ಮೆಟ್ರೋ ನಿಲ್ದಾಣ ಬಳಿ ‘ನೋ ಹಾರ್ನ್ ಪ್ರದೇಶ’ ಘೋಷಣೆಗೆ ಸಿದ್ಧತೆ

Update: 2019-02-10 16:38 GMT

ಬೆಂಗಳೂರು, ಫೆ.10: ಮೆಟ್ರೋ ನಿಲ್ದಾಣಗಳ ಬಳಿ ವಾಹನಗಳ ಹಾರ್ನ್‌ನಿಂದಾಗಿ ಶಬ್ದಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ದೂರು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಎಲ್ಲ ಮೆಟ್ರೋ ನಿಲ್ದಾಣಗಳ ಮುಂಭಾಗದ ರಸ್ತೆಯನ್ನು ‘ನೋ ಹಾರ್ನ್ ಪ್ರದೇಶ’ ಎಂದು ಘೋಷಿಸಲು ಮುಂದಾಗಿದೆ.

ಮೆಟ್ರೊ ನಿಲ್ದಾಣಗಳ ಮುಂಭಾಗ ಹಾರ್ನ್ ಮಾಡಿದರೆ ಪ್ರತಿಧ್ವನಿ ಉಂಟಾಗುತ್ತದೆ. ಇದರಿಂದಾಗಿ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಮಂಡಳಿಗೆ ದೂರು ನೀಡಿದ್ದಾರೆ. ಹೀಗಾಗಿ ಶಬ್ದಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಸಂಚಾರ ಪೊಲೀಸರು ಹಾಗೂ ಬಿಎಂಆರ್‌ಸಿಎಲ್ ಸಹಯೋಗದಲ್ಲಿ ನಿಲ್ದಾಣದ ಮುಂಭಾಗ ಹಾರ್ನ್ ಬಳಕೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ತಿಳಿಸಿದೆ. ಕೆಲ ಸಾರ್ವಜನಿಕ ಸಭೆಗಳಲ್ಲಿ, ಪರಿಶೀಲನೆ ಸಂದರ್ಭದಲ್ಲಿ ಜನರು ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಹೀಗಾಗಿ, ಬಿಬಿಎಂಪಿ, ಬಿಎಂಆರ್‌ಸಿಎಲ್, ಸಂಚಾರ ಪೊಲೀಸರು ಸೇರಿದಂತೆ ವಿವಿಧ ಸಂಸ್ಥೆಗಳೊಂದಿಗೆ ನಡೆಯುವ ಸಮನ್ವಯ ಸಮಿತಿ ಸಭೆಯಲ್ಲಿ ಅನುಷ್ಠಾನ ಸಂಬಂಧ ಚರ್ಚಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ನೋ ಹಾರ್ನ್ ಫಲಕ ಅಳವಡಿಸಬೇಕಿದೆ. ಹೀಗೆ ಫಲಕ ಹಾಕಿದಾಕ್ಷಣ ಹಾರ್ನ್ ಮಾಡುವುದು ಕಡಿಮೆಯಾಗುತ್ತದೆ ಎಂಬ ವಿಶ್ವಾಸವಿಲ್ಲ. ಸಂಚಾರ ಪೊಲೀಸರು ಹಾಗೂ ಮೆಟ್ರೊ ಸಿಬ್ಬಂದಿ ಸಹಕಾರದಲ್ಲಿ ಹಾರ್ನ್ ಮಾಡುವುದನ್ನು ತಡೆಯುವ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಮುಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿ ಪ್ರತಿಧ್ವನಿ: ಎಂ.ಜಿ.ರಸ್ತೆ, ಟ್ರಿನಿಟಿ, ಇಂದಿರಾನಗರ, ನ್ಯಾಷನಲ್ ಕಾಲೇಜು, ಸ್ವಾಮಿ ವಿವೇಕಾನಂದ, ವಿಜಯನಗರ, ಲಾಲ್‌ಬಾಗ್ ಸೇರಿದಂತೆ ಮತ್ತಿತರೆ ಮೆಟ್ರೋ ನಿಲ್ದಾಣಗಳ ಬಳಿ ಪ್ರತಿಧ್ವನಿಯಿಂದಾಗಿ ಮಿತಿಮೀರಿದ ಶಬ್ದ ಮಾಲಿನ್ಯವಾಗುತ್ತದೆ. ಇನ್ನು ರಾಜಾಜಿನಗರ ಮೆಟ್ರೊ ನಿಲ್ದಾಣದ ಕೆಳಗಿನ ರಸ್ತೆಯು ಸಂಜೆ 8 ರಿಂದ ರಾತ್ರಿ 12 ಗಂಟೆವರೆಗೆ ಖಾಸಗಿ ಬಸ್‌ಗಳ ನಿಲುಗಡೆಗೆ ಬಳಕೆಯಾಗುತ್ತಿದೆ. ಇದು ಕೂಡ ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ದೂರುಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದು, ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News