ಎಟಿಪಿ ರ‍್ಯಾಂಕಿಂಗ್: ಅಗ್ಲ 100ರಲ್ಲಿ ಸ್ಥಾನ ಪಡೆದ ಪ್ರಜ್ಞೇಶ್

Update: 2019-02-11 18:32 GMT

ಹೊಸದಿಲ್ಲಿ, ಫೆ.11: ಟೆನಿಸ್ ಕೋರ್ಟ್‌ನಲ್ಲಿ ಸ್ಥಿರ ಪ್ರದರ್ಶನವನ್ನು ಮುಂದುವರಿಸಿರುವ ಭಾರತದ ಪ್ರಜ್ಞೇಶ್ ಗುಣೇಶ್ವರನ್ ಸೋಮವಾರ ಪ್ರಕಟವಾದ ಪುರುಷರ ಎಟಿಪಿ ರ್ಯಾಂಕಿಂಗ್ ಪಟ್ಟಿಯಲ್ಲಿ ಆರು ಸ್ಥಾನಗಳ ಭಡ್ತಿ ಪಡೆದು 97ನೇ ಸ್ಥಾನ ಪಡೆದ ಸಾಧನೆ ತೋರಿದ್ದಾರೆ.

ಇದರೊಂದಿಗೆ ಕಳೆದೊಂದು ದಶಕದಲ್ಲಿ ವಿಶ್ವದ ಅಗ್ರ 100 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೋಮದೇವ ವರ್ಮನ್ ಹಾಗೂ ಯೂಕಿ ಭಾಂಬ್ರಿ ಈ ಸಾಧನೆ ಮಾಡಿರುವ ಇತರ ಇಬ್ಬರು ಆಟಗಾರರು. ಕಳೆದ ವಾರ ನಡೆದ ಎಟಿಪಿ ಚೆನ್ನೈ ಚಾಲೆಂಜರ್‌ನಲ್ಲಿ ಸೆಮಿಫೈನಲ್ ಹಂತ ತಲುಪುವುದರೊಂದಿಗೆ ಈ ಎಡಗೈ ಆಟಗಾರ ಸಾಧನೆಯ ಹೊಸ ಶಿಖರವೇರಿದರು. ಇದೇ ಸಾಧನೆಯನ್ನು ಮುಂದುವರಿಸಿ 100ರೊಳಗಿನ ಶ್ರೇಯಾಂಕದಲ್ಲಿ ಸ್ಥಿರತೆ ಕಾಯ್ದುಕೊಂಡರೆ ಅವರು ಗ್ರಾಂಡ್‌ಸ್ಲಾಮ್ ಟೂರ್ನಿಯ ಪ್ರಧಾನ ಹಂತದಲ್ಲಿ ಆಡಲು ಅರ್ಹರಾಗುತ್ತಾರೆ. ಈ ಹಿಂದೆ 100ರ ಒಳಗಿನ ಶ್ರೇಯಾಂಕ ಪಡೆದಿದ್ದ ಯೂಕಿ ಬಳಿಕ ಸತತ ಗಾಯದ ಸಮಸ್ಯೆಯಿಂದ ಬಳಲಿದ ಕಾರಣ ಸ್ಥಿರತೆ ಕಾಯ್ದುಕೊಳ್ಳಲಾಗಲಿಲ್ಲ. ಈಗ ಯೂಕಿ 156ನೇ ಶ್ರೇಯಾಂಕಕ್ಕೆ ಕುಸಿದಿದ್ದಾರೆ. ಭಾರತದ ಇನ್ನೊಬ್ಬ ಭರವಸೆಯ ಆಟಗಾರ ರಾಮಕುಮಾರ್ ರಾಮನಾಥನ್ ಐದು ಸ್ಥಾನಗಳ ಭಡ್ತಿಯೊಂದಿಗೆ 128ನೇ ಸ್ಥಾನ, ಸಾಕೇತ್ ಮೈನೇನಿ 5 ಸ್ಥಾನಗಳ ಭಡ್ತಿಯೊಂದಿಗೆ 255ನೇ ಸ್ಥಾನ, ಶಶಿಕುಮಾರ್ ಮುಕುಂದ್ 22 ಸ್ಥಾನಗಳ ಭಡ್ತಿಯೊಂದಿಗೆ 271ನೇ ಸ್ಥಾನ ಪಡೆದಿದ್ದಾರೆ. ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ 37ನೇ ಸ್ಥಾನದಲ್ಲಿ ಉಳಿದಿದ್ದಾರೆ. ಅವರ ಜೊತೆಗಾರ ದಿವಿಜ್ ಶರಣ್ ಒಂದು ಸ್ಥಾನದ ಭಡ್ತಿಯೊಂದಿಗೆ 39ನೇ ಸ್ಥಾನ, ಲಿಯಾಂಡರ್ ಪೇಸ್ 7 ಸ್ಥಾನಗಳ ಭಡ್ತಿಯೊಂದಿಗೆ 75ನೇ ಸ್ಥಾನ, ಜೀವನ್ ನೆಡುಂಚಳಿಯನ್ 77ನೇ ಸ್ಥಾನ ಹಾಗೂ ಪೂರವ್ ರಾಜಾ 100ನೇ ಸ್ಥಾನದಲ್ಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಅಂಕಿತಾ ರೈನಾ ದೇಶದ ಅಗ್ರಗಣ್ಯ ಸಿಂಗಲ್ಸ್ ಆಟಗಾರ್ತಿ ಎಂಬ ಶ್ರೇಯವನ್ನು ಉಳಿಸಿಕೊಂಡಿದ್ದು ವಿಶ್ವಮಟ್ಟದಲ್ಲಿ 3 ಸ್ಥಾನಗಳ ಭಡ್ತಿಯೊಂದಿಗೆ 165ನೇ ಸ್ಥಾನ ಗಳಿಸಿದ್ದಾರೆ. ದೇಶದ ಮತ್ತೊಬ್ಬ ಭರವಸೆಯ ಆಟಗಾರ್ತಿ ಕರ್ಮಾನ್ ಕೌರ್ ಥಾಂಡಿ 211ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News