ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುತ್ತೀರಾ?: ಹಾಗಾದರೆ ಈ ಅಗತ್ಯ ಮಾಹಿತಿಗಳು ತಿಳಿದಿರಲಿ

Update: 2019-02-12 12:04 GMT

ದೂರದ ಪ್ರಯಾಣಕ್ಕಾಗಿ ರೈಲ್ವೆ ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಲು ಮೊದಲಿನಂತೆ ನಿಲ್ದಾಣಗಳಲ್ಲಿಯ ಬುಕಿಂಗ್ ಕೌಂಟರ್‌ ನೆದುರು ಗಂಟೆಗಟ್ಟಲೆ ಸರದಿಯಲ್ಲಿ ಕಾಯುವ ಅಗತ್ಯವಿಲ್ಲ. ಆನ್‌ ಲೈನ್‌ ನಲ್ಲಿ ಬೆರಳ ತುದಿಯಲ್ಲೇ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಮತ್ತು ಇದು ಅತ್ಯಂತ ಸುಲಭದ ಹಾಗೂ ಅನುಕೂಲಕರ ವಿಧಾನವಾಗಿದೆ. ಆದರೆ ಇಂತಹ ವಹಿವಾಟುಗಳ ಮೇಲೆ ಸೌಲಭ್ಯ ಶುಲ್ಕಗಳನ್ನು ವಿಧಿಸಲಾಗುವುದರಿಂದ ಪ್ರಯಾಣಿಕರ ಪಾಲಿಗೆ ಟಿಕೆಟ್ ದುಬಾರಿಯಾಗುವುದೂ ಹೌದು. ಹಲವಾರು ಬ್ಯಾಂಕುಗಳು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ಸೌಲಭ್ಯಗಳನ್ನು ಒದಗಿಸುತ್ತಿವೆ ಮತ್ತು ಕೆಲವೇ ನಿಮಿಷಗಳಲ್ಲಿ ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಲು ಬ್ಯಾಂಕುಗಳು ಮತ್ತು ಐಆರ್‌ಸಿಟಿಸಿ ವಿಧಿಸುತ್ತಿರುವ ವಹಿವಾಟು ಅಥವಾ ಸೌಲಭ್ಯ ಶುಲ್ಕಗಳು ಹೀಗಿವೆ.....

► ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಟಿಕೆಟ್ ಬುಕ್ ಮಾಡಿದರೆ:

ನೀವು ವಿಸಾ ಅಥವಾ ಮಾಸ್ಟರ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಎಚ್‌ಡಿಎಫ್‌ಸಿ,ಸಿಟಿ ಸೇರಿದಂತೆ ಕೆಲವು ಬ್ಯಾಂಕುಗಳು,ಪೇಟಿಎಂ ಮತ್ತು ಪೇಯು ಹಾಗೂ ಐಆರ್‌ಸಿಟಿಸಿ ಸಹ ಶೇ.1.8 ಶುಲ್ಕ ಮತ್ತು ತೆರಿಗೆಗಳನ್ನು ವಿಧಿಸುತ್ತವೆ. ಆ್ಯಕ್ಸಿಸ್ ಬ್ಯಾಂಕ್ ಶೇ.1.65 ಶುಲ್ಕ ಮತ್ತು ತೆರಿಗೆಗಳನ್ನು ವಿಧಿಸುತ್ತದೆ.

ರೈಲ್ವೆ ಟಿಕೆಟ್ ಬುಕ್ ಮಾಡಲು ಡೆಬಿಟ್ ಕಾರ್ಡ್‌ಗಳು ಬಳಕೆಯಾದ ಸಂದರ್ಭದಲ್ಲಿ ಎಕ್ಸಿಸ್ ಮತ್ತು ಎಚ್‌ಡಿಎಫ್‌ಸಿಯಂತಹ ಬ್ಯಾಂಕುಗಳು ಯಾವುದೇ ಶುಲ್ಕಗಳನ್ನು ವಿಧಿಸುವುದಿಲ್ಲ. ಎಸ್‌ ಬಿಐ, ಸಿಟಿಬ್ಯಾಂಕ್, ಯೂನಿಯನ್ ಬ್ಯಾಂಕ್‌ ನಂತಹ ಕೆಲವು ಬ್ಯಾಂಕ್‌ಗಳು ಮತ್ತು ಪೇಟಿಎಂನಂತಹ ವ್ಯಾಲೆಟ್‌ಗಳು ಒಂದು ಲ.ರೂ.ವರೆಗಿನ ವಹಿವಾಟುಗಳಿಗೆ ಯಾವುದೇ ಶುಲ್ಕಗಳನ್ನು ವಿಧಿಸುವುದಿಲ್ಲ.

► ನೆಟ್ ಬ್ಯಾಂಕಿಂಗ್ ವಹಿವಾಟು ಶುಲ್ಕಗಳು:

ಎಸ್‌ಬಿಐ,ಫೆಡರಲ್,ಅಲಹಾಬಾದ್, ಆ್ಯಕ್ಸಿಸ್, ಎಚ್‌ಡಿಎಫ್‌ಸಿ, ವಿಜಯಾ, ಓಸಿಬಿ, ಆಂಧ್ರ, ಕೋಟಕ್ ಮಹೀಂದ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ,ಐಸಿಐಸಿಐ ಮತ್ತು ಇಂಡಸ್‌ಇಂಡ್‌ನಂತಹ ಬ್ಯಾಂಕುಗಳು ರೈಲ್ವೆ ಟಿಕೆಟ್ ಬುಕಿಂಗ್‌ಗೆ 10ರೂ.ವಹಿವಾಟು ಶುಲ್ಕ ಮತ್ತು ತೆರಿಗೆಗಳನ್ನು ವಿಧಿಸುತ್ತವೆ. ಅಲ್ಲದೆ, ಐಆರ್‌ಸಿಟಿಸಿ ಕೂಡ ತನ್ನ ನೆಟ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇಷ್ಟೇ ಶುಲ್ಕವನ್ನು ವಿಧಿಸುತ್ತದೆ. ಯೂನಿಯನ್,ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್, ಕಾರ್ಪೊರೇಷನ್, ಸಿಂಡಿಕೇಟ್ ಮತ್ತು ಪಿಎನ್‌ಬಿಯಂತಹ ಕೆಲವು ಬ್ಯಾಂಕುಗಳು ನೆಟ್ ಬ್ಯಾಂಕಿಂಗ್ ಬಳಸಿ ರೈಲ್ವೆ ಟಿಕೆಟ್ ಬುಕಿಂಗ್‌ಗಾಗಿ ಪ್ರತಿ ವಹಿವಾಟಿಗೆ 10 ರೂ.ಶುಲ್ಕವನ್ನು ಮಾತ್ರ ವಿಧಿಸುತ್ತವೆ. ಅವು ಯಾವುದೇ ತೆರಿಗೆಗಳನ್ನು ವಿಧಿಸುವುದಿಲ್ಲ. ರೈಲ್ವೆ ಟಿಕೆಟ್ ಬುಕಿಂಗ್‌ಗಾಗಿ ನೀವು ಕರೂರ ವೈಶ್ಯ, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಸೌತ್ ಇಂಡಿಯನ್ ಬ್ಯಾಂಕ್‌ಗಳ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿಕೊಂಡರೆ ಯಾವುದೇ ವಹಿವಾಟು ಶುಲ್ಕ ಮತ್ತು ತೆರಿಗೆಗಳನ್ನು ವಿಧಿಸಲಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News