ಮೋದಿ-ಮಮತಾರ ಅಧಿಕಾರ ಕದನ

Update: 2019-02-11 18:37 GMT

ಅಧಿಕಾರಕ್ಕಾಗಿನ ಎರಡು ಲೂಟಿಕೋರ ಕೂಟಗಳ ಜಗಳಗಳನ್ನು ಸಂವಿಧಾನ ಪಾಲನೆ, ಒಕ್ಕೂಟ ತತ್ವ, ಪ್ರಜಾಪ್ರಭುತ್ವ ಪಾಲನೆ ಅಂತೆಲ್ಲಾ ನೋಡುವುದು ತಪ್ಪಾದ ನಡೆಗಳಾಗುತ್ತವೆ. ‘‘ಅದು ಬಿಜೆಪಿಗಿಂತ ಮಮತಾ ಪರವಾಗಿಲ್ಲ. ಫ್ಯಾಶಿಸ್ಟ್ ಮೋದಿಗಿಂತ ಮಮತಾ ಆಗಬಹುದು. ಸದ್ಯಕ್ಕೆ ಮೋದಿ ಬಹಳ ಅಪಾಯಕಾರಿ, ಬಿಜೆಪಿಗಿಂತ ಕಾಂಗ್ರೆಸ್ ಪರವಾಗಿಲ್ಲ.....’’ ಹೀಗೆಲ್ಲಾ ನಿಲುವುಗಳನ್ನು ತಾಳಲು ದಾರಿ ಮಾಡಿಕೊಡುತ್ತದೆ. ಕೊನೆಗದು ರಾಜಕೀಯ ದಿವಾಳಿತನದ ಅನುಕೂಲ ಸಿಂಧು ಹಾಗೇನೆ ಅವಕಾಶವಾದಿ ನಿಲುವುಗಳನ್ನು ತಾಳುವ, ಜನರನ್ನು ಗೊಂದಲಕ್ಕೆ ಬೀಳಿಸುವ ನಡೆಯಾಗುತ್ತವೆ.



ಕಳೆದ ವಾರ ಕೇಂದ್ರ ಸರಕಾರದ ಅಡಿಯಲ್ಲಿರುವ ಸಿಬಿಐ ಹಾಗೂ ಪಶ್ಚಿಮ ಬಂಗಾಳ ಸರಕಾರದ ಭಾಗವಾಗಿರುವ ಕೋಲ್ಕತಾ ಪೊಲೀಸ್ ನಡುವಿನ ಕದನದ ರೀತಿಯ ಪ್ರಹಸನಗಳು ನಡೆದವು. ಇಡೀ ದೇಶದ ಗಮನವೆಲ್ಲಾ ಮೋದಿಯ ಬಿಜೆಪಿಯ ಕೇಂದ್ರ ಸರಕಾರ ಹಾಗೂ ಮಮತಾರ ತೃಣಮೂಲ ಕಾಂಗ್ರೆಸ್‌ನ ಪಶ್ಚಿಮ ಬಂಗಾಳ ರಾಜ್ಯ ಸರಕಾರಗಳ ನಡುವಿನ ಈ ಕೋಳಿ ಜಗಳದ ಮೇಲೆ ತಿರುಗುವಂತಾಯಿತು. ಕೋಲ್ಕತಾ ಪೊಲೀಸ್ ಕಮಿಷನರ್‌ರನ್ನು ಬಂಧಿಸಲು ಸಿಬಿಐ ಮುಂದಾದಾಗ ಪಶ್ಚಿಮ ಬಂಗಾಳ ಪೊಲೀಸರು ಸಿಬಿಐ ಅಧಿಕಾರಿಗಳನ್ನೇ ಬಂಧಿಸಿದರು. ನಂತರ ಕೋಲ್ಕತಾದಲ್ಲಿರುವ ಸಿಬಿಐ ಕಚೇರಿಯನ್ನೇ ಪಶ್ಚಿಮ ಬಂಗಾಳ ಪೊಲೀಸ್ ಸುತ್ತುವರಿಯಿತು. ನಂತರ ಕೇಂದ್ರ ಸರಕಾರದ ವಿರುದ್ಧ ಮಮತಾ ಬ್ಯಾನರ್ಜಿ ಧರಣಿ ಸಂಘಟಿಸಿ ಕುಳಿತು ಭಾರೀ ಸುದ್ದಿಮಾಡಿದ್ದರು. ತಮ್ಮ ನಡೆಗಳ ಸಮರ್ಥನೆಗಾಗಿ ಒಕ್ಕೂಟ ವ್ಯವಸ್ಥೆ, ರಾಜ್ಯಗಳ ಸಂವಿಧಾನದತ್ತ ಅಧಿಕಾರ, ಪ್ರಾದೇಶಿಕತೆಯ ಭಾವನೆಗಳನ್ನು ಬಳಸಿ ಪಶ್ಚಿಮ ಬಂಗಾಳದ ಜನರನ್ನು ತನ್ನ ಪರವಾಗಿ ತಿರುಗಿಸಿಕೊಳ್ಳಲು ಶ್ರಮಿಸಿದರು. ಕೇಂದ್ರ ಸರಕಾರ ಅಖಿಲ ಭಾರತ ನಾಗರಿಕ ಸೇವೆಯಡಿ ಬರುವ ಐಪಿಎಸ್ ಅಧಿಕಾರಿಗಳ ಮೇಲೆ ತನಗಿರುವ ಶಾಸನಬದ್ಧ ನಿಯಂತ್ರಣದ ನೆಪದಲ್ಲಿ ಪಶ್ಚಿಮ ಬಂಗಾಳದ ಐಪಿಎಸ್ ಅಧಿಕಾರಿಗಳನ್ನು ತನ್ನ ಆಣತಿಯಂತೆ ಕಾರ್ಯ ನಿರ್ವಹಿಸುವಂತೆ ಮಾಡಲು ಹೊರಟಿದೆ.

ಮಮತಾ ಬ್ಯಾನರ್ಜಿ ಸರಕಾರ ತನ್ನ ರಾಜ್ಯದಲ್ಲಿ ಕಾರ್ಯಾಚರಿಸಲು ಈ ಹಿಂದೆ ಸಿಬಿಐಗೆ ನೀಡಿದ್ದ ಅನುಮತಿಯನ್ನು ಇತ್ತೀಚೆಗೆ ವಾಪಸ್ ಪಡೆದಿತ್ತು. ಈ ರೀತಿ ಸಿಬಿಐಗೆ ನೀಡಿದ್ದ ಅನುಮತಿಯನ್ನು ಆಂಧ್ರ ಪ್ರದೇಶ ಸೇರಿದಂತೆ ಕೆಲವು ರಾಜ್ಯ ಸರಕಾರಗಳು ಇತ್ತೀಚೆಗೆ ವಾಪಸ್ ಪಡೆದಿವೆ. ಹಾಗಾಗಿ ಸಿಬಿಐ ಆಯಾ ರಾಜ್ಯ ಸರಕಾರಗಳ ಪೂರ್ವಭಾವಿ ಅನುಮತಿಯಿಲ್ಲದೆ ಅಂತಹ ರಾಜ್ಯಗಳಲ್ಲಿ ಕಾರ್ಯಾಚರಿಸುವಂತಿರಲಿಲ್ಲ. ಸಿಬಿಐ ದಿಲ್ಲಿ ವಿಶೇಷ ಪೊಲೀಸ್ ಕಾಯ್ದೆಯಡಿ ರಚಿಸಿದ ತನಿಖಾ ಸಂಸ್ಥೆಯಾಗಿದೆ. ಇದು ಪೂರ್ಣವಾಗಿ ಕೇಂದ್ರ ಸರಕಾರದ ಅಧೀನದಲ್ಲಿರುವ ವಿಶೇಷ ತನಿಖಾ ಸಂಸ್ಥೆ. ಸಾಮಾನ್ಯವಾಗಿ ನಮ್ಮ ದೇಶವನ್ನು ಆಳುತ್ತಾ ಬಂದ ಕೇಂದ್ರ ಸರಕಾರಗಳು ಈ ತನಿಖಾ ಸಂಸ್ಥೆಯನ್ನು ತಮ್ಮ ರಾಜಕೀಯ ಎದುರಾಳಿಗಳನ್ನು ಬ್ಲಾಕ್‌ಮೇಲ್ ಮಾಡಲು ಇಲ್ಲವೇ ಹಣಿಯಲು, ಬಳಸುತ್ತಾ ಬಂದಿರುವುದೇ ಇತಿಹಾಸ. ಸರ್ವೋಚ್ಚ ನ್ಯಾಯಾಲಯ ಕೂಡ ಹಿಂದೆ ಈ ಸಂಸ್ಥೆಯನ್ನು ‘ಪಂಜರದ ಗಿಣಿ’ಯೆಂದು ಕರೆದಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಸರ್ವೋಚ್ಚ ನ್ಯಾಯಾಲಯ ಕೂಡ ಈ ತನಿಖಾ ಸಂಸ್ಥೆಗೆ ಹಲವು ಪ್ರಕರಣಗಳನ್ನು ವಹಿಸಿದ್ದಲ್ಲದೆ ತನಿಖೆಗಳನ್ನು ನಡೆಸಿ ವರದಿ ತನಗೆ ನೇರವಾಗಿ ವರದಿ ಒಪ್ಪಿಸಲು ಆದೇಶಿಸುವುದೂ ಶುರುವಾಗಿತ್ತು. ಮಮತಾರ ತೃಣಮೂಲ ಕಾಂಗ್ರೆಸ್‌ನ ಹಲವಾರು ನೇತಾರರು ಭಾಗಿಯಾಗಿ ದ್ದಾರೆಂದು ಹೇಳಲಾಗಿರುವ ಸಾವಿರಾರು ಕೋಟಿ ರೂಪಾಯಿಗಳ ಶಾರದಾ ಚಿಟ್ ಫಂಡ್ ಹಗರಣ, ಮಮತಾ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ನಾರದ ಕುಟುಕು ಕಾರ್ಯಾಚರಣೆ ಹಗರಣ, ಹತ್ತಾರು ಸಾವಿರ ಕೋಟಿ ರೂಪಾಯಿಗಳ ರೋಸ್ ವ್ಯಾಲಿ ಹಗರಣಗಳನ್ನು 2014ರಲ್ಲಿ ಸರ್ವೋಚ್ಚ ನ್ಯಾಯಾಲಯವು ಸಿಬಿಐಗೆ ವಹಿಸಿತ್ತು. ಸಿಬಿಐ ಈ ಹಗರಣಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್‌ನ ಉಪಾಧ್ಯಕ್ಷ ಸೇರಿದಂತೆ ಘಟಾನುಘಟಿ ನಾಯಕರು, ಲೋಕಸಭಾ ಸದಸ್ಯರು, ಮಂತ್ರಿಗಳನ್ನು ಪ್ರಶ್ನೆ ಮಾಡಿರುವುದು ಬಂಧಿಸುವುದು ನಡೆದಿತ್ತು. ಇದಾದ ನಂತರ ಜಾಮೀನು ಪಡೆದು ಹೊರಬಂದ ಈ ಎಲ್ಲಾ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಹೊತ್ತ ಹಲವರು ನಂತರ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸೇರಿದ್ದರು.

ತಮ್ಮ ಮೇಲಿನ ಸಿಬಿಐ ತನಿಖೆಯನ್ನು ದಾರಿ ತಪ್ಪಿಸಿ ರಕ್ಷಿಸುವ ಭರವಸೆ ಮೇರೆಗೆ ಅವರು ಬಿಜೆಪಿಗೆ ಸೇರಿರುವುದಾಗಿಯೂ ಹೇಳಲಾಗುತ್ತಿದೆ. ನಂತರದ ಹಲವು ವಿದ್ಯಮಾನಗಳನ್ನು ನೋಡಿದಾಗ ಇದರಲ್ಲಿ ಹುರುಳಿಲ್ಲವೆಂದು ಹೇಳಲಾಗದು. ಇನ್ನೊಂದೆಡೆ ಕೋಲ್ಕತಾ ಪೊಲೀಸರು ಪ್ರಕರಣಗಳ ಸಾಕ್ಷಗಳನ್ನು ನಾಶಪಡಿಸುತ್ತಿದ್ದಾರೆ ಎಂಬ ಆರೋಪವನ್ನು ಸಿಬಿಐ ಮಾಡುತ್ತಿದೆ. ಆದರೆ ಬಿಜೆಪಿ ಸೇರಿಕೊಂಡಿರುವ ಮಾಜಿ ತೃಣಮೂಲ ಕಾಂಗ್ರೆಸ್ ನಾಯಕರ ಮೇಲಿನ ಸಾಕ್ಷಗಳನ್ನು ಸಿಬಿಐ ನಾಶ ಮಾಡುತ್ತಿದೆ. ಆ ಉದ್ದೇಶ ಕೂಡ ಕೋಲ್ಕತಾ ಪೊಲೀಸರ ಮೇಲೆ ನಿಯಂತ್ರಣ ಸಾಧಿಸಲು ಹೊರಟಿರುವ ಸಿಬಿಐ ನಡೆಗಳ ಹಿಂದೆ ಇದೆ ಎಂಬ ಆರೋಪಗಳು ಕೂಡ ಇವೆ. 2018ರಲ್ಲಿ 27ಕ್ಕೂ ಹೆಚ್ಚು ಅಮಾಯಕರ ಸಾವಿಗೆ ಕಾರಣವಾದ ಉತ್ತರ ಕೋಲ್ಕತಾದ ನಿರ್ಮಾಣ ಹಂತದಲ್ಲಿದ್ದ ವಿವೇಕಾನಂದ ರಸ್ತೆ ಮೇಲ್ಸೇತುವೆಯ ಕುಸಿತದ ದುರಂತಕ್ಕೂ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕರು ರಾಜಕೀಯ ಪ್ರಭಾವಗಳ ಮೂಲಕ ವಹಿಸಿಕೊಂಡು ಸರಬರಾಜು ಮಾಡಿದ ಕಳಪೆ ಸಾಮಗ್ರಿಗಳೇ ಪ್ರಧಾನ ಕಾರಣವೆಂದು ಹೇಳಲಾಗುತ್ತಿದೆ. ಸಿಬಿಐ ಹಾಗೂ ಕೋಲ್ಕತಾ ಪೊಲೀಸರನ್ನು ಮುಂದಿಟ್ಟುಕೊಂಡು ಎರಡು ಪಕ್ಷಗಳ ಸರಕಾರಗಳು ಹಾಗೂ ವ್ಯಕ್ತಿಗಳು ನಡೆಸುತ್ತಿರುವ ಈ ಪೈಪೋಟಿ ಹಾಗೂ ಸಂಘರ್ಷದಲ್ಲಿ ಹಲವಾರು ಕರಾಳ ಸತ್ಯಗಳು, ಹತ್ತಾರು ಸಾವಿರ ಕೋಟಿಗಳ ಅವ್ಯವಹಾರಗಳು, ಹಗರಣಗಳು, ಅಕ್ರಮಗಳು ಹೂತು ಹೋಗುವಂತೆ ಮಾಡುತ್ತಿರುವುದಂತೂ ಎದ್ದು ಕಾಣುತ್ತಿರುವ ವಿಚಾರ.

ಎರಡು ಮಹಾಭ್ರಷ್ಟ ಗುಂಪುಗಳ ನಡುವಿನ ಕದನವದು. ಇಲ್ಲಿ ಅವರಿಗೆ ಸಂವಿಧಾನವಾಗಲೀ, ಒಕ್ಕೂಟ ವ್ಯವಸ್ಥೆಯಾಗಲೀ ಮುಖ್ಯವಲ್ಲ. ಅವರಿಗೆ ಅವರವರ ಹಗರಣಗಳನ್ನು ಮುಚ್ಚಿಹಾಕುವ ಉದ್ದೇಶ ಹಾಗೂ ತಮ್ಮ ಅಧಿಕಾರದ ಹಿಡಿತಗಳನ್ನು ಬೆಳೆಸುವುದು ಮತ್ತು ಉಳಿಸುವುದಷ್ಟೇ ಮುಖ್ಯವಾಗಿರುವುದು. ಮೋದಿಯ ಬಿಜೆಪಿ ಕೇಂದ್ರ ಸರಕಾರವು ಈ ಐದು ವರ್ಷಗಳಲ್ಲಿ ಹಗರಣಗಳನ್ನೇ ಸರಕಾರವನ್ನಾಗಿ ಮಾಡಿಟ್ಟಿದೆ. ನೋಟು ರದ್ದತಿ, ಫಸಲ್ ಬಿಮಾ ಹಗರಣ, ಜಿಯೋ ಹಗರಣ ಇತ್ಯಾದಿ ಹಗರಣಗಳಿಂದ ಹಿಡಿದು ರಫೇಲ್ ಹಗರಣ, ಈಗ ಸಿಬಿಐ ಹಗರಣದವರೆಗಿನ ಹಗರಣಗಳ ಮಹಾ ಸರಣಿಯೇ ಇವೆ. ಹಾಗೆಯೇ ಪಶ್ಚಿಮ ಬಂಗಾಳದ ಮಮತಾರ ತೃಣಮೂಲ ಕಾಂಗ್ರೆಸ್ ಸರಕಾರ ಕೂಡ ಆಡಳಿತಕ್ಕೆ ಬಂದಾಗಿನಿಂದ ಹತ್ತು ಹಲವು ಹಗರಣಗಳಲ್ಲಿ ಮುಳುಗಿ ಜನರ ಸಿಟ್ಟಿಗೆ ಗುರಿಯಾಗಿದೆ. ಲೋಕಸಭಾ ಚುನಾವಣೆ ಎದುರಿಸುವ ಪ್ರಶ್ನೆ ಮುಂದಿದೆ. ಮೋದಿ ಆಡಳಿತದಂತೆ ಮಮತಾ ಆಡಳಿತ ಕೂಡ ಪ್ರಶ್ನೆ ಮಾಡುವವರನ್ನು, ತನ್ನ ಸರಕಾರವನ್ನು ಟೀಕಿಸುವ ಪ್ರಜಾತಂತ್ರವಾದಿಗಳನ್ನು, ಹೋರಾಟದಲ್ಲಿರುವ ಜನರನ್ನು ಸುಳ್ಳು ಕೇಸುಗಳಡಿ ಬಂಧಿಸುವ, ದಮನಿಸುವ, ಕೊಲ್ಲುವ, ಸುಳ್ಳು ಎನ್‌ಕೌಂಟರ್ ಮಾಡುವ ಕೆಲಸಗಳನ್ನೇ ಮಾಡುತ್ತಾ ಬಂದಿದೆ. ಪಕ್ಷದ ಕಾರ್ಯಕರ್ತರೆಂಬ ಶಸ್ತ್ರಸಜ್ಜಿತ ಗೂಂಡಾ ಪಡೆಗಳ ಮೂಲಕ ಮುಗ್ಧ ಜನ ಸಾಮಾನ್ಯರ ಮೇಲೆ, ರಾಜಕೀಯ ಎದುರಾಳಿಗಳ ಮೇಲೆ ಬೆದರಿಕೆ ಹಲ್ಲೆಗಳನ್ನು ಮಾಡಿಸುವ ಮೂಲಕ ತೃಣಮೂಲ ಕಾಂಗ್ರೆಸ್ ಪಕ್ಷ ತನ್ನ ಆಡಳಿತ ನಡೆಸುತ್ತಿದೆ.

ಆರಂಭಿಕವಾಗಿ ಮಾಡಿದ ಒಂದು ಮಟ್ಟದ ಭೂಹಂಚಿಕೆ ಹೊರತು ಪಡಿಸಿದರೆ ಇದೇ ಪದ್ಧತಿಗಳ ಮೂಲಕವೇ ಹಿಂದಿನ ಸಿಪಿಐ (ಎಂ) ನೇತೃತ್ವದ ಸರಕಾರ ಕೂಡ ಮೂರು ದಶಕಗಳಿಗೂ ಹೆಚ್ಚು ಕಾಲ ಆಡಳಿತ ನಡೆಸಿತ್ತು. ಕೊನೆಗೆ ತನ್ನ ದುರಾಡಳಿತ, ಭ್ರಷ್ಟಾಚಾರ ಹಾಗೂ ದೊಡ್ಡ ಕಾರ್ಪೊರೇಟು ಪರ ನೀತಿಗಳಿಂದಾಗಿ ಅಧಿಕಾರ ಕಳೆದುಕೊಂಡಿರುವ ಉದಾಹರಣೆ ನಮ್ಮ ಮುಂದಿದೆ. ಮೋದಿಯ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಸಂಘ ಪರಿವಾರದ ಹಿಡಿತ ಸ್ಥಾಪಿಸಿ ತಮ್ಮ ಸರಕಾರದ ಕೈಗೆ ಆಡಳಿತ ಯಂತ್ರವನ್ನು ಹಿಡಿದುಕೊಳ್ಳಲು ಸಿಬಿಐಯನ್ನು ಬಳಸುತ್ತಿದ್ದರೆ ಮಮತಾ ತನ್ನ ರಾಜ್ಯದ ಪೊಲೀಸ್ ಪಡೆಯ ಮೂಲಕ ತನ್ನ ಹಿಡಿತ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಜಾತಿ ಮತ ಧರ್ಮಗಳ ಭಾವನೆಗಳನ್ನೂ ಚೆನ್ನಾಗಿಯೇ ತಮ್ಮ ಪರವಾಗಿ ಬಳಸಿಕೊಳ್ಳುತ್ತಿದ್ದಾರೆ. ಸುಮಾರು ಶೇ.27ಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ರಾಜ್ಯದ ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟು ಮೌಲ್ವಿಗಳಿಗೆ ಸರಕಾರದ ವತಿಯಿಂದ ಸಂಬಳ ನೀಡುವ ತೀರ್ಮಾನ ತೆಗೆದುಕೊಂಡಿದ್ದರು ಮಮತಾ ಬ್ಯಾನರ್ಜಿ. ಕೊನೆಗದು ನ್ಯಾಯಾಲಯದ ಕಟ್ಟೆಯೇರಿದಾಗ ಅಸಾಂವಿಧಾನಿಕ ನಡೆ ಎಂಬ ತೀರ್ಪು ಬಂದಿತು. ಒಟ್ಟಿನಲ್ಲಿ ಈ ಎರಡು ಗುಂಪುಗಳ ಗುಣಗಳಲ್ಲಿ ಮೂಲಭೂತವಾದ ವ್ಯತ್ಯಾಸವಿಲ್ಲ.

ಈಗ ಚುನಾವಣಾ ಸಂದರ್ಭವಾಗಿರುವುದರಿಂದ ಇವರ ಕದನಗಳು ತಾರಕಕ್ಕೆ ಹೋಗುತ್ತಿವೆ. ಇಲ್ಲಿ ಇವರು ಯಾರೂ ಸಂವಿಧಾನ ಪಾಲಕರಲ್ಲ. ಒಕ್ಕೂಟ ವ್ಯವಸ್ಥೆ ಬೆಳೆಸುವ ಗುರಿಯೂ ಅವರಲ್ಲಿಲ್ಲ. ಅವರ ಅನುಕೂಲಕ್ಕೆ ತಕ್ಕಂತೆ ಜನರನ್ನು ಮರುಳುಗೊಳಿಸಲು ಸಂವಿಧಾನ ಇತ್ಯಾದಿಗಳನ್ನು ಬಳಸುತ್ತಿದ್ದಾರೆ ಅಷ್ಟೇ. ಆದರೆ ಆಚರಣೆಯಲ್ಲಿ ಮೊದಲಿನಿಂದಲೂ ಸಂವಿಧಾನ ಉಲ್ಲಂಘನೆಗಳನ್ನೇ ಹೆಚ್ಚಾಗಿ ಮಾಡುತ್ತಾ ಬಂದವರು.

ಇಲ್ಲಿ ಮೋದಿಯ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ತನ್ನ ಹಿಡಿತ ಸಾಧಿಸಲು ಎಲ್ಲಾ ಮಾರ್ಗಗಳನ್ನೂ ಬಳಸಲು ಶುರುಮಾಡಿದ್ದರೆ ಮಮತಾ ತನ್ನಪಕ್ಷದ ಹಿಡಿತ ತಪ್ಪದೇ ಇರಲು ಎಲ್ಲಾ ಮಾರ್ಗಗಳನ್ನು ಬಳಸಲು ಶುರು ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾರನ್ನು ತಡೆಯಬಲ್ಲ ವಿರೋಧ ಪಕ್ಷಗಳೇ ಇಲ್ಲದಂತಾಗಿದೆ. ಸಿಪಿಐ (ಎಂ) ಆಗಲೀ ಭಾರತ ರಾಷ್ಟ್ರೀಯ ಕಾಂಗ್ರೆಸ್ ಆಗಲೀ ಆ ಶಕ್ತಿಯನ್ನು ಈಗ ಹೊಂದಿಲ್ಲ. ಮಮತಾರ ಆಡಳಿತ ಹಿಂದಿನ ಸಿಪಿಐ (ಎಂ) ಸರಕಾರದ ಆಡಳಿತಕ್ಕಿಂತ ಭಿನ್ನವಾಗೇನೂ ಇಲ್ಲ ಎಂಬ ಅನುಭವ ಜನರಿಗಾಗತೊಡಗಿದೆ. ಜನರ ಈ ಅಸಮಾಧಾನ ಸಿಟ್ಟು ಆಕ್ರೋಶಗಳನ್ನು ತಮ್ಮ ಶಕ್ತಿವರ್ಧನೆಗೆ ಚಿಮ್ಮುಹಲಗೆಯಾಗಿ ಬಳಸಿಕೊಳ್ಳಲು ಆರೆಸ್ಸೆಸ್, ಬಿಜೆಪಿ ಪರಿವಾರಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ. ರಥಯಾತ್ರೆ, ಗೋ ರಕ್ಷಣೆ ಇತ್ಯಾದಿಗಳ ನೆಪದಲ್ಲಿ ತಮ್ಮ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ನೀತಿಗಳ ಮೂಲಕ ಅತೃಪ್ತಗೊಂಡ ರೋಷತಪ್ತ ಜನರನ್ನು ತಮ್ಮೆಡೆಗೆ ಸೆಳೆದು ಬಲ ವರ್ಧಿಸಿಕೊಳ್ಳಲು ಎಲ್ಲಾ ಕುತಂತ್ರಗಳನ್ನು ಬಳಸಲು ತೊಡಗಿದೆ.

ಅಧಿಕಾರಕ್ಕಾಗಿನ ಎರಡು ಲೂಟಿಕೋರ ಕೂಟಗಳ ಜಗಳಗಳನ್ನು ಸಂವಿಧಾನ ಪಾಲನೆ, ಒಕ್ಕೂಟ ತತ್ವ, ಪ್ರಜಾ ಪ್ರಭುತ್ವ ಪಾಲನೆ ಅಂತೆಲ್ಲಾ ನೋಡುವುದು ತಪ್ಪಾದ ನಡೆಗಳಾಗುತ್ತವೆ. ‘‘ಅದು ಬಿಜೆಪಿಗಿಂತ ಮಮತಾ ಪರವಾಗಿಲ್ಲ. ಫ್ಯಾಶಿಸ್ಟ್ ಮೋದಿಗಿಂತ ಮಮತಾ ಆಗಬಹುದು. ಸದ್ಯಕ್ಕೆ ಮೋದಿ ಬಹಳ ಅಪಾಯಕಾರಿ, ಬಿಜೆಪಿಗಿಂತ ಕಾಂಗ್ರೆಸ್ ಪರವಾಗಿಲ್ಲ.....’’ ಹೀಗೆಲ್ಲಾ ನಿಲುವುಗಳನ್ನು ತಾಳಲು ದಾರಿ ಮಾಡಿಕೊಡುತ್ತದೆ. ಕೊನೆಗದು ರಾಜಕೀಯ ದಿವಾಳಿತನದ ಅನುಕೂಲ ಸಿಂದು ಹಾಗೇನೆ ಅವಕಾಶವಾದಿ ನಿಲುವುಗಳನ್ನು ತಾಳುವ, ಜನರನ್ನು ಗೊಂದಲಕ್ಕೆ ಬೀಳಿಸುವ ನಡೆಯಾಗುತ್ತವೆ. ಮತ್ತವೇ ಭ್ರಷ್ಟ ಶಕ್ತಿಗಳನ್ನು ಭಿನ್ನ ಭಿನ್ನ ಹಳಸಲು ನೆಪಗಳಲ್ಲಿ ಪ್ರೋತ್ಸಾಹಿಸುತ್ತಾ ಆಳುವ ಶಕ್ತಿಗಳಿಗೆ ಅನುಕೂಲ ಮಾಡಿಕೊಡುವ ನಿಲುವುಗಳೇ ಆಗುತ್ತದೆ. ಮಮತಾ ಬ್ಯಾನರ್ಜಿ ಮೂಲತಃ ಭಾರತ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದವರು. ಕಾಂಗ್ರೆಸ್ ಜನರ ಸಿಟ್ಟಿಗೆ ಗುರಿಯಾಗಿ ಮೊದಲಿದ್ದ ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾಗ ಬಿಜೆಪಿ ನೇತೃತ್ವದ ಎನ್‌ಡಿಎ ಪಾಳಯ ಸೇರಿ ಕೇಂದ್ರ ಮಂತ್ರಿಯಾದವರು. ನಂತರ ಎನ್‌ಡಿಎ ಸಖ್ಯದಿಂದ ಹೊರಬಂದು ಈಗ ಮತ್ತೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸೇರಿದಂತೆ ಬಿಜೆಪಿಯೇತರ ಪಕ್ಷಗಳ ಮಹಾಘಟಬಂಧನ್‌ನ ನಾಯಕಿಯಾಗಿ ಮುಂದಿನ ಪ್ರಧಾನಿಯಾಗಲು ಹೊರಟಿರುವವರು. ಹಾಗಾಗಿ ಮೂಲಭೂತವಾದ ವ್ಯತ್ಯಾಸಗಳೇನೂ ಇವರ ನಡುವೆ ಇಲ್ಲವೆನ್ನುವುದನ್ನು ಗಂಭೀರವಾಗಿ ಗಮನಿಸಬೇಕು.

ಮೋದಿಯ ಬ್ರಾಂಡ್ ಜನರ ಮುಂದೆ ಬೆತ್ತಲಾಗಿರುವುದರಿಂದ ಬೇರೆ ಪರ್ಯಾಯ ಇಲ್ಲದ ಅಂಬಾನಿ, ಅದಾನಿ ಸೇರಿದಂತೆ ಆಳುವ ಶಕ್ತಿಗಳಿಗೆ ಗರಿಷ್ಠ ಸೇವೆ ಮಾಡುವ ಭರವಸೆ ಮೂಡಿಸಲು ಈ ಎಲ್ಲಾ ಪಕ್ಷಗಳು ಈಗ ಪೈಪೋಟಿ ನಡೆಸುತ್ತಿವೆ. ಇಂದಿನ ಆರ್ಥಿಕ ರಾಜಕೀಯ ಸಾಮಾಜಿಕ ಬಿಕ್ಕಟ್ಟುಗಳ ಉಚ್ಛ್ರಾಯ ಸ್ಥಿತಿಯಲ್ಲಿ ಇಂತಹವುಗಳು ಮತ್ತಷ್ಟು ಹೆಚ್ಚುತ್ತಾ ಹೋಗುವುದು ಸಾಮಾನ್ಯವಾಗುತ್ತವೆ. ಆಳುವ ಶಕ್ತಿಗಳಿಗೆ ಕೇಂದ್ರೀಕೃತ ಆಡಳಿತ ಅವಶ್ಯವಾಗಿರುವುದರಿಂದ ಮೇಲ್ಮಟ್ಟದ ಒಕ್ಕೂಟ ತತ್ವಗಳೂ ಕಾಣೆಯಾಗುತ್ತವೆ. ಸಂವಿಧಾನ ಮತ್ತದರ ಆಶಯಗಳನ್ನು ಅಪ್ರಸ್ತತಗೊಳಿಸಲಾಗುತ್ತದೆ.

ಮಮತಾ ಬ್ಯಾನರ್ಜಿ ತನ್ನ ರಾಜ್ಯದಲ್ಲಿ ಯಾವ ರೀತಿಯ ಫ್ಯಾಶಿಸ್ಟ್ ಆಳ್ವಿಕೆಯನ್ನು ಮಾಡುತ್ತಿದ್ದಾರೋ ಅದನ್ನು ಕೇಂದ್ರ ಮಟ್ಟದಲ್ಲಿ ಮೋದಿ ಮಾಡುತ್ತಿದ್ದಾರೆ. ಸಿಬಿಐ ವರ್ಸಸ್ ಪಶ್ಚಿಮ ಬಂಗಾಳ ಪೊಲೀಸ್ ಅದರ ಒಂದು ಪರಿಣಾಮ ಮಾತ್ರ.


ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News