ಹೊಸದಿಲ್ಲಿ: ಕರೋಲ್ ಬಾಗ್ ಪ್ರದೇಶದ ಹೋಟೆಲ್ ನಲ್ಲಿ ಅಗ್ನಿ ಅನಾಹುತ; 17 ಮಂದಿ ಮೃತ್ಯು

Update: 2019-02-12 17:41 GMT

ಹೊಸದಿಲ್ಲಿ, ಫೆ. 12: ಕೇಂದ್ರ ದಿಲ್ಲಿಯ ಕರೋಲ್ ಬಾಘ್ ಪ್ರದೇಶದಲ್ಲಿರುವ ನಾಲ್ಕು ಮಹಡಿಗಳ ಹೋಟೆಲ್ ಅರ್ಪಿತ್ ಪ್ಯಾಲೇಸ್‌ನಲ್ಲಿ ಮಂಗಳವಾರ ನಸುಕಿನ ವೇಳೆ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ ಹಾಗೂ 35 ಮಂದಿ ಗಾಯಗೊಂಡಿದ್ದಾರೆ.

 ಕೇಂದ್ರ ದಿಲ್ಲಿಯ ಹೋಟಲ್ ಅರ್ಪಿತಾ ಪ್ಯಾಲೇಸ್‌ನ ಟೇರೇಸ್‌ನಲ್ಲಿರುವ ಮನೆಯ ಛಾವಣಿಯಲ್ಲಿ ಮುಂಜಾನೆ 3.30ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿತು. ಅನಂತರ ಇಡೀ ಕಟ್ಟಡಕ್ಕೆ ಹರಡಿತು. ಈ ಸಂದರ್ಭ ಹೊಟೇಲ್‌ನ 45 ಕೊಠಡಿಗಳಲ್ಲಿದ್ದ 53 ಮಂದಿ ಹಾಗೂ ಸಿಬ್ಬಂದಿ ನಿದ್ದೆಯಲ್ಲಿದ್ದರು. ಬೆಂಕಿಯಿಂದ ತಪ್ಪಿಸಿಕೊಳ್ಳಲು ಕೆಳಗೆ ಹಾರಿ ಮೃತಪಟ್ಟ ತಾಯಿ ಹಾಗೂ ಮಗು ಕೂಡ ಮೃತಪಟ್ಟ 17 ಮಂದಿಯಲ್ಲಿ ಸೇರಿದ್ದಾರೆ.

 ‘‘ಮುಂಜಾನೆ 4.35ಕ್ಕೆ ನಮಗೆ ಕರೆ ಬಂತು. ನಾವು ಸ್ಥಳಕ್ಕೆ ಧಾವಿಸಿದೆವು. ಈಗ ಬೆಂಕಿ ವ್ಯಾಪಿಸುತ್ತಿರುವುದನ್ನು ನಿಯಂತ್ರಿಸಲಾಗಿದೆ ಎಂದು ದಿಲ್ಲಿ ಅಗ್ನಿ ಶಾಮಕ ದಳದ ನಿರ್ದೇಶಕ ಜಿ.ಸಿ. ಮಿಶ್ರಾ ತಿಳಿಸಿದ್ದಾರೆ. ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ. 35 ಮಂದಿ ಗಾಯಗೊಂಡಿದ್ದಾರೆ. ಓರ್ವ ನಾಪತ್ತೆಯಾಗಿದ್ದಾನೆ ಎಂದು ಹೊಸದಿಲ್ಲಿ ಪೊಲೀಸ್‌ನ ಉಪ ಆಯುಕ್ತ ಮಧುರ್ ವರ್ಮಾ ಹೇಳಿದ್ದಾರೆ. ಈ ಬೆಂಕಿ ಅನಾಹುತದ ಬಗ್ಗೆ ದಿಲ್ಲಿ ಸರಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ‘‘ಹೊಟೇಲ್‌ನಲ್ಲಿ ಐದು ಅಥವಾ ಐದಕ್ಕಿಂತ ಮಹಡಿಗಳಿವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಹಾಗೂ ಅಗ್ನಿ ಸುರಕ್ಷೆ ಅನುಸರಣೆ ಬಗ್ಗೆ ಒಂದು ವಾರಗಳ ಒಳಗೆ ವರದಿ ಸಲ್ಲಿಸುವಂತೆ’’ ದಿಲ್ಲಿ ಗೃಹ ಸಚಿವ ಸತ್ಯೇಂದ್ರ ಜೈನ್ ಅಗ್ನಿಶಾಮಕ ದಳಕ್ಕೆ ನಿರ್ದೇಶಿಸಿದ್ದಾರೆ.

ಅಗ್ನಿ ಅನಾಹುತದಲ್ಲಿ ಮೃತಪಟ್ಟವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಹಲವು ರಾಜಕೀಯ ನಾಯಕರು ಹಾಗೂ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಧನ ಘೋಷಿಸಿದ್ದಾರೆ.

ಕೇರಳದ ಮಹಿಳೆ ಸಾವು, ಇಬ್ಬರು ನಾಪತ್ತೆ

ಅಗ್ನಿ ದುರಂತದಲ್ಲಿ ಕೊಚ್ಚಿಯ ಚೇರನಲ್ಲೂರಿನ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಅವರ ತಾಯಿ ಹಾಗೂ ಸಹೋದರ ನಾಪತ್ತೆಯಾಗಿದ್ದಾರೆ. ಮೃತಪಟ್ಟ ಮಹಿಳೆಯನ್ನು ಚೇರನಲ್ಲೂರು ಗ್ರಾಮ ಪಂಚಾಯತ್‌ನ 17ನೇ ವಾರ್ಡ್‌ನ ಮರಪರಂಬುವಿನ ಜಯಶ್ರಿ (53) ಎಂದು ಗುರುತಿಸಲಾಗಿದೆ. ನಳಿನಿ (85) ಹಾಗೂ ಅವರ ಪುತ್ರ ವಿದ್ಯಾಸಾಗರ್ (58) ನಾಪತ್ತೆಯಾಗಿದ್ದಾರೆ. ದಿಲ್ಲಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಫೆಬ್ರವರಿ 7ರಂದು ತೆರಳಿದ ಐದು ಸಂಬಂಧಿಕರ ಕುಟಂಬಗಳ 13 ಸದಸ್ಯರ ಗುಂಪಿನನಲ್ಲಿ ಇವರು ಕೂಡ ಸೇರಿದ್ದರು. ಜಯಶ್ರೀ ಅವರ ಸಾವು ಹಾಗೂ ತಾಯಿ, ಸಹೋದರ ನಾಪತ್ತೆಯಾದ ಬಗ್ಗೆ ಗುಂಪಿನ ಸದಸ್ಯರಾಗಿದ್ದ, ಜಯಶ್ರೀ ಅವರ ಸಹೋದರ ಸೋಮಶೇಖರನ್ ತಿಳಿಸಿದ್ದಾರೆ ಎಂದು ಸ್ಥಳೀಯ ಕೌನ್ಸಿಲರ್ ಲಿಸ್ಸಿ ವೆರಿಯಾತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News