×
Ad

ಶ್ರೀರಾಮ ಸೇನೆ ಮಹಿಳಾ ಅಧ್ಯಕ್ಷೆ ಮೇಲೆ ಗೂಂಡಾ ಕಾಯ್ದೆ ?

Update: 2019-02-09 22:02 IST

ಬೆಂಗಳೂರು, ಫೆ.9: ಹಲವು ಗಂಭೀರ ಅಪರಾಧ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಬೆಂಗಳೂರು ಘಟಕದ ಮಹಿಳಾ ಅಧ್ಯಕ್ಷೆಯೂ ಆಗಿರುವ ರೌಡಿಶೀಟರ್ ಯಶಸ್ವಿನಿಯನ್ನು ಗೂಂಡಾಕಾಯ್ದೆ ಅಡಿ ಬಂಧಿಸಲು ನಗರದ ದಕ್ಷಿಣ ವಿಭಾಗದ ಪೊಲೀಸರು ಚಿಂತನೆ ನಡೆಸಿದ್ದಾರೆ.

ನಗರದ ಉತ್ತರ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಶಸ್ವಿನಿ ವಿರುದ್ಧ ಹಲ್ಲೆ, ಅಪಹರಣ ಸೇರಿದಂತೆ ಗಂಭೀರ ಅಪರಾಧ ಆರೋಪ ಪ್ರಕರಣಗಳು ಹೆಚ್ಚಾಗಿದ್ದವು. ದಕ್ಷಿಣ ವಿಭಾಗದಲ್ಲಿಯೂ ಉಪಟಳ ನಡೆಸಿದರೆ, ಅವರ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಲು ಚಿಂತನೆ ನಡೆಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಒಂದೇ ತಿಂಗಳಲ್ಲಿ ಯಶಸ್ವಿನಿ ವಿರುದ್ಧ ನಗರದ ಗಂಗಮ್ಮನ ಗುಡಿ, ಆರ್‌ಎಂಸಿ ಯಾರ್ಡ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಸದ್ಯ ರೌಡಿಶೀಟರ್ ಯಶಸ್ವಿನಿ ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಬಡ್ಡಿ ದಂಧೆಯ ರೌಡಿ: 2008ರಿಂದಲೇ ಗಂಭೀರ ಅಪರಾಧ ಚಟುವಟಿಕೆಗಳಲ್ಲ್ಲಿ ತೊಡಗಿದ್ದ 36 ವರ್ಷದ ಯಶಸ್ವಿನಿ ವಿರುದ್ಧ ಬಡ್ಡಿ ವ್ಯಾಪಾರ, ಹಲ್ಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ 2012ರಲ್ಲಿ ನಗರದ ಬಸವನಗುಡಿ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿತ್ತು.

ಬಳಿಕ ಆಕೆ ವಿರುದ್ದ ಶ್ರೀರಾಂಪುರ, ಹನುಮಂತನಗರ, ಪರಪ್ಪನ ಅಗ್ರಹಾರ, ತ್ಯಾಗರಾಜ ನಗರ, ಬಸವನಗುಡಿ, ಸುಬ್ರಮಣ್ಯಪುರ, ವಿಲ್ಸನ್ ಗಾರ್ಡನ್ ಸೇರಿದಂತೆ ವಿವಿಧ ಠಾಣೆಗಳಲ್ಲಿ ಸುಮಾರು 10ಕ್ಕೂ ಹೆಚ್ಚು ದೂರು ದಾಖಲಾಗಿವೆ ಎಂದು ಅಧಿಕೃತ ಮಾಹಿತಿಗಳು ತಿಳಿಸಿವೆ.

ಪಟ್ಟ ಕಟ್ಟಿದ್ದ ಮುತಾಲಿಕ್

ಜೀವ ಬೆದರಿಕೆ, ಬಡ್ಡಿ ದಂಧೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್ ಯಶಸ್ವಿನಿಗೆ 2018ರ ಸೆಪ್ಟೆಂಬರ್ 22ರಂದು ಶ್ರೀರಾಮಸೇನೆ ಬೆಂಗಳೂರು ಮಹಿಳಾ ಘಟಕ ಸ್ಥಾನಕ್ಕೆ ಆಯ್ಕೆಮಾಡಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪಟ್ಟ ಕಟ್ಟಿದ್ದರು. ಅಷ್ಟೇ ಅಲ್ಲದೆ, ರೌಡಿಶೀಟರ್ ಯಶಸ್ವಿನಿ ಕೈಗೆ ಸಂಘದ ಧ್ವಜ ನೀಡಿ, ಅಧ್ಯಕ್ಷ ಸ್ಥಾನ ಹಸ್ತಾಂತರ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ‘ರೌಡಿಗೆ ಧರ್ಮ ರಕ್ಷಕಿ ಎಂದು ಬಿಂಬಿಸಲು ಹೊರಟಿಸಿದ್ದಾರೆ ಎನ್ನುವ ಟೀಕೆಗಳು ವ್ಯಕ್ತವಾಗಿದ್ದವು.

‘ಕಾನೂನು ಉಲ್ಲಂಘಿಸಿದರೆ ಕ್ರಮ’

ಯಶಸ್ವಿನಿ ವಿರುದ್ಧ ಅಪರಾಧ ಆರೋಪಗಳು ಹೆಚ್ಚಾಗುತ್ತಿದ್ದು, ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ.

-ಅಣ್ಣಾಮಲೈ, ಡಿಸಿಪಿ, ದಕ್ಷಿಣ ವಿಭಾಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News