ಯುನಾನಿ ಪದ್ಧತಿ ಬಗ್ಗೆ ಜನತೆಯಲ್ಲಿ ವಿಶ್ವಾಸ ಮೂಡಿಸಬೇಕಿದೆ: ಆಯುಷ್ ಇಲಾಖೆ ಆಯುಕ್ತೆ ಮೀನಾಕ್ಷಿ ನೇಗಿ

Update: 2019-02-10 16:32 GMT

ಬೆಂಗಳೂರು, ಫೆ.10: ಯುನಾನಿ ಪುರಾತನವಾದರೂ ಸಂಶೋಧನೆಯ ಅಗತ್ಯವಿದೆ. ಯುನಾನಿ ಸಮಾಜ ಒಪ್ಪುವ ರೀತಿ ವೈಜ್ಞಾನಿಕ ಸಂಶೋಧನೆ ನಡೆಸಿ ಜನತೆಯಲ್ಲಿ ವಿಶ್ವಾಸ ಮೂಡಿಸಬೇಕಿದೆ ಎಂದು ಆಯುಷ್ ಇಲಾಖೆ ಆಯುಕ್ತೆ ಮೀನಾಕ್ಷಿ ನೇಗಿ ತಿಳಿಸಿದರು.

ರವಿವಾರ ಆಯುಷ್ ಇಲಾಖೆ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಕೀಂ ಅಜ್ಮಲ್ ಖಾನ್‌ರವರ 151ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಯುನಾನಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುನಾನಿ ಪದ್ದತಿಯನ್ನು ವೈಜ್ಞಾನಿಕ ಸಂಶೋಧನೆ ನಡೆಸಿ ಪುರಾವೆ ಆಧಾರಿತ ಔಷಧಿಗಳನ್ನು ನೀಡಿದರೆ ಜನರು ಸುಲಭವಾಗಿ ಸ್ವಿಕರಿಸುತ್ತಾರೆ ಎಂದ ಅವರು, ಇಂಟಿಗ್ರೇಟೆಡ್ ಔಷಧಿಗಳ ಬಗ್ಗೆಯು ಸಂಶೋಧನೆ ಅಗತ್ಯವಿದೆ. ಅಲ್ಲದೆ, ಯುನಾನಿ ರಾಜ್ಯ ಮತ್ತು ಕೇಂದ್ರದ ಸಂಪೂರ್ಣ ಸಹಕಾರದಿಂದ ಇಡೀ ವಿಶ್ವದಲ್ಲಿ ಇಂದು ಮಾನ್ಯತೆ ಪಡೆಯುತ್ತಿದೆ ಎಂದು ಅವರು ಹೇಳಿದರು.

ಯುನಾನಿ ಕಾಲೇಜುಗಳಲ್ಲಿ ವೈದ್ಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಿರಂತರವಾಗಿ ಸಂಶೋಧನೆಯಲ್ಲಿ ತೊಡಗಬೇಕು. ತಮ್ಮ ವೃತ್ತಿ ಜೀವನದಲ್ಲಿ ಯುನಾನಿ ಅಳವಡಿಕೊಂಡು ವೈಜ್ಞಾನಿಕ ರೂಪದಲ್ಲಿ ತೋರಿದಾಗ ಮಾತ್ರ ಜಗತ್ತು ಒಪ್ಪುತ್ತದೆ ಜತೆಗೆ ಯುನಾನಿ ಕ್ಷೇತ್ರ ಅಭಿವೃದ್ದಿಯಾಗುತ್ತದೆ ಎಂದು ಅವರು ನಡಿದರು.

ಯುನಾನಿ ಪದ್ದತಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಹಿಂದಿನವರು ನೂರಾರು ವರ್ಷ ಬದುಕಿರುವ ನಿದರ್ಶನಗಳಿವೆ. ಅಲ್ಲದೆ, ಜೀವನದಲ್ಲಿ ಪ್ರತಿಯೊಬ್ಬರೂ ಯುನಾನಿಯತ್ತ ಮುಖ ಮಾಡಬೇಕು. ಜನರಿಗೆ ಯುನಾನಿ ಮಹತ್ವ ಸರಿಯಾದ ರೀತಿಯಲ್ಲಿ ತಿಳಿಸುವ ಕೆಲಸ ವಿದ್ಯಾರ್ಥಿಗಳ ಕೈಯಲ್ಲಿದೆ. ಹಾಗಾಗಿ ಹೆಚ್ಚು ಸಂಶೋಧನೆಗಳನ್ನು ನಡೆಸಲು ಮುಂದಾಗಬೇಕಿದೆ ಎಂದು ಅವರು ತಿಳಿಸಿದರು.

ಆಯುಷ್ ಅಧಿಕಾರಿ ಹರೀಶ್ ಬಾಬು ಮಾತನಾಡಿ, ಯುನಾನಿ ಪದ್ಧತಿಯ ಕುರಿತು ಜನತೆಯಲ್ಲಿ ನಂಬಿಕೆ ಬರಬೇಕಾದರೆ, ಈ ಪದ್ಧತಿಯಲ್ಲಿ ಅಭ್ಯಾಸ ಮಾಡುತ್ತಿರುವ ವೈದ್ಯರಿಗೆ ಯುನಾನಿ ಕುರಿತು ಮತ್ತಷ್ಟು ವಿಶ್ವಾಸ ಮೂಡುವಂತಾಗಬೇಕು. ಈ ನಿಟ್ಟಿನಲ್ಲಿ ಆಯುಷ್ ಇಲಾಖೆ ವತಿಯಿಂದ ಯುನಾನಿ ಪದ್ಧತಿಯ ಕುರಿತು ಹೆಚ್ಚಿನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಆಯುಷ್ ಇಲಾಖೆ ವತಿಯಿಂದ ಫೆ.10,11ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ಯುನಾನಿ ಉತ್ಸವವನ್ನು ಆಯೋಜಿಸಲಾಗಿದ್ದು, ಯುನಾನಿ ಪದ್ಧತಿಯಲ್ಲಿ ಹಲವಾರು ವರ್ಷ ಅಭ್ಯಾಸ ಮಾಡಿರುವ ವೈದರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಇದೇ ವೇಳೆ ಎರಡು ದಿನಗಳವರೆಗೆ ಉಚಿತ ಚಿಕಿತ್ಸೆ ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.

ಆಯುಷ್ ಅಧಿಕಾರಿ ನಂಜರಾಜು, ಯುನಾನಿ ಕಾಲೇಜಿನ ಪ್ರಾಂಶುಪಾಲೆ ಶಕೀಲಾ ಬಾನು, ಡಾ.ಸತೀಶ್, ಡಾ.ಮಲ್ಲೇಶ್ ಗೌಡ ಸೇರಿ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News