ಕೆ.ಆರ್.ಪುರಂ: ಹಳ್ಳಿಯ ವಾತಾವರಣ ಸೃಷ್ಟಿಸಿದ 'ಹಳ್ಳಿ ಸಂಭ್ರಮ'

Update: 2019-02-10 16:30 GMT

ಬೆಂಗಳೂರು, ಫೆ.10: ಕಾಂಕ್ರೀಟ್ ನಗರದಲ್ಲಿ ಮರೆಯಾಗಿರುವ ಹಳ್ಳಿಯ ವಾತಾವರಣವನ್ನು ಮೂಡಿಸಿ, ಹಳ್ಳಿ ಆಟಗಳನ್ನು ಆಡಿಸುವ ಮೂಲಕ ಇಲ್ಲಿನ ಕೆ.ಆರ್.ಪುರಂ ಐಟಿಐ ಕ್ರೀಡಾಂಗಣದಲ್ಲಿ ಪುಟ್ಟ ಹಳ್ಳಿಯೊಂದನ್ನು ನಿರ್ಮಾಣ ಮಾಡಲಾಗಿತ್ತು.

ಚಿಕ್ಕಣ್ಣ ಹಾಗೂ ರಾಮಕ್ಕ ಸೇವಾ ಸಂಸ್ಥೆಯ 16 ನೆ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಹಳ್ಳಿ ಸಂಭ್ರಮ’ವು ಕ್ರೀಡಾಂಗಣ ತುಂಬವೂ ಪುಟ್ಟ ಹಳ್ಳಿಯನ್ನೇ ನಿರ್ಮಾಣ ಮಾಡಿತ್ತು. ಕೆ.ಆರ್.ಪುರಂನ ಸುತ್ತಲಿನ ನೂರಾರು ಜನರು ಪಾಲ್ಗೊಂಡು ಹಳ್ಳಿಯ ಸಂಸ್ಕೃತಿ, ಆಟಪಾಟಗಳನ್ನು ಅನುಭವಿಸಿ, ಸಂಭ್ರಮಿಸಿದರು.

ಹಳ್ಳಿ ಸೊಗಡಿನ ಗರಿ ಮನೆ, ಹಳ್ಳಿ ಜನರು ಉಪಯೋಗಿಸುತ್ತಿದ್ದ ಸಲಕರಣೆಗಳು, ಹಸು, ಎತ್ತುಗಳ ಪ್ರದರ್ಶನ, ಹೂ, ಕಬ್ಬಿನ ಜಲ್ಲೆ ನಡುವೆ ಕಣ್ಮನ ಸೆಳೆಯುತ್ತಿರುವ ರಂಗೋಲಿ ಸೇರಿದಂತೆ ಅಪ್ಪಟ ಹಳ್ಳಿ ಸೊಗಡಿನ ವಾತಾವರಣದಲ್ಲಿ ಎಲ್ಲರೂ ಪಾಲ್ಗೊಂಡು ರವಿವಾರದ ರಜೆಯನ್ನು ಕಳೆದರು. ಇನ್ನು ಚಿಕ್ಕ ವರು-ದೊಡ್ಡವರು ಎಂಬ ಬೇದಭಾವವಿಲ್ಲದೆ ಲಗೋರಿ, ಚಿನ್ನಿ ದಾಂಡು ನಂತಹ ಆಟಗಳನ್ನು ಆಡಿ ಸಂಭ್ರಮಿಸಿದರು.

ಪ್ರತಿವರ್ಷ ಕೆರೆ ಹಬ್ಬ, ಸೇರಿದಂತೆ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಈ ಸಂಸ್ಥೆ ಈ ಭಾರಿ ಕೊಂಚ ವಿಭಿನ್ನವಾಗಿ ಹಳ್ಳಿ ಹಬ್ಬವನ್ನು ಆಯೋಜಿಸಿತ್ತು. ಈ ಹಬ್ಬದಲ್ಲಿ ರೈತರ ಉಡುಗೆ ತೊಡುಗೆಗಳ ಜೊತೆ, ಭತ್ತ, ರಾಗಿ, ನವಣೆ ಸೇರಿದಂತೆ ರೈತರು ಬೆಳೆಯುತ್ತಿದ್ದ ತರಕಾರಿ ಬೆಳೆಗಳನ್ನು ಸಸಿ ಸಮೇತ ಪ್ರದರ್ಶನದಲ್ಲಿರಿಸಲಾಗಿತ್ತು. ಇದನ್ನು ಕಂಡ ಸಿಲಿಕಾನ್ ಸಿಟಿ ಮಕ್ಕಳು ತಾವು ತಿನ್ನುವ ಆಹಾರ ನಮಗೆ ಹೇಗೆ ದೊರೆಯುತ್ತದೆ ಎಂಬ ಮಾಹಿತಿ ಪಡೆದು, ಸಂತಸಗೊಂಡರು.

ಪ್ರತಿನಿತ್ಯ ಟಿವಿಯ ಸೀರಿಯಲ್‌ಗಳಲ್ಲಿ ಮುಳುಗುತ್ತಿದ್ದವರು, ಕೆಲಸದ ಒತ್ತಡದಲ್ಲಿದ್ದವರಿಗೆ ರವಿವಾರದ ರಜೆ ಒಂದಷ್ಟು ಮನಸ್ಸಿಗೆ ಉಲ್ಲಾಸ ನೀಡಿತು. ಪ್ರತಿದಿನವೂ ಶಾಲೆ-ಕಾಲೇಜು, ಪಠ್ಯ, ಮನೆಕೆಲಸ ಎಂದು ಗೋಳಾಡುವ ವಿದ್ಯಾರ್ಥಿಗಳು ಒಂದಷ್ಟು ಸಮಯ ಇಲ್ಲಿ ಕಳೆಯುವ ಮೂಲಕ ಸಂತಸಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News