'ರಫೇಲ್' ಪುಕಾರು ಹಬ್ಬಿಸಿ ಸೇನಾ ಆಧುನೀಕರಣ ತಡೆಯುತ್ತಿರುವುದು ದೇಶದ್ರೋಹ: ಲೆ.ಜನರಲ್ ಪಿ.ಜಿ. ಕಾಮತ್

Update: 2019-02-10 17:04 GMT

ಬೆಂಗಳೂರು, ಫೆ.10: ‘ಆಧಾರ ರಹಿತ ಆರೋಪಗಳನ್ನು ಮಾಡುತ್ತಾ ದೇಶದ ರಕ್ಷಣಾ ವ್ಯವಸ್ಥೆ, ಶಸ್ತ್ರಾಸ್ತ್ರ ಆಧುನೀಕರಣಕ್ಕೆ ಅಡ್ಡಿಪಡಿಸುವುದು ದೇಶದ್ರೋಹದ ಕೆಲಸ. ಮಧ್ಯವರ್ತಿಗಳಿಲ್ಲದೆ ನಡೆದ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಪುಕಾರು ಹಬ್ಬಿಸಿ ಅತ್ಯಾಧುನಿಕ ರಫೇಲ್ ಒಪ್ಪಂದ ಮುರಿಯಲು ಯತ್ನಿಸುತ್ತಿರುವುದು ವಾಯುಪಡೆ ಶಕ್ತಿ ಕುಂದಿಸುವ ಸಂಚು’ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಪಿ.ಜಿ. ಕಾಮತ್ ಕಿಡಿಕಾರಿದರು.

ನಗರದ ಅರಮನೆ ಮೈದಾನದ ಕಂಟ್ರಾಕ್ಟರ್ಸ್ ಕ್ಲಬ್‌ನಲ್ಲಿ ಭಾನುವಾರ ಸಿಲಿಕಾನ್ ಸಿಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಭವಿಷ್ಯದ ಭಾರತ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮಲ್ಲಿ ರಾಜಕೀಯಕ್ಕಾಗಿ ಪ್ರತಿಯೊಂದರಲ್ಲೂ ಹುಳುಕು ಹುಡುಕುವ ಪ್ರವೃತ್ತಿ ಇರುವುದರಿಂದಲೇ ಭಾರತೀಯ ಸೇನೆ ಬಲಹೀನಗೊಂಡಿದೆ. ದೇಶದ ನೆಲ ನೆರೆಹೊರೆಯ ರಾಷ್ಟ್ರಗಳ ಪಾಲಾಗಿದೆ. 12ನೇ ಶತಮಾನದಲ್ಲಿ ಭಾರತ 5 ಮಿಲಿಯನ್ ಚದರ ಕಿ.ಮೀ. ಗೆ ವ್ಯಾಪಿಸಿತ್ತು. ಮೌರ್ಯರು, ಚೋಳರು, ಗುಪ್ತರ ಆಳ್ವಿಕೆಯಲ್ಲಿ ಭಾರತ ಬಲಾಢ್ಯವಾಗಿ ಬೆಳೆದಿತ್ತು. ನಂತರದ ಶತಮಾನಗಳಲ್ಲಿ ದೇಶದ ವಿಸ್ತೀರ್ಣ 3.8 ಮಿಲಿಯನ್ ಚ.ಕಿ.ಮೀ.ಗೆ ಕುಸಿದಿದೆ. ಸ್ವಾತಂತ್ರ್ಯ ಭಾರತ ಆಲಿಪ್ತ ನೀತಿಯನ್ನು ಅಪ್ಪಿಕೊಂಡು ದೇಶದ ರಕ್ಷಣಾ ವ್ಯವಸ್ಥೆಯನ್ನು ನಿರ್ಲಕ್ಷ್ಯಿಸಿ ಅಹಿಂಸೆಯ ಜಪ ಮಾಡುತ್ತಾ ಕುಳಿತಿದ್ದರಿಂದ 1962ರ ರಕ್ತಪಾತ ಸಂಭವಿಸಿತು. ಹಿಂದಿ-ಚೀನಿ ಭಾಯಿ ಭಾಯಿ ಎಂಬ ಘೋಷಣೆಯಲ್ಲಿ ನಮ್ಮ ನಾಯಕರು ಮೈಮರೆತಿದ್ದರಿಂದ ಚೀನಾ ಯುದ್ಧದಲ್ಲಿ ಸೋತು ಸಾವಿರಾರು ಸೈನಿಕರ ಬಲಿದಾನವಾಯಿತು’ ಎಂದು ವಿಷಾದ ವ್ಯಕ್ತಪಡಿಸಿದರು.

‘ಇಂದಿಗೂ ಶಸ್ತ್ರಾಸ್ತ್ರ ಖರೀದಿ ಒಪ್ಪಂದಗಳು ಜಾರಿ ರೂಪಕ್ಕೆ ಬರದೆ ಸೇನೆ ಬಲಹೀನಗೊಂಡಿದೆ. ಯಾವುದೇ ಸಾಮ್ರಾಜ್ಯಕ್ಕೆ ಬಲಿಷ್ಠ ಶಸ್ತ್ರಸಜ್ಜಿತ ಸೇನಾಪಡೆ ಅಗತ್ಯ ಎಂಬ ಚಾಣಕ್ಯನ ಮಾತುಗಳು ನಮ್ಮ ನಾಯಕರಿಗೆ ಹಿಡಿಸುತ್ತಿಲ್ಲ. ಹೀಗಾಗಿ ಭಾರತೀಯ ಸೇನೆ 30 ವರ್ಷಗಳ ಹಿಂದಿನ ಶಸ್ತ್ರಾಸ್ತ್ರಗಳನ್ನು ಬಳಸುವಂತಾಗಿದೆ. ವಾಯುಪಡೆಯಲ್ಲಿ 42 ಸ್ಕ್ವಾಡ್ರನ್ ಇರಬೇಕಾದ ಜಾಗದಲ್ಲಿ 30 ಸ್ಕ್ವಾಡ್ರನ್‌ಗಳಿವೆ. ವಾಯುಪಡೆಯಲ್ಲಿ ಬಳಕೆಯಲ್ಲಿರುವ ಯುದ್ಧ ವಿಮಾನಗಳೇ ಮ್ಯೂಸಿಯಂನಲ್ಲೂ ಪ್ರದರ್ಶಿಸಲ್ಪಡುತ್ತಿರುವುದು ಈ ದೇಶದ ದುರಂತ’ ಎಂದರು.

‘ರಫೇಲ್ ಡೀಲ್‌ಗೆ ಅಡ್ಡಿಪಡಿಸುತ್ತಿರುವುದು ಸೇನೆಯ ಆಧುನೀಕರಣ ತಡೆಯುವ ದೇಶದ್ರೋಹದ ಕೆಲಸ’ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂದಿನ ರಕ್ಷಣಾ ಸಚಿವರಿಗೂ ಸೇನೆಯ ವ್ಯವಸ್ಥೆಯೇ ಅರ್ಥವಾಗಿಲ್ಲ. ಹಳೆಯ ಒಪ್ಪಂದಗಳ ಪೂರೈಸಲು ಮುತುವರ್ಜಿ ತೋರಿಸಿಲ್ಲ ಎಂದು ಆರೋಪಿಸಿದರು.

ಶಿಕ್ಷಣ ತಜ್ಞ, ಚಿಂತಕ, ಬಿಜೆಪಿ ನಾಯಕ ಡಾ. ಎಚ್.ಎಂ. ಚಂದ್ರಶೇಖರ್ ಮಾತನಾಡಿ, ಉತ್ತಮರು, ಜ್ಞಾನವಂತರು ಮೌನವಾಗಿದ್ದರೆ ದೇಶಕ್ಕೆ ದೊಡ್ಡ ಗಂಡಾಂತರ ಕಾದಿದೆ. ರಾಜಕೀಯ ವ್ಯವಸ್ಥೆಯಲ್ಲಿ ಒಳ್ಳೆಯ ಜನ ಸಕ್ರಿಯವಾಗಿ ಭಾಗಿಯಾಗದಿದ್ದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟರು. 

ಸ್ವಾತಂತ್ರ್ಯ ಭಾರತದ ಮೂರನೆಯ ತಲೆಮಾರಾದ ನಾವು ರಾಜಕೀಯ, ಸಾಮಾಜಿಕ ಪ್ರಜ್ಞೆ ತೋರದೆ ನಿಷ್ಕ್ರಿಯರಾದರೆ ದೇಶಕ್ಕೆ ಭವಿಷ್ಯವಿಲ್ಲ. ದೇಶದ ಮಹಾ ಚುನಾವಣೆ ಸಮೀಪಿಸಿದ್ದು ಇಂತಹ ಸನ್ನಿವೇಶದಲ್ಲಿ ದೇಶ ಮುನ್ನಡೆಯುವ ಮಾರ್ಗ ನಿರ್ಧರಿಸಬೇಕಾದ್ದು ನಮ್ಮ ಜವಾಬ್ದಾರಿ. ಜ್ಞಾನದ ಮೂಲಕ ದೇಶ ಎದ್ದು ನಿಲ್ಲಬೇಕು. ಯುವಕರಲ್ಲಿ ನೈತಿಕ ಪ್ರಜ್ಞೆ ಜಾಗೃತವಾಗಬೇಕು. ರಾಜಕಾರಣ ವ್ಯವಸ್ಥೆಯಲ್ಲಿ ಎಲ್ಲರೂ ಭಾಗಿಯಾದಾಗ ಜನರ ನಡುವಿನಿಂದ ನಾಯಕರು ಉದಯಿಸುತ್ತಾರೆ ಎಂದರು.

ದೇಶದ ಜಿಡಿಪಿಗೆ ಚಹಾ ಮಾರುವವರನು, ತಳ್ಳು ಗಾಡಿ ವ್ಯಾಪಾರ ಮಾಡುವವನು, ಕಟ್ಟಕಡೆಯ ಕಾರ್ಮಿಕನ ಕೊಡುಗೆಯೂ ಇದೆ. ಎಲ್ಲರ ದುಡಿಮೆ, ಶ್ರಮದ ಫಲದಿಂದ ದೇಶ ಮುನ್ನಡೆಯುತ್ತಿದೆ. ಭಾರತದ ಭವಿಷ್ಯ ಯುವಕರು, ಶ್ರಮಿಕರು, ಕಾರ್ಮಿಕರು, ಬುದ್ಧಿಜೀವಿಗಳ ಕೈಯಲ್ಲಿದೆ. ನಾವು ಮೈಮರೆತರೆ ಭಾರತ ಉಜ್ವಲವಾಗಲು ಸಾಧ್ಯವಿಲ್ಲ ಎಂದು ಎಚ್ಚರಿಕೆಯ ಮಾತು ಹೇಳಿದರು. 

ಮಾಜಿ ಪರಿಷತ್ ಸದಸ್ಯ ಅಬ್ದುಲ್ ಅಝೀಂ ಮಾತನಾಡಿ, ‘ನಮ್ಮ ದೇಶದಲ್ಲಿ ಸರ್ಕಾರಿ ಕಚೇರಿಯ ಜವಾನನ ಹುದ್ದೆಗೂ ವಿದ್ಯಾರ್ಹತೆ ಅಗತ್ಯ. ಆದರೆ ಸರ್ಕಾರ ಮುನ್ನಡೆಸುವ ರಾಜಕಾರಣಿಗಳಿಗೆ ಯಾವ ಅರ್ಹತೆಯೂ ಅಗತ್ಯವಿಲ್ಲ. ಜನರೂ ಉತ್ತಮರನ್ನು ಆಯ್ಕೆ ಮಾಡುವುದಿಲ್ಲ. ನಾನು ಮಾದರಿ ಪೊಲೀಸಿಂಗ್‌ನಡಿ ಸ್ವಯಂ ನಿವೃತ್ತಿ ಪಡೆದು ರಾಜಕಾರಣಕ್ಕೆ ಬಂದೆ. ಮಾದರಿ ಗೃಹ ಸಚಿವನಾಗಬೇಕು ಎಂಬ ಕನಸು ಇತ್ತು. ಆದರೆ ಜನ ನಿರಂತರವಾಗಿ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದರು. ರಾಜಕೀಯದಲ್ಲಿ ಸಜ್ಜನರಿಗೆ, ವಿದ್ಯಾವಂತರಿಗೆ, ಪ್ರಾಮಾಣಿಕರಿಗೆ ಬೆಲೆಯಿಲ್ಲ ಎಂಬ ಭಾವನೆ ಇದರಿಂದ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಕೆಟ್ಟ ರಾಜಕೀಯ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆಯಿಂದ ದೇಶ ಹಾಳಾಗುವುದನ್ನು ತಪ್ಪಿಸಲು ದೊಡ್ಡ ಕ್ರಾಂತಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಸಂವಾದ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ. ಸೋಮಶೇಖರ್, ವಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ನಾಗರಾಜು, ಶರತ್ ಅಶೋಕ್, ಡಾ. ಶರ್ಮ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ರಂಗಗಳ ಗಣ್ಯರು, ಚಿಂತಕರು, ಬುದ್ಧಿಜೀವಿಗಳು ಸಂವಾದದಲ್ಲಿ ವಿಚಾರ ಮಂಡಿಸಿದರು. ನೂರಾರು ಯುವಕರು ಭಾಗಿಯಾಗಿದ್ದರು.

‘ವಿಷ ಹರಿಸಿದರೂ ಪ್ರಶ್ನೆ ಮಾಡುವವರಿಲ್ಲ’
ಬೆಂಗಳೂರಿನ ವಿಷವನ್ನು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸಿ ಅಲ್ಲಿನ ಕೃಷಿ ವ್ಯವಸ್ಥೆ, ಅಂತರ್ಜಲ, ಜನ, ಜಾನುವಾರುಗಳನ್ನು ನಿಧಾನವಾಗಿ ಕೊಲ್ಲುವ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ. ಕೆ.ಸಿ. ವ್ಯಾಲಿ, ಎಚ್.ಎನ್. ವ್ಯಾಲಿ ಯೋಜನೆ ಮೂಲಕ ಬರಪೀಡಿತ ಜಿಲ್ಲೆಗಳಿಗೆ ತ್ಯಾಜ್ಯ ನೀರು ಹರಿಸಲಾಗುತ್ತಿದೆ. ಇದನ್ನು ವಿರೋಧಿಸಿ ಧ್ವನಿ ಎತ್ತುವ ಪ್ರಜ್ಞೆಯನ್ನು ನಾವು ಕಳೆದುಕೊಂಡಿದ್ದೇವೆ. ಅಕ್ಷರಶಃ ವಿಷವನ್ನೇ ಹರಿಸುತ್ತಿರುವುದು ಕಂಡಾಗ ಭವಿಷ್ಯದ ಅನಾಹುತಗಳನ್ನು ನೆನೆದು ತೀವ್ರ ಆತಂಕವಾಗುತ್ತದೆ. ಈ ಯೋಜನೆ ವಿರುದ್ಧ ಜನಜಾಗೃತಿ ನಡೆದು ದೊಡ್ಡ ಹೋರಾಟ ರೂಪುಗೊಳ್ಳಬೇಕಿದೆ ಎಂದು ಡಾ. ಎಚ್.ಎಂ. ಚಂದ್ರಶೇಖರ್ ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News