳುವುದು. ಒಟ್ಟಾರೆ ಪೋಷಕರಿಗಾಗಿ ಮೂರು ಬಗೆಯ ಕಾರಣಗಳಿಗಾಗಿ ಬರುವಂತೆ ಶಿಕ್ಷಣ ಸಂಸ್ಥೆ ನೋಡಿಕೊ್ಳಬೇಕು.

ಶಿಬಿರ -ಕಾರ್ಯಾಗಾರಗಳ ವಿಷಯಗಳೇನಿರಬೇಕು?

ಪೋಷಕರು ಮಕ್ಕಳ ಮಾನಸಿಕ, ಬೌದ್ಧಿಕ ಮತ್ತು ಭಾವನಾತ್ಮಕ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ತಜ್ಞರಿಂದ ಸೂಕ್ತ ಶಿಬಿರಗಳನ್ನು ಮಾಡಬೇಕು.

1.ಮಕ್ಕಳ ಆಹಾರ, ಆರೋಗ್ಯ ಮತ್ತು ಇನ್ನಿತರ ಶಾರೀರಿಕ ಬೆಳವಣಿಗೆಯ ಬಗ್ಗೆ ನಿರ್ದೇಶನಗಳು.

2.ಮಗುವಿನ ಮಾನಸಿಕ ಸ್ಥಿತಿ ಮತ್ತು ಅದರ ವರ್ತನೆಗಳನ್ನು ವಿಶ್ಲೇಷಿಸುವ, ಸಮಸ್ಯೆಗಳನ್ನು ಕಂಡಲ್ಲಿ ಅದಕ್ಕೆ ಸೂಕ್ತ ಸಮಾಲೋಚನೆ ಮತ್ತು ಸಮಾಧಾನ ನೀಡುವಂತಹ ಶಿಬಿರಗಳು.

3.ಮಗುವಿನ ಸರ್ವತೋಮುಖ ಅಭಿವೃದ್ಧಿ ಮತ್ತು ಸಮಗ್ರ ವಿಕಾಸದ ಬೇರು ಕುಟುಂಬದಲ್ಲಿರುವುದರಿಂದ ಮಗುವಿನ ಸೂಕ್ಷ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ವಿಷಯಗಳ ಕುರಿತಾದ ಶಿಬಿರಗಳು.

4.ಬರೀ ಓದು, ಬರಿ, ಹೆಚ್ಚಿನ ಅಂಕ, ರ್ಯಾಂಕ್ ಗೀಳು ಇತ್ಯಾದಿಗಳಿರುವ ಪೋಷಕರು ಮಗುವಿನ ಮೇಲೆ ನಾನಾ ಬಗೆಯ ಒತ್ತಡಗಳನ್ನುಹೇರುತ್ತಿರುತ್ತಾರೆ. ಮಗುವಿಗೆ ಒತ್ತಡ ಮುಕ್ತ ಪರಿಸರವನ್ನು ಉಂಟು ಮಾಡುವುದಕ್ಕೆ ಅಗತ್ಯವಿರುವ ಶಿಬಿರಗಳು.

5.ಹಟಮಾರಿತನ, ಅವಿಧೇಯತನ, ಸಮಸ್ಯಾತ್ಮಕ ವರ್ತನೆಗಳಿರುವಂತಹ ಮಕ್ಕಳ ಬಗ್ಗೆ ವಿಶೇಷ ಶಿಬಿರಗಳು.

6.ಕಲಿಕೆಯ ನ್ಯೂನತೆ ಅಥವಾ ಡಿಸ್ಲೆಕ್ಸಿಯಾ, ನಿರ್ಗಲಿಕೆ, ಮಂದಗಲಿಕೆಯ ಮಕ್ಕಳಿಗೆ ಮನೆಯಲ್ಲಿ ಹೇಗೆ ತರಬೇತಿ ಕೊಡಬೇಕೆಂಬ ಕಾರ್ಯಾಗಾರಗಳು ಅಥವಾ ಶಿಬಿರಗಳು.

7.ಮಕ್ಕಳು ಬೋಧನೆಗಳನ್ನು ಕೇಳುವವರಲ್ಲ. ಆದರೆ, ಪೋಷಕರ ಉದಾಹರಣೆಗಳನ್ನು ಅನುಸರಿಸುವವರು. ಹಾಗಾಗಿ, ಮಕ್ಕಳಿಗೆ ಮಾದರಿಯಾಗಿ ತಮ್ಮ ದೌಲತ್ತು, ದೌರ್ಬಲ್ಯ, ಹಟ ಅಥವಾ ಇನ್ನಿತರ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಗುವಿನ ಬೆಳವಣಿಗೆಗೆ ಪೂರಕವಾಗುವ ರೀತಿಗಳ ಬಗ್ಗೆ ತಿಳುವಳಿಕೆ.

ಪಟ್ಟಿ ಮಾಡುತ್ತಾ ಹೋದರೆ ಬಹಳಷ್ಟಿರುವುದು. ಒಟ್ಟಾರೆ ಮಗುವಿನ ಸಮಗ್ರ ಬೆಳವಣಿಗೆಯ ಬಗ್ಗೆ ಶಾಲೆ ನಿಜಕ್ಕೂ ಕಾಳಜಿ ವಹಿಸಿದ್ದೇ ಆದಲ್ಲಿ ಪೋಷಕರಿಗೆ ಮರೆಯದೇ ತಿಂಗಳಿಗೊಮ್ಮೆ ತಮ್ಮ ಶಾಲೆಗೆ ಬರುವುದಕ್ಕೂ ಮತ್ತು ಹಾಗೆ ಅವರಿಗೆ ಪ್ರಸ್ತುತ ಕಾಲಘಟ್ಟದ ತಿಳುವಳಿಕೆಯ್ನು ನೀಡುವುದು ಖಂಡಿತ ಅವಶ್ಯಕ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News