ಹೊಸ ಬೈಕ್, ದುಬಾರಿ ಫೋನ್ ಕೊಡಿಸಿಲ್ಲವೆಂದು ತಾಯಿಗೇ ಬೆಂಕಿ ಹಚ್ಚಿದ ಪುತ್ರ !

Update: 2019-02-13 07:27 GMT

ಕೊಲ್ಕತ್ತಾ, ಫೆ. 13: ತನ್ನ ಹೊಸ ಬೈಕ್ ಮತ್ತು ದುಬಾರಿ ಸೆಲ್ ಫೋನ್ ಬೇಡಿಕೆಯನ್ನು ಈಡೇರಿಸಲು ನಿರಾಕರಿಸಿದ ತಾಯಿಯನ್ನು 17 ವರ್ಷದ ಪುತ್ರ  ಕೋಣೆಯಲ್ಲಿ ಕೂಡಿ ಹಾಕಿ ಬೆಂಕಿ  ಹಚ್ಚಿ ಸಾಯಿಸಲು ಯತ್ನಿಸಿದ ಆಘಾತಕಾರಿ ಘಟನೆ ನ್ಯೂ ಟೌನ್ ನ ಜಗತಪುರ್ ಎಂಬಲ್ಲಿ  ಸೋಮವಾರ ರಾತ್ರಿ ನಡೆದಿದೆ.

ಸುಮಾರು 10.30ಕ್ಕೆ ಈ  ಘಟನೆ ನಡೆದಿದ್ದು  ಬೊಬ್ಬೆ ಕೇಳಿ ನೆರೆಮನೆಯವರು ಬಾಗಿಲು ತೆರೆದು ಪರಾರಿಯಾಗುವ ಮುಂಚೆ ಹುಡುಗನನ್ನು ಹಿಡಿದರಲ್ಲದೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಈ ವರ್ಷ ಮಾಧ್ಯಮಿಕ್ ಬಂಗಾಳಿ ಪರೀಕ್ಷೆಗೆ ಹಾಜರಾಗಲಿದ್ದ.

ಆತನ ತಾಯಿ ಸೋಮಾ ಮನ್ನಾ (40) ಶೇ 90 ಸುಟ್ಟು ಗಾಯಗಳೊಂದಿಗೆ ಪಿಜಿಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ಮಗನೇ ತನಗೆ ಬೆಂಕಿ ಹಚ್ಚಿದ್ದ ಎಂದು ಆಕೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಬಾಲಕನನ್ನು ಬಾಲಾಪರಾಧಿಗಳ ರಿಮಾಂಡ್ ಹೋಂಗೆ ಕಳುಹಿಸಲಾಗಿದೆ.

ನೆರೆಮನೆಯವರು ನೋಡಿದಾಗ ಸೋಮಾ ಅವರ ತಲೆಯಿಂದ ಸೊಂಟದವರೆಗೆ ಬೆಂಕಿ ಹತ್ತಿಕೊಂಡಿತ್ತಲ್ಲದೆ ಆಕೆ ನೋವಿನಿಂದ ಅತ್ತಿತ್ತ ಓಡಾಡುತ್ತಿದ್ದರು. ಕೊನೆಗೆ ಬೆಡ್ ಶೀಟುಗಳನ್ನು ಬಳಸಿ ಬೆಂಕಿಯನ್ನು ನಂದಿಸಲಾಗಿತ್ತು.

ಪತಿಯಿಂದ ಪ್ರತ್ಯೇಕಗೊಂಡಿದ್ದ  ಮಹಿಳೆ ಕಳೆದ ಎಂಟು ತಿಂಗಳುಗಳಿಂದ ಒಂದು ಕೊಠಡಿಯ ಮನೆಯಲ್ಲಿ ತನ್ನ ಕಿರಿಯ ಪುತ್ರನೊಂದಿಗೆ ವಾಸವಾಗಿದ್ದರು. ಆಕೆಯ ಹಿರಿಯ ಪುತ್ರ ತಂದೆಯೊಂದಿಗೆ ಹತ್ತಿರದ ಕಾಲನಿಯಲ್ಲಿ ವಾಸವಾಗಿದ್ದ. ಆಕೆ ಜಗತ್ಪುರದಲ್ಲಿ ಸಣ್ಣ ಜವುಳಿ ಮಳಿಗೆಯನ್ನು ನಡೆಸುತ್ತಿದ್ದರು.

ತನ್ನ ಮಗನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಆಕೆ ಪರೀಕ್ಷೆ ಮುಗಿದ ನಂತರ ಬೈಕ್ ಕೊಡಿಸುವುದಾಗಿ ತಿಳಿಸಿದ್ದರೂ ಇದೇ ವಾರ ಬೇಕೆಂದು ಆತ ಹಠ ಹಿಡಿದಿದ್ದನೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News