ಡಿಸಿಎಂ ಪರಮೇಶ್ವರ್ ರನ್ನು ಭೇಟಿಯಾದ ಶ್ರೀಲಂಕಾ ಮಾಜಿ ಅಧ್ಯಕ್ಷ ರಾಜಪಕ್ಷ

Update: 2019-02-09 16:08 GMT

ಬೆಂಗಳೂರು, ಫೆ.9: ಶ್ರೀಲಂಕಾ ದೇಶದ ಮಾಜಿ ರಾಷ್ಟ್ರಾಧ್ಯಕ್ಷ ಮಹಿಂದಾ ರಾಜಪಕ್ಷ ಶನಿವಾರ ಸದಾಶಿವನಗರದಲ್ಲಿರುವ ಬಿಡಿಎ ಕ್ವಾಟ್ರಸ್‌ನಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಮಹಿಂದಾ ರಾಜಪಕ್ಷ ಅವರ ನೇತೃತ್ವದ ನಿಯೋಗ ಇಂದು ಬೆಂಗಳೂರಿಗೆ ಆಗಮಿಸಿ, ನನ್ನನ್ನು ಭೇಟಿ ಮಾಡಿತು. ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ ಎಂದರು.

ಮಹಿಂದಾ ರಾಜಪಕ್ಷ ಅಧಿಕಾರದಲ್ಲಿ ಇಲ್ಲದಿರುವುದರಿಂದ ಯಾವುದೇ ನೀತಿ, ಒಪ್ಪಂದದ ಬಗ್ಗೆ ನಾವು ಈ ಭೇಟಿ ವೇಳೆ ಚರ್ಚೆ ಮಾಡಿಲ್ಲ. ಬೆಂಗಳೂರಿನಲ್ಲಿ ಐಟಿ, ಸ್ಟಾರ್ಟ್‌ಅಪ್‌ಗಳ ಬೆಳವಣಿಗೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಅವರು, ಇದರ ಬೆಳವಣಿಗೆಗೆ ಇಲ್ಲಿರುವ ವಾತಾವರಣ, ಸೌಲಭ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು ಎಂದು ಅವರು ಹೇಳಿದರು.

ಬೆಂಗಳೂರು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಐಟಿ ಬೆಳವಣಿಗೆ ಹಾಗೂ ರಾಜ್ಯ ಸರಕಾರ ಅವರಿಗೆ ಯಾವ ರೀತಿಯ ವ್ಯವಸ್ಥೆ ಮಾಡಿದೆ ಎಂದು ಮಾಹಿತಿ ಪಡೆದರು. ಜೊತೆಗೆ, ಖಾಸಗಿ ಕಂಪನಿಗಳು ರಾಜ್ಯದ ಆರ್ಥಿಕತೆಗೆ ಯಾವ ರೀತಿ ಸಹಕಾರ ನೀಡುತ್ತಾರೆ, ಉದ್ಯೋಗ ಸೃಷ್ಟಿ ಬಗ್ಗೆ ಚರ್ಚೆ ಮಾಡಿದರು ಎಂದು ಪರಮೇಶ್ವರ್ ತಿಳಿಸಿದರು.

ಶ್ರೀಲಂಕಾ ದೇಶಕ್ಕೆ ಭಾರತದಂತೆಯೇ ವೇಗವಾಗಿ ಬೆಳೆಯುವ ಮಹದಾಸೆ ಇದೆ. ಈ ನಿಟ್ಟಿನಲ್ಲಿ ಕೆಲ ಸಲಹೆ ಪಡೆದರು. ಜೊತೆಗೆ ಅಲ್ಲಿನ ರಾಜಕೀಯ ಬೆಳವಣಿಗೆ ಬಗ್ಗೆ ವಿಶ್ಲೇಷಿಸಿದರು ಎಂದು ಪರಮೇಶ್ವರ್ ಹೇಳಿದರು.

ನಿಯೋಗದಲ್ಲಿ ಶ್ರೀಲಂಕಾ ಸಂಸದ ನಮಲ್ ರಾಜಪಕ್ಷ, ಶ್ರೀಲಂಕಾದ ಮಾಜಿ ಸಚಿವರಾದ ಪಿ.ಎಲ್.ಪೈರಿಸ್, ದುಲ್ಲಾಸ್, ಚಮಿತ್ರಿ ರಾಮ್ಬುಕ್ವೆಲ್ಲಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News