ಬಿಎಸ್‌ವೈ ತಪ್ಪೊಪ್ಪಿಗೆಗೆ ಮಂಜುನಾಥ ಸ್ವಾಮಿ ಬುದ್ದಿ ಕೊಟ್ಟಿರಬಹುದು: ಕುಮಾರಸ್ವಾಮಿ ಲೇವಡಿ

Update: 2019-02-10 13:11 GMT

ಬೆಂಗಳೂರು, ಫೆ. 10: ‘ಆಪರೇಷನ್ ಕಮಲ’ ಆಡಿಯೋ ಬಿಡುಗಡೆ ಬಗ್ಗೆ ಯಡಿಯೂರಪ್ಪ ಇದೊಂದು ಮಿಮಿಕ್ರಿ ಎಂದು ಹೇಳಿಕೆ ನೀಡಿದ್ದರು. ಆದರೆ, ಇಂದು ತಪ್ಪೊಪ್ಪಿಕೊಂಡಿದ್ದಾರೆ. ಬಹುಶಃ ಮಂಜುನಾಥಸ್ವಾಮಿ ಅವರಿಗೆ ಬುದ್ಧಿ ಕೊಟ್ಟಿರಬಹುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನನ್ನ ವಿರುದ್ಧ ಹಳೆಯ ವಿಡಿಯೋವನ್ನಿಟ್ಟುಕೊಂಡು ಆರೋಪ ಮಾಡಿದ್ದಾರೆ. ಆದರೆ, ನಮ್ಮದು ಪ್ರಾದೇಶಿಕ ಪಕ್ಷ. ಶಾಸಕರನ್ನು ಖರೀದಿಸುವಷ್ಟು ಹಣ ನಮ್ಮ ಬಳಿ ಇಲ್ಲ. ಭಿಕ್ಷೆ ಬೇಡಿ ಪಕ್ಷವನ್ನು ಕಟ್ಟುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ನಮ್ಮ ಪಕ್ಷಕ್ಕೆ ಬಂದು ನನ್ನನ್ನು ಉಳಿಸಿ ಎಂದು ನಾನು ಯಾವುದೇ ಬಿಜೆಪಿ ಶಾಸಕರನ್ನು ಕೇಳಲಿಲ್ಲ. ಯಾರಿಗೂ ಆಮಿಷವೊಡ್ಡಲಿಲ್ಲ ಎಂದು ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, ಯಡಿಯೂರಪ್ಪನವರ ಬಳಿ ಲೂಟಿ ಹೊಡೆದಿರುವ ಸಾಕಷ್ಟು ಹಣ ಇರಬಹುದು. ಅವರು ಖರೀದಿ ಪ್ರಯತ್ನ ಮಾಡುತ್ತಿದ್ದಾರೆಂದು ಟೀಕಿಸಿದರು.

ಮನಸೋ ಇಚ್ಛೆ 10 ಕೋಟಿ ರೂ., 20 ಕೋಟಿ ರೂ.ಎಂದು ನಾನು ಎಲ್ಲೂ ಹೇಳಿಕೊಂಡಿಲ್ಲ. ಗುತ್ತೇದಾರ್ ಅವರಿಗೆ ಹಣ ನೀಡುತ್ತೇನೆ, ಬನ್ನಿ ಎಂದು ಆಹ್ವಾನ ನೀಡಿಲ್ಲ. ‘ಒಮ್ಮೆ ಅವರು ತಮ್ಮ ಬಳಿ ಬಂದಿದ್ದಾಗ ನೀವು ನಮ್ಮ ಪಕ್ಷದಲ್ಲೇ ಇದ್ದವರು. ಯಾರೋ ಕರೆದರು ಎಂದು ಹೋಗಿದ್ದೀರಿ. ನಮ್ಮ ಪಕ್ಷದಲ್ಲೇ ಇದ್ದಿದ್ದರೆ ಮಂತ್ರಿ ಆಗಬಹುದಿತ್ತು’ ಎಂದು ಹೇಳಿದ್ದೆ. ಆದರೆ, ಯಾರೊಬ್ಬರ ರಾಜಕೀಯ ಭವಿಷ್ಯ ಹಾಳು ಮಾಡುವ ವ್ಯಕ್ತಿ ನಾನಲ್ಲ ಎಂದು ಸ್ಪಷ್ಟನೆ ನೀಡಿದರು.

ನನ್ನ ವಿರುದ್ಧದ ವಿಡಿಯೋ ಬಗ್ಗೆ ಈ ಹಿಂದೆಯೇ ಸದನದಲ್ಲಿ ಚರ್ಚೆ ಆಗಬೇಕೆಂದು ನಾನೇ ಆಗ್ರಹಿಸಿದ್ದೆ. ನಾಳೆ ಸದನದಲ್ಲಿ ಬಿಜೆಪಿಯವರು ಚರ್ಚಿಸಲಿ. ಈ ಕುರಿತು ವಿಧಾನಸಭಾ ಸ್ಪೀಕರ್ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

‘ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರ ತಮಗೆ ಆಹ್ವಾನ ನೀಡಿಲ್ಲ. ಕೇಂದ್ರದ ಯೋಜನೆಗೆ ರಾಜ್ಯ ಸರಕಾರವೂ ಹಣ ನೀಡಿದೆ. ಆದರೆ, ರಾಜ್ಯದ ಮುಖ್ಯಮಂತ್ರಿಯನ್ನು ಆಹ್ವಾನಿಸದೆ ಕಾರ್ಯಕ್ರಮ ಮಾಡುವ ಮೂಲಕ ಕೀಳುಮಟ್ಟದ ರಾಜಕಾರಣವನ್ನು ಕೇಂದ್ರ ಸರಕಾರ ಮಾಡುತ್ತಿದೆ’

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News