ಮೊಬೈಲ್ ಟವರ್ ಗೆ ಜಾಗ ಕೊಟ್ಟರೆ ಸಾವಿರಾರು ರೂ.ಬಾಡಿಗೆ!: ಪಂಗನಾಮ ಹಾಕಿಸಿಕೊಂಡವರ ಕಥೆಯಿದು....

Update: 2019-02-12 11:54 GMT

“ನಿಮ್ಮ ಜಾಗದಲ್ಲಿ ಮೊಬೈಲ್ ಟವರ್ ಸ್ಥಾಪನೆಗೆ ಅವಕಾಶ ನೀಡುತ್ತೀರಾ?, ಲಕ್ಷಗಟ್ಟಲೆ ರೂ.ಅಡ್ವಾನ್ಸ್ ಜೊತೆಗೆ ಕೂತಲ್ಲಿಯೇ ತಿಂಗಳಿಗೆ ಸಾವಿರಾರು ರೂ.ಬಾಡಿಗೆ ಗಳಿಸಬಹುದು. ಏನಂತೀರಾ?,” ಇಂತಹ ಜಾಹೀರಾತುಗಳು ದಿನನಿತ್ಯವೂ ಎಂಬಂತೆ ಮಾಧ್ಯಮಗಳಲ್ಲಿ ಬರುತ್ತಿವೆ. ನಮ್ಮ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಹಲವೆಡೆಗಳಲ್ಲಿ ಅಮಾಯಕ ಜನರು ಇಂತಹ ಆಮಿಷಕ್ಕೆ ಬಲಿಯಾಗಿ ಲಕ್ಷಾಂತರ ರೂ.ಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಇಂತಹ ಜಾಹೀರಾತುಗಳನ್ನು ನಂಬುವ ಮುನ್ನ ಹಣ ಕಳೆದುಕೊಂಡವರ ಪ್ರವರನ್ನೊಮ್ಮೆ ಓದಿ.

ಬೆಂಗಳೂರಿನಲ್ಲಿ ಇಂತಹ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಅನಿಲ್ ಕುಮಾರ್‌ಗೆ ಕಳೆದ ತಿಂಗಳು ದೂರವಾಣಿ ಕರೆಯೊಂದು ಬಂದಿದ್ದು,ಟೆಲಿಕಾಂ ಕಂಪನಿಯೊಂದರ ಹೆಸರು ಹೇಳಿಕೊಂಡಿದ್ದ ವ್ಯಕ್ತಿಯೋರ್ವ ಮೊಬೈಲ್ ಟವರ್ ಸ್ಥಾಪನೆಗಾಗಿ ನಗರದಲ್ಲಿ ಯಾವುದೇ ಪ್ರದೇಶದಲ್ಲಿ ಆಸ್ತಿಯಿದ್ದರೆ ಲೀಸ್‌ಗೆ ನೀಡಬಹುದು ಎಂದು ತಿಳಿಸಿದ್ದ. ಲಕ್ಷಾಂತರ ರೂ.ಗಳ ಅಡ್ವಾನ್ಸ್‌ನ ಜೊತೆಗೆ ಪ್ರತಿ ತಿಂಗಳಿಗೆ 50,000 ರೂ.ಬಾಡಿಗೆಯ ಭರವಸೆಯನ್ನೂ ಕುಮಾರ್‌ಗೆ ನೀಡಲಾಗಿತ್ತು.

ಕೂತಲ್ಲೇ ತಿಂಗಳಿಗೆ 50,000 ರೂ. ಮತ್ತು ಅಡ್ವಾನ್ಸ್ ಹಣವನ್ನು ಬ್ಯಾಂಕಿನಲ್ಲಿಟ್ಟರೆ ಬಡ್ಡಿ ದೊರೆಯುತ್ತದೆ ಎಂದು ಲೆಕ್ಕ ಹಾಕಿದ್ದ ಕುಮಾರ್ ಒಪ್ಪಿಕೊಂಡಿದ್ದರು. ಆದರೆ ಈ ಡೀಲ್ ಕುದುರಲು ಕುಮಾರ್ ಮುಂಗಡವಾಗಿ ಹಣವನ್ನು ಪಾವತಿಸಬೇಕಿತ್ತು. ಈ ಹಂತದಲ್ಲಿಯೇ ಬುದ್ಧಿವಂತರಿಗೆ ವಂಚನೆಯ ವಾಸನೆ ಹೊಡೆಯುತ್ತದೆ. ಆದರೆ ಕುಮಾರ್‌ಗೆ ಈ ವಾಸನೆ ಹೊಡೆದಿರಲಿಲ್ಲ. ಅವರಿಗೆ ಕರೆಗಳನ್ನು ಮಾಡಿದ್ದ ಓರ್ವ ಪುರುಷ ಮತ್ತು ಮಹಿಳೆ ಜಾಗದ ಬಾಡಿಗೆ ಕರಾರುಪತ್ರ, ಜಾಗದ ಮೇಲೆ ವಿಮೆ, ಜಿಎಸ್‌ಟಿ ಇತ್ಯಾದಿಗಳಿಗಾಗಿ ಹಣ ಪಾವತಿಸುವಂತೆ ತಿಳಿಸಿದ್ದರು. ಅವರ ಮಾತುಗಳನ್ನು ನಂಬಿದ್ದ ಕುಮಾರ್ ಅವರು ಸೂಚಿಸಿದ್ದ ಬ್ಯಾಂಕ್ ಖಾತೆಗೆ 2.79 ಲ.ರೂ.ಗಳನ್ನು ಕಳುಹಿಸಿದ್ದರು. ಇದಾದ ಬಳಿಕ ವಿವಿಧ ನೆಪಗಳನ್ನೊಡ್ಡಿ ಇನ್ನೂ 1.2 ಲ.ರೂ.ಗಳನ್ನು ನೀಡುವಂತೆ ಅವರಿಗೆ ಸೂಚಿಸಲಾಗಿತ್ತು. ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಕುಮಾರ್‌ಗೆ ಈಗ ಅವರ ಉದ್ದೇಶಗಳ ಬಗ್ಗೆ ಶಂಕೆ ಮೂಡಿತ್ತು. ಕುಮಾರ್ ಅವರಿಗೆ ಕರೆಗಳನ್ನು ಮಾಡಿದರೂ ಯಾವುದೇ ಪ್ರತಿಕ್ರಿಯೆ ದೊರೆತಿರಲಿಲ್ಲ.

ವಂಚಕರು ಹೇಳಿಕೊಂಡಿದ್ದ ಟೆಲಿಕಾಂ ಕಂಪನಿಯ ಕಸ್ಟಮರ್ ಸಪೋರ್ಟ್ ಕಚೇರಿಗೆ ಭೇಟಿ ನೀಡಿದಾಗಲೇ ತಾನು ವಂಚಿಸಲ್ಪಟ್ಟಿದ್ದೇನೆ ಎನ್ನುವುದು ಕುಮಾರ್‌ಗೆ ಗೊತ್ತಾಗಿದ್ದು. ನಗರದಲ್ಲಿ ಇದೇ ತಂತ್ರ ಬಳಸಿ ಹಲವರನ್ನು ವಂಚಿಸಿರುವುದೂ ಅವರಿಗೆ ತಿಳಿದುಬಂದಿತ್ತು. ಇಂತಹ 4-5 ದೂರುಗಳು ಬಂದಿರುವುದಾಗಿ ಕಂಪನಿಯ ಅಧಿಕಾರಿಗಳು ತಿಳಿಸಿದ್ದರು. ತನಗೆ ಪಂಗನಾಮ ಬಿದ್ದಿರುವುದು ಖಾತ್ರಿಯಾದ ಬಳಿಕ ಕುಮಾರ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಇನ್ನೊಂದು ಘಟನೆಯಲ್ಲಿ ಬೆಂಗಳೂರಿನವರೇ ಆದ ಮುನಾಫ್ ಪತ್ರಿಕೆಯಲ್ಲಿಯ ಜಾಹೀರಾತನ್ನು ನೋಡಿ ತನ್ನ ಆಸ್ತಿಯಲ್ಲಿ ಮೊಬೈಲ್ ಟವರ್ ಸ್ಥಾಪನೆಗೆ ಕೋರಿದ್ದರು. ಮರುದಿನ ಅವರಿಗೆ ಕರೆ ಮಾಡಿದ್ದ ವ್ಯಕ್ತಿ,ಅವರ ಜಾಗದಲ್ಲಿ ಮೊಬೈಲ್ ಟವರ್ ನಿರ್ಮಿಸುವುದಾಗಿ ಮತ್ತು ಇತರ ಖರ್ಚುಗಳಿಗಾಗಿ 1,57,800 ರೂ.ಗಳನ್ನು ಪಾವತಿಸುವಂತೆ ತಿಳಿಸಿದ್ದ. ಆತ ಸೂಚಿಸಿದ್ದ ಬ್ಯಾಂಕ್ ಖಾತೆಗೆ ಮುನಾಫ್ ಹಣವನ್ನು ವರ್ಗಾವಣೆ ಮಾಡಿದ ಬಳಿಕ ಅವರ ಕರೆಗಳನ್ನು ಸ್ವೀಕರಿಸುವುದನ್ನೇ ಆ ವ್ಯಕ್ತಿ ನಿಲ್ಲಿಸಿಬಿಟ್ಟಿದ್ದ.

ಮೊಬೈಲ್ ಟವರ್‌ಗಳು ಹಾನಿಕಾರಕ ವಿಕಿರಣಗಳನ್ನು ಹೊರಸೂಸುತ್ತವೆ ಎಂದು ಹೇಳಲಾಗುತ್ತಿದೆಯಾದರೂ, ಸುಲಭವಾಗಿ ಹೆಚ್ಚುವರಿ ದುಡ್ಡು ಗಳಿಸುವ ಲಾಲಸೆಯಿಂದಾಗಿ ಹೆಚ್ಚೆಚ್ಚು ಜನರು ಈ ವಂಚನೆಗೆ ಬಲಿಯಾಗುತ್ತಲೇ ಇದ್ದಾರೆ.

ಕಳೆದ ತಿಂಗಳವರೆಗೂ ಗೂಗಲ್ ಸರ್ಚ್ ಟೆಲಿಕಾಂ ಕಂಪನಿಗಳದ್ದೆಂದು ಹೇಳಿಕೊಂಡು ಮೊಬೈಲ್ ಟವರ್‌ಗಳ ಸ್ಥಾಪನೆಗೆ ಜಾಗವನ್ನು ಬಾಡಿಗೆಗೆ ನೀಡುವ ಅವಕಾಶವನ್ನು ಗ್ರಾಹಕರ ಮುಂದಿರಿಸುತ್ತಿದ್ದ ಕನಿಷ್ಠ ನಾಲ್ಕು ವೆಬ್‌ ಸೈಟ್‌ ಗಳು ಕಂಡು ಬರುತ್ತಿದ್ದವು. ಆದರೆ ಈಗ ಇಂತಹ ವೆಬ್‌ಸೈಟ್‌ಗಳು ಗೂಗಲ್ ಸರ್ಚ್‌ನಲ್ಲಿ ಗೋಚರಿಸುತ್ತಿಲ್ಲ,ಆದರೆ ವಂಚನಾ ಜಾಲಗಳು ಈಗಲೂ ಅಸ್ತಿತ್ವದಲ್ಲಿರುವುದು ಸುಳ್ಳಲ್ಲ.

ಚೆನ್ನೈ,ಸೇಲಂ,ಹೈದರಾಬಾದ್, ಕೋಲ್ಕತಾ ಮತ್ತು ಪುಣೆ ಸೇರಿದಂತೆ ದೇಶದ ಹಲವೆಡೆಗಳಲ್ಲಿ ಜನರು ಮೊಬೈಲ್ ಟವರ್‌ಗಳ ಆಮಿಷಕ್ಕೆ ಬಲಿಯಾಗಿ ಲಕ್ಷಾಂತರ ರೂ.ಗಳನ್ನು ಕಳೆದುಕೊಂಡಿರುವ ಪ್ರಕರಣಗಳು ವರದಿಯಾಗಿವೆ.

ಟ್ರಾಯ್ 2014ರಲ್ಲಿಯೇ ಇಂತಹ ವಂಚನೆಗಳ ವಿರುದ್ಧ ಜನರಿಗೆ ಸಾರ್ವಜನಿಕ ನೋಟಿಸ್ ಮೂಲಕ ಎಚ್ಚರಿಕೆ ನೀಡಿತ್ತು. ಆದರೆ ಸುಲಭವಾಗಿ ದುಡ್ಡನ್ನು ಗಳಿಸುವ ಲಾಲಸೆಯೆದುರು ಯಾವ ಎಚ್ಚರಿಕೆ ಕೆಲಸ ಮಾಡುತ್ತದೆ ಹೇಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News