ಎಚ್ಚರಿಕೆ....ಅತಿಯಾದ ಟೂತ್ ಪೇಸ್ಟ್ ಬಳಕೆ ಮಕ್ಕಳಲ್ಲಿ ಈ ಅಪಾಯಕ್ಕೆ ಕಾರಣವಾಗಬಹುದು!

Update: 2019-02-12 11:39 GMT

ಮಕ್ಕಳಿಗೆ ಸರಿಯಾದ ಪ್ರಮಾಣದ ಅರಿವಿಲ್ಲದಿರುವುದರಿಂದ ಅವರು ಅಗತ್ಯಕ್ಕಿಂತ ಹೆಚ್ಚು ಟೂತ್ ಪೇಸ್ಟ್ ಬಳಸುತ್ತಾರೆ. ಇದು ಸಣ್ಣ ವಿಷಯವಾಗಿರಬಹುದು ಮತ್ತು ಇದೇ ಕಾರಣದಿಂದ ಹೆಚ್ಚಿನ ಪೋಷಕರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಮಕ್ಕಳು ಅಗತ್ಯಕ್ಕಿಂತ ಹೆಚ್ಚಿನ ಟೂತ್ ಪೇಸ್ಟ್ ಬಳಸಿದರೆ ಅದು ಅವರಲ್ಲಿ ದಂತಕ್ಷಯಕ್ಕೆ ಕಾರಣವಾಗಬಹುದು ಎನ್ನುವುದು ನಿಮಗೆ ಗೊತ್ತೇ?, ಅಗತ್ಯಕ್ಕಿಂತ ಹೆಚ್ಚಿನ ಟೂತ್ ಪೇಸ್ಟ್ ಬಳಸುವ ಮಕ್ಕಳು ಬೆಳೆದು ದೊಡ್ಡವರಾದಾಗ ಫ್ಲೋರೊಸಿಸ್‌ ಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ಬೆಟ್ಟು ಮಾಡಿದೆ.

ಫ್ಲೋರೊಸಿಸ್ ಹಲ್ಲುಗಳನ್ನು ಕಾಡುವ ಕಾಯಿಲೆಯಾಗಿದೆ. ವ್ಯಕ್ತಿಯ ಬದುಕಿನ ಮೊದಲ ಎಂಟು ವರ್ಷಗಳಲ್ಲಿ ಅತಿಯಾದ ಫ್ಲೋರೈಡ್ ಸೇವನೆ ಈ ಕಾಯಿಲೆಗೆ ಕಾರಣವಾಗುತ್ತದೆ.

ಫ್ಲೋರೈಡ್ ನೀರು ಮತ್ತು ಮಣ್ಣಿನಲ್ಲಿರುವ ಖನಿಜವಾಗಿದೆ. ನೈಸರ್ಗಿಕ ನೀರನ್ನು ಕುಡಿಯುವ ಜನರು ಹೆಚ್ಚು ಫ್ಲೋರೈಡ್‌ನ್ನು ಸೇವಿಸುತ್ತಾರೆ ಮತ್ತು ಇದೇ ಕಾರಣದಿಂದ ಅವರಲ್ಲಿ ದಂತಕುಳಿಗಳು ಕಡಿಮೆ ಎನ್ನುವುದು ಹಿಂದಿನ ಅಧ್ಯಯನಗಳಲ್ಲಿ ಬೆಳಕಿಗೆ ಬಂದ ನಂತರ ಟೂತ್ ಪೇಸ್ಟ್, ಮೌತ್ ವಾಷ್ ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡುವ ಇತರ ಉತ್ಪನ್ನಗಳಲ್ಲಿ ಫ್ಲೋರೈಡ್ ಸೇರ್ಪಡೆಗೊಂಡಿತ್ತು. ಆದರೆ ಅತಿಯಾದ ಫ್ಲೋರೈಡ್ ಸೇವನೆ ಹಲ್ಲುಗಳು ಬಣ್ಣಗೆಡಲು,ಅವುಗಳ ಮೇಲೆ ಕಲೆಗಳುಂಟಾಗಲು ಮತ್ತು ಫ್ಲೋರೊಸಿಸ್‌ ಗೆ ಕಾರಣವಾಗುತ್ತದೆ ಎನ್ನುವುದನ್ನು ಇತ್ತೀಚಿನ ಅಧ್ಯಯನವು ಬೆಳಿಕಿಗೆ ತಂದಿದೆ.

ಮಕ್ಕಳು ಆರೋಗ್ಯಕರ ಹಲ್ಲುಗಳು ಮತ್ತು ವಸಡುಗಳಿಗಾಗಿ ಬಟಾಣಿ ಗಾತ್ರದಷ್ಟು ಅಥವಾ ಅದಕ್ಕೂ ಕಡಿಮೆ ಟೂಥ್‌ಪೇಸ್ಟ್‌ನ್ನು ಬಳಸಬೇಕು ಎಂದೂ ಅಧ್ಯಯನವು ಶಿಫಾರಸು ಮಾಡಿದೆ. ಆದರೆ ಶೇ.40ರಷ್ಟು ಮಕ್ಕಳು ಅರ್ಧ ಬ್ರಷ್ ಅಥವಾ ಪೂರ್ಣ ಬ್ರಷ್‌ನಷ್ಟು ಟೂತ್ ಪೇಸ್ಟ್ ನ್ನು ಬಳಸುತ್ತಾರೆ ಎನ್ನುವುದು ಕಂಡು ಬಂದಿದೆ.

ಫ್ಲೋರೈಡ್‌ನ್ನು ಸೂಕ್ತ ಪ್ರಮಾಣದಲ್ಲಿ ಬಳಸಿದರೆ ಅದು ಬಾಯಿಯ ಆರೋಗ್ಯಕ್ಕೆ ಅತ್ಯಂತ ಲಾಭಕರ ಎನ್ನುವುದು ತಜ್ಞರ ಅಭಿಪ್ರಾಯ. ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರಗಳ ಸಂಶೋಧಕರು ಕೈಗೊಂಡಿದ್ದ ಅಧ್ಯಯನದಲ್ಲಿ 3ರಿಂದ 15 ವರ್ಷ ಪ್ರಾಯದ 5,000ಕ್ಕೂ ಅಧಿಕ ಮಕ್ಕಳನ್ನು ಭಾಗಿಯಾಗಿಸಲಾಗಿತ್ತು.

ಮೂರು ವರ್ಷಕ್ಕಿಂತ ಕೆಳಗಿನ ಮಕ್ಕಳು ಅಕ್ಕಿಕಾಳಿನಷ್ಟು ಗಾತ್ರದ ಟೂಥ್‌ಪೇಸ್ಟ್ ಬಳಸಬೇಕು ಮತ್ತು 3ರಿಂದ 6 ವರ್ಷ ಪ್ರಾಯದ ಮಕ್ಕಳು ಬಟಾಣಿ ಗಾತ್ರದಷ್ಟು ಟೂತ್ ಪೇಸ್ಟ್ ಬಳಸಬೇಕು ಎಂದು ಸಂಶೋಧನಾ ವರದಿಯು ಶಿಫಾರಸು ಮಾಡಿದೆ.

ಪೋಷಕರು ಮಕ್ಕಳ ಆಹಾರದ ವಿಷಯದಲ್ಲಿ ವಹಿಸುವಷ್ಟೇ ಕಾಳಜಿಯನ್ನು ಅವರು ಬಳಸುವ ಟೂತ್ ಬ್ರಷ್ ಮತ್ತು ಟೂತ್ ಪೇಸ್ಟ್ ಪ್ರಮಾಣದ ಬಗ್ಗೆಯೂ ವಹಿಸಬೇಕು ಎಂದು ಸಂಶೋಧಕರು ವರದಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News