×
Ad

ಮಾತೃಭಾಷೆ, ಮಾತೃಭೂಮಿಯನ್ನು ಕಡೆಗಣಿಸದಿರಿ: ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು

Update: 2019-02-10 20:05 IST

ಬೆಂಗಳೂರು, ಫೆ.10: ಜಗತ್ತಿನ ಯಾವುದೇ ಭಾಗದಲ್ಲಿಯಾದರೂ ಜೀವಿಸಿ. ಆದರೆ, ಮಾತೃ ಭಾಷೆ ಹಾಗೂ ಮಾತೃಭೂಮಿಯನ್ನು ಮರೆಯಬೇಡಿ. ಪಾಶ್ಚಿಮಾತ್ಯ ಸಂಸ್ಕೃತಿ, ಆಹಾರ ಪದ್ಧತಿ ಹಾಗೂ ಪರಭಾಷೆಗಳ ಮೋಹಕ್ಕೆ ಒಳಗಾಗಬೇಡಿ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ.

ನಗರದ ಸಿಎಂಆರ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ನೆಲದ ಸಂಸ್ಕೃತಿ ಹಾಗೂ ಪರಂಪರೆ ಶ್ರೀಮಂತಿಕೆಯನ್ನು ಹೊಂದಿದೆ. ಇಲ್ಲಿನ ಆಹಾರ ಪದ್ಧತಿ ಆರೋಗ್ಯಕ್ಕೆ ಯೋಗ್ಯವಾಗಿದೆ. ಈ ಹಿಂದೆ ಬೆಂಗಳೂರಿಗೆ ಬಂದಾಗ ಜನಾರ್ಧನ ಹೋಟೆಲ್‌ನಲ್ಲಿನ ಇಡ್ಲಿ ಮತ್ತು ಸಾಂಬಾರ್ ಸೇವನೆಯನ್ನು ನೆನೆಸಿಕೊಂಡು, ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾ ವಲಯ ಹಾಗೂ ತಂತ್ರಜ್ಞಾನ ಕಲಿಕೆಯಲ್ಲಿ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳಬೇಕು. ಹೊಸ ಹೊಸ ಆವಿಷ್ಕಾರಗಳನ್ನು ಕಂಡು ಹಿಡಿಯುವ ಮೂಲಕ ವಿಶ್ವ ಪ್ರಜೆಗಳಾಗಿ ಬಾಳಬೇಕು. ಪ್ರಾಚೀನ ಭಾರತವು ವೈದ್ಯಕೀಯ ಪದ್ಧತಿ, ಐತಿಹಾಸಿಕ ಪರಂಪರೆ ಹಾಗೂ ಶಿಕ್ಷಣ ಪದ್ಧತಿ ಮೂಲಕ ‘ವಿಶ್ವಗುರು’ವಾಗಿದೆ. ಅದೇ ರೀತಿ ಯುವ ಸಮುದಾಯದ ವಿಶ್ವಪ್ರಜೆಗಳಾಗಬೇಕು ಎಂದು ತಿಳಿಸಿದರು.

ದೇಶವು ಮೊದಲಿನಿಂದಲೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ಒದಗಿಸಿದೆ. ಇದಕ್ಕೆ ನಳಂದ, ತಕ್ಷಶಿಲ ವಿಶ್ವವಿದ್ಯಾಲಯಗಳಲ್ಲಿನ ಶಿಕ್ಷಣ ಪದ್ಧತಿ ಸಾಕ್ಷಿ. ಪ್ರಸ್ತುತ ಕೇಂದ್ರ ಸರಕಾರ ಸೇರಿದಂತೆ ಸ್ಥಳೀಯ ಸರಕಾರಗಳು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯನಿರ್ವಸುತ್ತಿವೆ’ ಎಂದು ಹೇಳಿದರು.

ಭಾರತವು ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ರಕ್ಷಣಾ ವಲಯದಲ್ಲಿ ಸದೃಢವಾಗಿದೆ. ವಿಶ್ವದಲ್ಲಿಯೇ ಅತ್ಯಧಿಕ ವಿಶ್ವವಿದ್ಯಾಲಯಗಳನ್ನು ಹೊಂದಿದ್ದೇವೆ. ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ. ಆದರೆ, ದೇಶದ ಶಿಕ್ಷಣ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮಟ್ಟಕ್ಕೆ ಅಭಿವೃದ್ಧಿ ಸಾಧಿಸಿಲ್ಲ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ ಡಾ. ಕೆ.ಪಿ.ಗೋಪಾಲಕೃಷ್ಣ, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಸಿಎಂಆರ್ ವಿವಿ ಕುಲಪತಿ ಡಾ. ಸಬಿತಾ ರಾಮಮೂರ್ತಿ, ಸಂಸದ ಪಿ.ಸಿಮೋಹನ್ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News