ವಿಷಯ ತಜ್ಞರನ್ನೇ ಕುಲಪತಿಯನ್ನಾಗಿ ನೇಮಿಸಿ: ರಂಗಶಿಕ್ಷಣ ಒಕ್ಕೂಟ ಆಗ್ರಹ

Update: 2019-02-11 17:18 GMT

ಬೆಂಗಳೂರು, ಫೆ.11: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಯುಜಿಸಿ ಅನ್ವಯದಂತೆ ವಿಷಯ ತಜ್ಞರನ್ನೇ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಿಸಬೇಕೆಂದು ಅಖಿಲ ಕರ್ನಾಟಕ ರಂಗಶಿಕ್ಷಣ ಪದವೀಧರರ ಒಕ್ಕೂಟ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸದಸ್ಯ ರಂಗಕರ್ಮಿ ನಾಗರಾಜಮೂರ್ತಿ, ಈಗಾಗಲೇ ಕರ್ನಾಟಕ ರಂಗಶಿಕ್ಷಣ ಪದವೀಧರರ ಒಕ್ಕೂಟವು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದು ಪ್ರದರ್ಶನ ಕಲಾ ವಿಷಯದಲ್ಲಿ ಪ್ರಾಧ್ಯಾಪಕರಾಗಿರುವವರನ್ನೇ ಕುಲಪತಿಯನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಅಗತ್ಯಗಳೇನು ಎಂಬುದು ಸಾಮಾನ್ಯವಾದುದ್ದಾದರೂ ವಿಶೇಷ ವಿಷಯಗಳ ವಿಶ್ವವಿದ್ಯಾಲಯವಾದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಅಗತ್ಯಗಳನ್ನು ಅರಿಯುವ ಸಾಮರ್ಥ್ಯವಿರುವುದು ಆ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿರುವ ವಿಷಯ ತಜ್ಞರುಗಳಿಗೆ ಮಾತ್ರ. ಈ ನಿಟ್ಟಿನಲ್ಲಿ ಯುಜಿಸಿ ಅಧಿನಿಯಮದಂತೆ ಕುಲಪತಿ ಆಯ್ಕೆಯಾಗಬೇಕೆಂದು ಮನವಿ ಮಾಡಿದರು.

ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಷಯದಲ್ಲಿ 10 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರನ್ನು ಕುಲಪತಿ ಹುದ್ದೆಗೆ ನೇಮಕ ಮಾಡಬೇಕಿದೆ. ಆದರೆ, ರಾಜ್ಯದಲ್ಲಿ ಇವರ ಕೊರತೆ ಎದುರಾಗಿದೆ. ಈ ವಿಷಯದ ಪ್ರಾಧ್ಯಾಪಕರಾಗಿರುವ ಬಿ.ಎಂ.ಜಯಶ್ರೀ, ನಾಗೇಶ್ ಬೆಟ್ಟಕೋಟೆ, ಮಲ್ಲಿಕಾರ್ಜುನ ಅಗಡಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ಕೆ.ಬಿ.ಸುನೀತಾ, ಸಂವಹನ ವಿಷಯದ ಪ್ರೊ.ಅಶೋಕ, ಪ್ರಾಂಶುಪಾಲರಾಗಿ ನಿವೃತ್ತರಾಗಿರುವ ಸೌಭಾಗ್ಯ ಹಾಗೂ ಮೈಸೂರು ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿರುವ ಚನ್ನರಾಜು ಸಹ ಅರ್ಜಿ ಸಲ್ಲಿಸಿದ್ದಾರೆ. ಇವರೆಲ್ಲ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಷಯದಲ್ಲಿ ತಜ್ಞರಲ್ಲ ಎಂದು ತಿಳಿಸಿದರು.

ಯುಜಿಸಿ ನಿಯಮಾವಳಿ ಪ್ರಕಾರ ಕುಲಪತಿಯಾಗಿ ನೇಮಕವಾಗುವವರು ವಿಷಯ ತಜ್ಞರಾಗಿದ್ದು, 10 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರಬೇಕು. ಆದರೆ, ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಷಯ ತಜ್ಞರಾಗಿರುವ ಜಯಶ್ರೀಯವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರೂ, 63 ವರ್ಷ ಪೂರ್ಣಗೊಳಿಸಿದ್ದಾರೆ ಎಂದು ಹೇಳಿದರು.

ಹೀಗಾಗಿ, ಜಯಶ್ರೀಯವರು ಕುಲಪತಿಯಾಗಿ ಸಂಪೂರ್ಣ ಸೇವಾವಧಿ ಮುಗಿಸಲು ಸಾಧ್ಯವಿಲ್ಲ. ಇನ್ನುಳಿದ ಇಬ್ಬರಲ್ಲಿ ನಾಗೇಶ್ ಬೆಟ್ಟಕೋಟೆ, ಮಲ್ಲಿಕಾರ್ಜುನ ಅಗಡಿ ಕ್ರಮವಾಗಿ 9 ಹಾಗೂ 7 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಕಾರಣವನ್ನೇ ನೆಪವಾಗಿಟ್ಟುಕೊಂಡು ಅನ್ಯವಿಷಯದ ಪ್ರಾಧ್ಯಾಪಕರನ್ನೇ ಕುಲಪತಿಯಾಗಿ ನೇಮಕ ಮಾಡಲು ಸಮಿತಿ ಸದಸ್ಯರ ಮೇಲೆ ರಾಜಕೀಯ ಒತ್ತಡವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

ಶೋಧನಾ ಸಮಿತಿಯಲ್ಲಿ ಯುಜಿಸಿಯಿಂದ ನೇಮಕವಾಗಿರುವ ಮಾಂಡವಿ ಸಿಂಗ್ ಅವರು ಕುಲಪತಿ ಹುದ್ದೆಗೆ ರಾಷ್ಟ್ರಮಟ್ಟದಲ್ಲಿ ಜಾಹೀರಾತು ನೀಡಬೇಕೆಂದು ನೀಡಿರುವ ಸಲಹೆಯನ್ನು ಸಮಿತಿ ಪರಿಗಣಿಸಬೇಕು. 

-ನಾಗರಾಜಮೂರ್ತಿ, ರಂಗಕರ್ಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News