ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಕೆ: ಹಾಕಿ ದಂತಕತೆ ಮುಕೇಶ್ ವಿರುದ್ಧ ಎಫ್‌ಐಆರ್ ದಾಖಲು

Update: 2019-02-13 06:42 GMT

ಹೈದರಾಬಾದ್, ಫೆ.13: ಭಾರತದ ಮಾಜಿ ಹಾಕಿ ನಾಯಕ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಎನ್.ಮುಕೇಶ್ ಕುಮಾರ್ ಮೈದಾನದ ಹೊರಗೆ ಗಳಿಸಿದ ಸ್ವಯಂ ಗೋಲು ಅವರಿಗೇ ಉರುಳಾಗುವ ಸಾಧ್ಯತೆಯಿದೆ.

ಭಾರತದ ಪರ 307 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿ 80 ಗೋಲುಗಳನ್ನು ಗಳಿಸಿರುವ ಮುಕೇಶ್ ವಿರುದ್ಧ ಸಿಕಂದರಾಬಾದ್ ತಹಶೀಲ್ದಾರರಿಂದ ಎಸ್‌ಸಿ ಮಾಲಾ ನಕಲಿ ಜಾತಿ ಪ್ರಮಾಣಪತ್ರ ಪಡೆದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಎರಡು ವಾರಗಳ ಹಿಂದೆ ಜ.25ರಂದು ಮುಕೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಮುಕೇಶ್‌ರ ಸಹೋದರ ಎನ್. ಸುರೇಶ್ ಕುಮಾರ್ ವಿರುದ್ಧವೂ ನಕಲಿ ಜಾತಿ ಪ್ರಮಾಣಪತ್ರ ಪಡೆದು ಇಂಡಿಯನ್ ಏರ್‌ಲೈನ್ಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಆರೋಪವಿದೆ.

ಈ ಇಬ್ಬರ ವಿರುದ್ಧ ಬೊವೆಲ್‌ಪಾಲ್ಲಿ ಪೊಲೀಸ್ ಠಾಣೆಯಲ್ಲಿ ನಕಲಿ ದಾಖಲೆಯನ್ನು ಅಸಲಿ ಎಂದು ಹೇಳಿ ವಂಚನೆ ಮಾಡಿರುವ ಬಗ್ಗೆ ಎಫ್‌ಐಆರ್ ದಾಖಲಾಗಿದೆ.

 ಮೂರು ಬಾರಿ ಒಲಿಂಪಿಯನ್ ಮಹೇಶ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದು , ಮಹೇಶ್ ಹಾಗೂ ಸುರೇಶ್ ಎಸ್‌ಸಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಇಂಡಿಯನ್ ಏರ್‌ಲೈನ್ಸ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. 2007ರಲ್ಲಿ ಇಂಡಿಯನ್ ಏರ್‌ಲೈನ್ಸ್ ಜಾಗೃತ ವಿಭಾಗ ಹೈದರಾಬಾದ್ ಜಿಲ್ಲಾಧಿಕಾರಿಗೆ ಮುಕೇಶ್ ಹಾಗೂ ಸುರೇಶ್ ಸಲ್ಲಿಸಿರುವ ಜಾತಿ ಪ್ರಮಾಣಪತ್ರದ ಬಗ್ಗೆ ತನಿಖೆ ನಡೆಸುವಂತೆ ಕೇಳಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News