ನಿಧಿಯ ಆಸೆ

Update: 2019-02-10 05:55 GMT

ಒಂದು ಊರಿನಲ್ಲಿ ರಾಮಯ್ಯ ಎಂಬ ಬಡವನಿದ್ದನು. ಅವನು ರೈತ. ಅವನಿಗೆ ಇಬ್ಬರು ಮಕ್ಕಳು. ಮಕ್ಕಳಿಬ್ಬರಿಗೆ ಮದುವೆಯಾಗಿತ್ತು. ದೊಡ್ಡವನ ಕೃಷ್ಣ. ಸಣ್ಣವನ ಹೆಸರು ಶ್ಯಾಮ. ಮಳೆ ಬಂದರೆ ಬೆಳೆ. ಹಗಲಿಡಿ ಗದ್ದೆ ಉತ್ತು ಬೆಳೆ ಬಿತ್ತುವುದು ತಂದೆ ಮಕ್ಕಳ ಕೆಲಸ. ಕೃಷಿಯಿಂದ ಉಣ್ಣಲು ಉಡಲು ಸಮಸ್ಯೆ ಇರಲಿಲ್ಲ. ಒಂದು ದಿನ ರಾಮಯ್ಯ ಉಳುವಾಗ ನೇಗಿಲಿಗೆ ಅದೇನೋ ತಾಗಿದಂತಾಯಿತು. ನೇಗಿಲನ್ನು ಆಳಕ್ಕೆ ಇಳಿಸಿದ. ನೋಡಿದರೆ ಒಂದು ತಾಮ್ರದ ಕೊಡ. ಇಬ್ಬರು ಮಕ್ಕಳು ಅದನ್ನು ಅಗೆದು ಹೊರ ತೆಗೆದರು. ಕೊಡದ ಮುಚ್ಚಳ ತೆಗೆದಾಗ ಅದರಲ್ಲಿ ತುಂಬಾ ಚಿನ್ನ. ಇಬ್ಬರು ಮಕ್ಕಳ ಕಣ್ಣರಳಿತು. ಆದರೆ ರಾಮಯ್ಯ ಅದನ್ನು ಆತಂಕದಿಂದ ನೋಡಿದ. ‘‘ಮಕ್ಕಳೇ ಇದನ್ನು ಕೊಂಡು ಹೋಗಿ ದೂರ ಎಸೆಯಿರಿ’’ ಎಂದ.

ಮಕ್ಕಳಿಗೆ ಅಚ್ಚರಿ. ಕೃಷ್ಣ ಕೇಳಿದ ‘‘ಅಪ್ಪಾ ನಮ್ಮ ಗದ್ದೆಯಲ್ಲಿ ಸಿಕ್ಕಿದ ನಿಧಿ. ನಮಗೆ ಸೇರಿದ್ದು. ಯಾಕೆ ಎಸೆಯಬೇಕು?’’

‘‘ಬೇಡ ಮಕ್ಕಳೆ. ನಾವು ಬೆವರು ಸುರಿಸಿ ದುಡಿಯದ ಹಣ ನಮ್ಮ ಅಧಃಪತನಕ್ಕೆ ಕಾರಣವಾಗುತ್ತದೆ. ಈ ನಿಧಿ ನಮ್ಮ ಮನೆಯನ್ನು ಸರ್ವನಾಶ ಮಾಡುತ್ತದೆ. ಇದನ್ನು ದೂರ ಎಸೆಯಿರಿ’’ ರಾಮಯ್ಯ ಸಲಹೆ ನೀಡಿದ.

ಇಬ್ಬರು ಅದನ್ನು ದೂರ ಎಸೆದು ಬಂದರು. ಆದರೆ ಕೃಷ್ಣನಿಗೆ ಅದರ ಮೇಲಿನ ಆಸೆ ಹೋಗಲಿಲ್ಲ. ಅಂದು ಮಧ್ಯ ರಾತ್ರಿ ಎಸೆದ ಸ್ಥಳಕ್ಕೆ ಹೋದವನೇ ಅದನ್ನು ಎತ್ತಿಕೊಂಡು ಮನೆಯಲ್ಲಿ ಗುಟ್ಟಾಗಿ ಇಟ್ಟ.

ಮರುದಿನ ಬೆಳಗ್ಗೆ ಐದು ಗಂಟೆಗೆ ಎದ್ದು ಗದ್ದೆಗೆ ಹೋಗಬೇಕು. ರಾಮಯ್ಯ ಮತ್ತು ಶ್ಯಾಮ ತಯಾರಾದರು. ಆದರೆ ಕೃಷ್ಣ ಗೊರಕೆ ಹೊಡೆಯುತ್ತಿದ್ದ. ಯಾವತ್ತೂ ಬೆಳಗ್ಗೆ ಬೇಗ ಏಳುತ್ತಿದ್ದ ಮಗ ಇಂದೇಗೆ ಏಳುತ್ತಿಲ್ಲ? ಅಪ್ಪನಿಗೆ ಅಚ್ಚರಿ. ‘‘ಮಗನೇ ಏಳು’’ ಕೃಷ್ಣನನ್ನು ತಂದೆ ಕರೆದ.

‘‘ಇಲ್ಲಪ್ಪ, ನನಗೆ ಇನ್ನು ಸ್ವಲ್ಪ ನಿದ್ದೆ ಮಾಡಬೇಕು...’’

ಸ್ವಲ್ಪ ಹೊತ್ತು ಬಿಟ್ಟು ತಂದೆ ಮತ್ತೆ ಮಗನನ್ನು ಎಬ್ಬಿಸಿದ ‘‘ಇಲ್ಲಪ್ಪ ನಾನಿವತ್ತು ಗದ್ದೆಗೆ ಬರುವುದಿಲ್ಲ. ಮೈಯೆಲ್ಲ ಆಲಸ್ಯ’’

ತಕ್ಷಣ ರಾಮಯ್ಯ ಕೇಳಿದ ‘‘ಮಗನೇ ಆ ನಿಧಿಯನ್ನು ನೀನು ಮನೆಗೆ ತಂದೆಯ?’’

ಕೃಷ್ಣನಿಗೆ ಅಚ್ಚರಿ. ಅಪ್ಪನಿಗೆ ಹೇಗೆ ಗೊತ್ತಾಯಿತು? ಕೃಷ್ಣ ಹೇಳಿದ ‘‘ಇಲ್ಲ....’’

ರಾಮಯ್ಯ ಮರು ಮಾತಿಲ್ಲದೆ ಗದ್ದೆಗೆ ನಡೆದ. ಶ್ಯಾಮ ತಂದೆಯನ್ನು ಹಿಂಬಾಲಿಸಿದ.

ಅಂದು ರಾತ್ರಿ ಮಗ ಕೃಷ್ಣ ಎಂದಿಗಿಂದ ಎರಡು ಬಟ್ಟಲು ಜಾಸ್ತಿ ಉಂಡ. ದುಡಿದು ಬಂದ ರಾಮಯ್ಯ ಅದನ್ನು ಗಮನಿಸಿದ. ಮತ್ತೆ ಕೇಳಿದ ‘‘ಮಗನೇ ಆ ನಿಧಿಯನ್ನು ನೀನು ಮನೆಗೆ ತಂದೆಯ?’’

‘‘ಇಲ್ಲ ಅಪ್ಪ’’

ರಾಮಯ್ಯ ಸುಮ್ಮಗಾದ. ಕೃಷ್ಣನ ಆಲಸ್ಯ ಹೆಚ್ಚಿತು. ಹಗಲು ಹೊತ್ತು ಅವನನ್ನು ನಿದ್ದೆ ಕಾಡ ತೊಡಗಿತು. ಹೆಚ್ಚು ಹೆಚ್ಚು ಹಸಿವು. ಹಾಗೆಯೇ ಒಂದು ದಿನ ಇದ್ದಕ್ಕಿದ್ದಂತೆಯೇ ಕಾಯಿಲೆ ಬಂತು. ಮಗನಿಗೆ ಯಾವತ್ತೂ ಕಾಯಿಲೆ ಬಂದದ್ದೇ ಇಲ್ಲ. ದೂರದ ವೈದ್ಯರು ಬಂದರು. ಬಗೆ ಬಗೆಯ ಚಿಕಿತ್ಸೆ ನೀಡಿದರು. ಕಾಯಿಲೆ ವಾಸಿಯಾಗಲೇ ಇಲ್ಲ.

ಒಂದು ದಿನ ರಾಮಯ್ಯ ಹೇಳಿದ ‘‘ಮಗನೇ ನೀನು ಆ ಬಚ್ಚಿಟ್ಟ ನಿಧಿಯನ್ನು ಅಲ್ಲೇ ಎಸೆದು ಬಾ. ನಿನಗೆ ಒಳ್ಳೆಯದಾಗುತ್ತದೆ’’

ಕೃಷ್ಣ ತಲೆತಗ್ಗಿಸಿದ. ಮನೆಯೊಳಗೆ ಬಚ್ಚಿಟ್ಟ ಆ ನಿಧಿಯನ್ನು ದೂರ ಎಸೆದು ಬಂದ. ಈಗ ಅವನು ಹಗುರವಾದ. ಮರುದಿನ ಬೇಗ ಎದ್ದ. ಎಂದಿನಂತೆಯೇ ಗದ್ದೆಗೂ ಹೋಗಲು ಶುರು ಮಾಡಿದ. ಅವನ ರೋಗ ಗುಣವಾಯಿತು. ಹೆಚ್ಚಿದ್ದ ಹಸಿವು ತಣ್ಣಗಾಯಿತು.

ರಾಮಯ್ಯ ಮಗನಿಗೆ ಹೀಗೆ ಬುದ್ದಿ ಹೇಳಿದ ‘‘ಮಗನೇ....ಬೆವರು ಸುರಿಸದೇ ಸಿಕ್ಕಿದ ಹಣ ಅತಿ ನಿದ್ದೆಯನ್ನು, ಅತಿ ಹಸಿವನ್ನು, ಸೋಮಾರಿತನವನ್ನು ಮತ್ತು ಕಾಯಿಲೆಯನ್ನು ತರುತ್ತದೆ. ಈಗ ನಿನಗೆ ಆ ಕಾಯಿಲೆ ಗುಣವಾಗಿದೆ’’

Writer - ಚಂದ್ರಪ್ಪ ಸುವರ್ಣ, ವಿಟ್ಲ

contributor

Editor - ಚಂದ್ರಪ್ಪ ಸುವರ್ಣ, ವಿಟ್ಲ

contributor

Similar News