ಅಧಿಕಾರಕ್ಕಾಗಿ ಇಂತಹ ಕೀಳು ರಾಜಕೀಯ ಬೇಕಿತ್ತೇ?

Update: 2019-02-12 18:32 GMT

ಮಾನ್ಯರೇ,

ಒಂದೆಡೆ ರಾಜ್ಯ ಮೈತ್ರಿ ಸರಕಾರವನ್ನು ಉರುಳಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಹೇಗಾದರೂ ಮಾಡಿ ಅಧಿಕಾರದ ಗದ್ದುಗೆಗೇರಲು ಆ ಪಕ್ಷದ ನಾಯಕ ಯಡಿಯೂರಪ್ಪತಂತ್ರವನ್ನು ರೂಪಿಸುತ್ತಿದ್ದಾರೆ.

ಇದರ ಮುಂದುವರಿದ ಭಾಗವಾಗಿಯೇ ಯಡಿಯೂರಪ್ಪರ ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಆಡಿಯೊ ತುಣುಕು ಮೊನ್ನೆ ಬಹಿರಂಗೊಂಡಿದೆ. ಈ ಸುದ್ದಿ ರಾಜ್ಯದೆಲ್ಲೆಡೆ ಕಾಡ್ಗಿಚ್ಚಿನಂತೆ ಹರಡಿಕೊಂಡಾಗ ‘‘ಆಡಿಯೊ ಧ್ವನಿ ನನ್ನದೆನ್ನುವುದು ಸಾಬೀತಾದರೆ ರಾಜಕೀಯ ನಿವೃತ್ತಿಯಾಗುತ್ತೇನೆ’’ ಎಂದು ಅವರು ಘೋಷಿಸಿದ್ದು ಮಾತ್ರವಲ್ಲ ‘‘ಇದು ಮಿಮಿಕ್ರಿ’’ ಎಂದು ತನ್ನ ಮಾತನ್ನು ಸಮರ್ಥಿಸಿಕೊಂಡಿದ್ದರು.

ಆದರೆ ಮರುದಿನ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ,‘‘ಆಡಿಯೊ ಧ್ವನಿ ನನ್ನದೇ’’ ಎಂದು ತಪ್ಪೊಪ್ಪಿಕೊಂಡು ತಮ್ಮವರು ಮುಜುಗರ ಪಡುವಂತೆ ಮಾಡಿದ್ದರು.

ನಿರಂತರ ಸುಳ್ಳು ಹೇಳುತ್ತಲೇ ಬಂದು ಕೊನೆಗೆ ಒಂದಿಲ್ಲೊಂದು ದಿನ ಸುಳ್ಳು ಸತ್ಯವಾಗಲಿದೆ ಎನ್ನುವ ನಂಬಿಕೆ ಇಟ್ಟುಕೊಂಡು ಅಡಾಲ್ಫ್ ಹಿಟ್ಲರನ ರಾಜಕೀಯ ಮಾಡುತ್ತಿರುವವರಿಗೆ ಇದೆಲ್ಲಾ ಮಾಮೂಲಿ ಸುಳ್ಳು ಆಗಿತ್ತಾದರೂ ಕೇಳುಗರಿಗೆ ಮಾತ್ರ ನಾಚಿಕೆಯನ್ನುಂಟು ಮಾಡಿರುವುದು ಸತ್ಯ.

ಯಡಿಯೂರಪ್ಪ ಒಬ್ಬ ಸಜ್ಜನ ವ್ಯಕ್ತಿತ್ವದ ರಾಜಕಾರಣಿ ಆಗಿದ್ದೇ ಆದಲ್ಲಿ ನುಡಿದಂತೆ ನಡೆದು ರಾಜಕೀಯ ನಿವೃತ್ತಿ ಪಡೆಯಬೇಕಿತ್ತು. ಅಧಿಕಾರಕ್ಕಾಗಿ ಚಡಪಡಿಸುತ್ತಿರುವ ಇವರು ಈ ಹಿಂದೆಯೂ ಹಲವು ಬಾರಿ ಸುಳ್ಳಿನ ಬಾಂಬ್ ಸಿಡಿಸಿಕೊಂಡು ತಪ್ಪಿಸಿಕೊಂಡಿದ್ದಾರೆ. ಹಿಂದೆ ಬಿಜೆಪಿ ಬಿಟ್ಟು ಕೆಜೆಪಿ ಎಂಬ ಹೊಸ ಪಕ್ಷ ಕಟ್ಟಿಕೊಂಡಾಗ ಖಾಸಗಿ ಟಿವಿ ಸಂದರ್ಶನದಲ್ಲಿ ಒಮ್ಮೆಯೂ ಬಿಜೆಪಿಗೆ ತಿರುಗಿ ನೋಡಲಾರೆ ಎಂಬ ಹೇಳಿಕೆ ಕೊಟ್ಟಿರುವ ಅವರ ಮಾತಿನ ಶಬ್ದ ಬಹುಶಃ ಕನ್ನಡಿಗರ ಕಿವಿಗಳಲ್ಲಿ ಇಂದಿಗೂ ಅನುರಣಿಸುತ್ತಿರಬಹುದು.

ಅಧಿಕಾರಕ್ಕಾಗಿ ಸುಳ್ಳಿನಿಂದ ಸಾಮ್ರಾಜ್ಯ ಕಟ್ಟಲು ಪ್ರಯತ್ನಿಸುತ್ತಿರುವ ಇಂತಹ ರಾಜಕಾರಣಿಗಳಿಂದ ರಾಜ್ಯಕ್ಕೆ ಮುಂದಿನ ಚುನಾವಣೆಯಲ್ಲಾದರೂ ಮುಕ್ತಿ ಸಿಕ್ಕೀತೇ?!

-ಇಸ್ಹಾಖ್ ಸಿ.ಐ.  ಫಜೀರ್

Similar News